– ಬಿಜೆಪಿಗೆ ಬಾಹ್ಯಬೆಂಬಲ ಸಾಧ್ಯತೆ!
ಬೆಂಗಳೂರು: ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಹಾಕಿರುವ ಸವಾಲನ್ನು ಮಂಡ್ಯ ಕ್ಷೇತ್ರದ ನೂತನ ಸಂಸದೆ ಸುಮಲತಾ ಅಂಬರೀಶ್ ಸ್ವೀಕರಿಸಿದ್ದಾರೆ.
ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪರ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸುಮಲತಾ ಅಂಬರೀಶ್, ಕೆಲಸದ ವಿಚಾರದಲ್ಲಿ ಮಂಡ್ಯ ಜಿಲ್ಲೆಯ ರೈತರಿಗೆ ನಾನು ಮೊದಲು ಆದ್ಯತೆ ನೀಡುತ್ತೇನೆಂದು ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದೇನೆ. ನಾಲೆಗಳಿಗೆ ನೀರು ಬಿಡುವ ಕುರಿತಾಗಿ ಎಲ್ಲರ ಮಾರ್ಗದರ್ಶನ ಪಡೆದುಕೊಂಡು ಕೆಲಸ ಮಾಡುತ್ತೇನೆ. ರೈತರ ಬೆಳೆಗಳಿಗೆ ಸರಿಯಾದ ಸಮಯದಲ್ಲಿ ನೀರು ಹರಿಸೋದು ನನ್ನ ಮೊದಲ ಕರ್ತವ್ಯವಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ನೂತನ ಸಂಸದೆ ಸುಮಲತಾಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಸವಾಲು
Advertisement
Advertisement
ಇದೇ ವೇಳೆ ಬಿಜೆಪಿ ಸೇರ್ಪಡೆಯ ಕುರಿತು ಮಾತನಾಡಿದ ಸುಮಲತಾ ಅಂಬರೀಶ್, ಚುನಾವಣೆಯಲ್ಲಿ ಎಲ್ಲ ಪಕ್ಷದವರು ನನಗೆ ಬೆಂಬಲ ನೀಡಿದ್ದರು. ಹಾಗೆಯೇ ಬಿಜೆಪಿ ಬೇಷರತ್ ಬೆಂಬಲ ನೀಡುವ ಮೂಲಕ ತಮ್ಮ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ. ಹಾಗಾಗಿ ಬೆಂಬಲ ನೀಡಿದ ನಾಯಕರಿಗೆ ಧನ್ಯವಾದ ಸಲ್ಲಿಸಲು ಬಂದಿದ್ದೇನೆ. ಗೆಲುವು ಸಾಧಿಸಿದ ಪಕ್ಷೇತರ ಅಭ್ಯರ್ಥಿ ಪಕ್ಷ ಸೇರುವ ಅವಕಾಶ ಸಂವಿಧಾನವಿಲ್ಲ. ಕೇವಲ ಬಾಹ್ಯ ಬೆಂಬಲ ನೀಡಲು ಮಾತ್ರ ಸಾಧ್ಯ. ಹಾಗಾಗಿ ಮಂಡ್ಯ ಅಭಿವೃದ್ಧಿಗೆ ಯಾವುದು ಒಳಿತು ಎಂಬುದನ್ನು ಎಲ್ಲರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು.
Advertisement
Advertisement
ಮುಂದಿನ ದಿನಗಳಲ್ಲಿ ಮಂಡ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳ ಪ್ರವಾಸಕೈಗೊಂಡು ನನ್ನ ಮುಂದಿನ ನಡೆಯ ಬಗ್ಗೆ ಎಲ್ಲ ಕಾರ್ಯಕರ್ತರೊಂದಿಗೆ ಚರ್ಚಿಸುತ್ತೇನೆ ಎಂದು ತಿಳಿಸಿದರು. ಬಿ.ಎಸ್.ಯಡಿಯೂರಪ್ಪವರ ನಿವಾಸದಿಂದ ನೇರವಾಗಿ ಮಾಜಿ ಸಿಎಂ ಎಸ್.ಎಂ.ಕೃಷ್ಣ ನಿವಾಸಕ್ಕೆ ತೆರಳಿದರು.
ಸುಮಲತಾ ಅಂಬರೀಶ್ ಬರೋದಕ್ಕಿಂತ ಮೊದಲೇ ಎಸ್.ಎಂ.ಕೃಷ್ಣ ನಿವಾಸದಲ್ಲಿ ಕಾಂಗ್ರೆಸ್ ಅತೃಪ್ತ ಶಾಸಕರಾದ ರಮೇಶ್ ಜಾರಕಿಹೊಳಿ ಮತ್ತು ಸುಧಾಕರ್ ಇದ್ದಾರೆಂಬ ಮಾಹಿತಿಗಳು ಲಭ್ಯವಾಗಿದೆ. ಕೃಷ್ಣ ಅವರ ನಿವಾಸದಲ್ಲಿಯೇ ಮೈತ್ರಿ ಸರ್ಕಾರದ ಅಳಿವು-ಉಳಿವಿನ ಬಗ್ಗೆ ಚರ್ಚೆ ನಡೆಸುತ್ತಾರೆ ಎನ್ನಲಾಗುತ್ತಿದೆ.