ಬೆಂಗಳೂರು: ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ನಟಿಸುತ್ತಿರುವ ‘ಅಮರ್’ ಚಿತ್ರ ಇಂದು ಬಿಡುಗಡೆಯಾಗಿದ್ದು, ಮಗನ ಸಿನಿಮಾದ ಕೆಲವು ದೃಶ್ಯಗಳನ್ನ ಸುಮಲತಾ ಅವರು ಅಭಿಮಾನಿಗಳೊಂದಿಗೆ ಕುಳಿತು ನೋಡಿದ್ದಾರೆ.
‘ಅಮರ್’ ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಸುಮಲತಾ ಅವರು ಬೆಂಗಳೂರಿನ ನರ್ತಕಿ ಚಿತ್ರಂದಿರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಮಗನ ಸಿನಿಮಾದ ಕೆಲವು ದೃಶ್ಯಗಳನ್ನು ಅಭಿಮಾನಿಗಳೊಂದಿಗೆ ಕುಳಿತು ನೋಡಿದರು. ಆ ಬಳಿಕ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಅವರು, ನಿನ್ನೆಯಷ್ಟೇ ಪೂರ್ಣ ಸಿನಿಮಾವನ್ನು ಕುಟುಂಬದೊಂದಿಗೆ ನೋಡಿದ್ದೆ. ಇಂದು ಅಭಿಮಾನಿಗಳ ಭೇಟಿಗೆ ಆಗಮಿಸಿದ್ದೆ. ಅಂಬರೀಶ್ ಅಭಿಮಾನಿಗಳ ಪ್ರೀತಿ ‘ಅಮರ್’ ಇಷ್ಟೊಂದು ಒಳ್ಳೆ ಒಪನಿಂಗ್ ಪಡೆದಿದೆ. ಸಿನಿಮಾದ ಕೆಲವು ದೃಶ್ಯಗಳಲ್ಲಿ ಅಂಬರೀಶ್ ನೆನಪಾಗುತ್ತಾರೆ. ಅವರು ಗಳಿಸಿದ ಪ್ರೀತಿಯನ್ನು ಅಭಿಷೇಕ್ ಗಳಿಸಲು ಸಾಕಷ್ಟು ಪ್ರಯತ್ನ ಪಡಬೇಕಿದೆ ಎಂದರು.
ಮೊದಲ ಸಿನಿಮಾ ನನಗೆ ಇನ್ನು ಅಭಿ ಚಿಕ್ಕವನಂತೆ ಕಾಣುತ್ತಾರೆ. ಆದ್ದರಿಂದಲೇ ಅವರ ಮೊದಲ ಹೆಜ್ಜೆ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ನನ್ನ ಪರೀಕ್ಷೆಯಲ್ಲಿ ನಾನು ಪಾಸ್ ಆಗಿದ್ದೆ, ಇಂದು ಅಭಿಷೇಕ್ ನಿನ್ನ ಪರೀಕ್ಷೆ ಎಂದು ಹೇಳಿದ್ದೆ. ಇದರಲ್ಲೂ ಅಭಿ ಪಾಸ್ ಆಗಿದ್ದು, ಅಂಬರೀಶ್ ಅವರ ಅಭಿಮಾನಿಗಳ ಪ್ರೀತಿಗೆ ಉತ್ತಮ ಪ್ರಾರಂಭ ಸಿಕ್ಕಿದೆ ಎಂದರು. ಇತ್ತ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದ ಅಭಿಷೇಕ್ ಅವರು, ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸಿ ಸಂತಸ ಹಂಚಿಕೊಂಡರು.
ಸಿನಿಮಾ ಬಿಡುಗಡೆ ಮುನ್ನ ಸ್ಯಾಂಡಲ್‍ವುಡ್ ನಟರಾದ ದರ್ಶನ್, ಸುದೀಪ್, ಉಪೇಂದ್ರ ಸೇರಿದಂತೆ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ, ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಭಾರತ ತಂಡದ ಕ್ರಿಕೆಟ್ ಆಟಗಾರ ಕೆ.ಎಸ್ ರಾಹುಲ್ ಶುಭ ಕೋರಿದ್ದರು. ರಾಜ್ಯಾದ್ಯಂತ ಅಭಿಷೇಕ್ ಅಭಿನಯದ ಅಮರ್ ಸಿನಿಮಾ ಸುಮಾರು 300ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದೆ. ಚಿತ್ರಕ್ಕೆ ನಾಗಶೇಖರ್ ಅವರ ನಿರ್ದೇಶನವಿದ್ದು, ತಾನ್ಯ ಹೋಪ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಸಂದೇಶ್ ನಾಗರಾಜ್ ನಿರ್ಮಾಣದಲ್ಲಿ ‘ಅಮರ್’ ಸಿನಿಮಾ ಮೂಡಿಬಂದಿದೆ.