ಬೆಂಗಳೂರು: ಮಂಡ್ಯ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವಂತೆ ಮಂಡ್ಯ ಜನರು ಒತ್ತಾಯ ಮಾಡಿದ್ದು, ಜನರ ಅಭಿಪ್ರಾಯವನ್ನು ಸಿದ್ದರಾಮ್ಯಯ ಅವರಿಗೆ ಮಾಹಿತಿ ತಿಳಿಸಿದ್ದೇನೆ. ಜನರ ಅಪೇಕ್ಷೆಗಳನ್ನು ಅವರ ಮುಂದಿಟ್ಟಿದ್ದು, ಇದು ನನ್ನ ಕರ್ತವ್ಯ ಆಗಿತ್ತು ಅಷ್ಟೇ. ಅದಕ್ಕೆ ಸರ್ಕಾರದ ಸಮನ್ವಯ ಸಮಿತಿಯ ನಾಯಕರಾದ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದೇನೆ ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ.
ಸಿದ್ದರಾಮಯ್ಯ ಅವರನ್ನು ಕಾವೇರಿ ನಿವಾಸದಲ್ಲಿ ಭೇಟಿ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸುಮಲತಾ ಅವರು, ಮಂಡ್ಯ ಅಭಿಮಾನಿಗಳು ಸಾಕಷ್ಟು ಒತ್ತಾಯ ಮಾಡಿದ್ದಾರೆ. ನಾನು ಈ ಬಗ್ಗೆ ಯೋಚನೆಯೇ ಮಾಡಿರಲಿಲ್ಲ. ಆದರೆ ಜನರು ತಮಗಾಗಿ ಈ ಕಾರ್ಯ ಮಾಡಿ ಎಂದು ಕೇಳಿದ್ದಾರೆ. ನಮ್ಮ ಇಡೀ ಕುಟುಂಬ ಅವರಿಗೆ ಋಣಿಯಾಗಿದೆ. ಅಂಬರೀಶ್ ಅವರು ಕಾಂಗ್ರೆಸ್ ಪಕ್ಷದಲ್ಲಿ ಇದ್ದ ಕಾರಣ ಹಿರಿಯ ನಾಯಕ ಸಿದ್ದರಾಮಯ್ಯ ಅವರ ಅಭಿಪ್ರಾಯ ಕೇಳಿದ್ದೇನೆ. ಅದ್ದರಿಂದಲೇ ನಾನು ಇಲ್ಲಿಯವರೆಗೂ ಬಂದಿದ್ದೇನೆ. ಇದಕ್ಕೆಲ್ಲಾ ಜನರ ಒತ್ತಾಯವೇ ಕಾರಣ. ಪಕ್ಷ ಯಾವ ನಿರ್ಧಾರ ಮಾಡುತ್ತಾರೆ ಎನ್ನುವುದು ನಾನು ತಿಳಿದುಕೊಂಡು ಮುಂದೆ ಬರಬೇಕಿದೆ. ಇಲ್ಲವಾದಲ್ಲಿ ಸುಮ್ಮನೆ ಮುಂದುವರಿದರೆ ಜನರಿಗೆ ಉತ್ತಮ ಸಂದೇಶ ಹೋಗುವುದಿಲ್ಲ. ಆದ್ದರಿಂದ ಈ ಭೇಟಿ ಮಾಡಿದ್ದೇನೆ ಎಂದರು.
ಸಮ್ಮಿಶ್ರ ಸರ್ಕಾರ ರಚನೆ ಆಗಿರುವ ಕಾರಣ ಜೆಡಿಎಸ್ ಪಕ್ಷಕ್ಕೆ ಮಂಡ್ಯ ಕ್ಷೇತ್ರವನ್ನು ಬಿಟ್ಟುಕೊಟ್ಟರೆ ನಿಮ್ಮ ನಡೆ ಏನು ಪ್ರಶ್ನೆಗೆ ಉತ್ತರಿಸಿದ ಸುಮಲತಾ ಅವರು, ಪಕ್ಷದ ನಿರ್ಧಾರಕ್ಕೆ ಈ ವಿಚಾರವನ್ನು ಬಿಟ್ಟಿದ್ದೇನೆ. ಅವರು ಪಕ್ಷದಲ್ಲಿ ಸ್ಪರ್ಧೆ ಮಾಡಲು ಸಾಧ್ಯವಾಗಿಲ್ಲ ಎಂದರೆ ಮುಂದಿನ ಹಂತದಲ್ಲಿ ಏನು ಮಾಡಬೇಕು ಎಂದು ಜನರ ಬಳಿಯೇ ಕೇಳುತ್ತೇನೆ. ಅಲ್ಲದೇ ಸ್ವತಂತ್ರ ಅಭ್ಯರ್ಥಿಯಾಗಿ ಆಗುವ ಬಗ್ಗೆಯೂ ಜನರೇ ನಿರ್ಧಾರ ಮಾಡುತ್ತಾರೆ. ಈಗಾಗಲೇ ನಾನು ಈ ಬಗ್ಗೆ ಏನು ಹೇಳಲು ಸಾಧ್ಯವಿಲ್ಲ. ಮಂಡ್ಯ ಜನರ ಅಭಿಪ್ರಾಯವೇ ಅಂತಿಮವಾಗುತ್ತದೆ ಎಂದರು.
ನನ್ನ ಅಭಿಪ್ರಾಯವನ್ನು ಕೇಳಿದ ಸಿದ್ದರಾಮಯ್ಯ ಅವರು ಈ ಬಗ್ಗೆ ಯೋಚನೆ ಮಾಡುವುದಾಗಿ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ಅಭಿಪ್ರಾಯ ಏನಿದೆ ಎಂಬುದನ್ನು ತಿಳಿದುಕೊಳ್ಳಬೇಕಿದೆ. ಹೀಗಾಗಿ ನಾನು ಯಾರನ್ನು ಒತ್ತಾಯ ಮಾಡಲ್ಲ. ನಾಳೆ ನಾನು ಮಂಡ್ಯ ಯೋಧ ಗುರು ಅವರ ಕುಟುಂಬವನ್ನು ಭೇಟಿ ಮಾಡುತ್ತಿದ್ದೇನೆ. ಇದು ಯಾವುದೇ ಕಾರಣಕ್ಕೂ ರಾಜಕೀಯ ಅಲ್ಲ. ಈ ಹಿಂದೆ ಮಾತು ಕೊಟ್ಟಿರುವಂತೆ ಅವರಿಗೆ ಸಹಾಯ ಮಾಡುವ ಉದ್ದೇಶ ಮಾತ್ರ ನನ್ನದು. ನಾಳೆ ನಾನು ಹೋಗುವುದು ವೀರ ಯೋಧರ ಮನೆಗೆ ಮಾತ್ರ ಎಂದು ಸ್ಪಷ್ಟಪಡಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv