ಕಲಬುರಗಿ: ಚಾಮರಾಜನಗರದ ಸುಳ್ವಾಡಿ ಮಾರಮ್ಮನ ದೇವಸ್ಥಾನವನ್ನು ಮುಜರಾಯಿ ವ್ಯಾಪ್ತಿಗೆ ಸೇರಿಸಲು ನಿರ್ಧರಿಸಲಾಗಿದೆ ಎಂದು ಮುಜರಾಯಿ ಖಾತೆಯ ಸಚಿವ ರಾಜಶೇಖರ ಪಾಟೀಲ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಳ್ವಾಡಿ ದೇಗುಲದ ವಿಷ ಪ್ರಸಾದ ಸೇವನೆ ಪ್ರಕರಣದಿಂದಾಗಿ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಹೀಗಾಗಿ ಸುಳ್ವಾಡಿ ಮಾರಮ್ಮ ದೇವಾಸ್ಥಾನವನ್ನು ಮುಜರಾಯಿ ವ್ಯಾಪ್ತಿಗೆ ಸೇರಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ಈಗಾಗಲೇ ತಹಶೀಲ್ದಾರ್ ದೇವಸ್ಥಾನದ ಸರ್ವೇ ಕಾರ್ಯವನ್ನು ಸಹ ಮಾಡಿ ಮುಗಿಸಿದ್ದಾರೆ. ಇದರ ಜೊತೆ ಗ್ರಾಮಸ್ಥರು ಸಹ ದೇವಾಲಯವನ್ನು ಮುಜರಾಯಿ ಇಲಾಖೆಗೆ ಸೇರಿಸಬೇಕೆಂದು ಬೇಡಿಕೆಯಿಟ್ಟಿದ್ದಾರೆ. ಹೀಗಾಗಿ ಕೂಡಲೇ ಕಿಚ್‍ಗುತ್ ಮಾರಮ್ಮ ದೇವಾಲಯವನ್ನು ಶೀಘ್ರವೇ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ತರುತ್ತೇವೆಂದು ಹೇಳಿದ್ದಾರೆ.
ಏನಿದು ಪ್ರಕರಣ?
ಡಿಸೆಂಬರ್ 14ರ ಶುಕ್ರವಾರದಂದು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಲ್ವಾಡಿ ಗ್ರಾಮದ ಕಿಚ್‍ಗುತ್ ಮಾರಮ್ಮ ದೇವಸ್ಥಾನದಲ್ಲಿ ಗೋಪುರದ ಶಂಕುಸ್ಥಾಪನೆ ಕಾರ್ಯಕ್ರಮ ನೇರವೇರಿತ್ತು. ಪೂಜೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದ್ದ ಬಳಿಕ, ಭಕ್ತರು ಪ್ರಸಾದದ ರೂಪದಲ್ಲಿ ರೈಸ್ ಬಾತ್ ಸೇವಿಸಿದ್ದರು. ಆದರೆ ಸ್ವಲ್ಪ ಸಮಯದ ನಂತರ ರೈಸ್ ಬಾತ್ ಸೇವಿಸಿದ್ದ 100 ಕ್ಕೂ ಹೆಚ್ಚು ಜನರಿಗೆ ವಾಂತಿ ಭೇದಿ ಕಾಣಿಸಿಕೊಂಡು ಅಸ್ವಸ್ಥರಾಗಿ ಬಿದ್ದಿದ್ದರು. ಇದನ್ನು ಗಮನಿಸಿದ್ದ ಸ್ಥಳೀಯರು ಕೂಡಲೇ 108 ಆಂಬ್ಯುಲೆನ್ಸ್ ಗೆ ಕರೆ ಮಾಡಿ ಅಸ್ವಸ್ಥರನ್ನು ಆಸ್ಪತ್ರೆಗೆ ರವಾನಿಸಿದ್ದರು. ಅಸ್ವಸ್ಥರನ್ನು ಪರೀಕ್ಷಿಸಿದ್ದ ವೈದ್ಯರು, ಪ್ರಸಾದಲ್ಲಿ ವಿಷ ಬೆರೆತಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು. ಅಲ್ಲದೇ ವಿಧಿವಿಜ್ಞಾನ ವರದಿಯ ಪ್ರಕಾರ ಪ್ರಸಾದದಲ್ಲಿ ಆರ್ಗಾನ್ ಪಾಸ್ಫರಸ್ ಕಾಂಪೌಂಡ್ ಮೋನೋಕ್ರೋಟೋಫೋಸ್ ಎಂಬ ಕ್ರಿಮಿನಾಶಕ ಮಿಶ್ರಣವಾಗಿರುವುದಾಗಿ ಹೇಳಿತ್ತು. ಈ ಕ್ರಿಮಿನಾಶಕ ಮಿಶ್ರಣ ಮಾಡಿದ್ದ ಪ್ರಸಾದ ಸೇವಿಸಿದ್ದರ ಪರಿಣಾಮ ಇದುವರೆಗೂ 17 ಮಂದಿ ಮೃತಪಟ್ಟಿದ್ದರು.
ಘಟನೆಗೆ ಕಾರಣವೇನು?
ಸುಳ್ವಾಡಿ ದೇವಾಲಯದ ಟ್ರಸ್ಟ್ ನಲ್ಲಿ ಎರಡು ಬಣಗಳಿತ್ತು. ಟ್ರಸ್ಟ್ ಅಧ್ಯಕ್ಷರಾಗಿ ಇಮ್ಮಡಿ ಮಹದೇವಸ್ವಾಮೀಜಿ, ಸದಸ್ಯ ವಿ.ಮಾದಯ್ಯ, ವ್ಯವಸ್ಥಾಪಕ ಮಾದೇಶ್ ಒಂದು ಬಣವಾಗಿದ್ದರೆ, ಖಜಾಂಚಿ ನೀಲಕಂಠ ಶಿವಾಚಾರ್ಯ, ಉಪಾಧ್ಯಕ್ಷ ಪಿ.ಗುರುಮಲ್ಲಪ್ಪ, ಕಾರ್ಯದರ್ಶಿ ಶಶಿಬಿಂಬ, ಸದಸ್ಯರಾದ ಚಿನ್ನಪ್ಪಿ, ಪಿ.ಶಿವಣ್ಣ, ಎಚ್.ಲೋಕೇಶ್, ಎನ್.ಕೇಶವಮೂರ್ತಿ ಮತ್ತೊಂದು ಬಣವಾಗಿತ್ತು.
ಮಾರಮ್ಮ ದೇವಸ್ಥಾನಕ್ಕೆ ಇತ್ತೀಚೆಗೆ ಲಕ್ಷಾಂತರ ಆದಾಯ ಬರತೊಡಗಿತ್ತು. ಹರಕೆ ರೂಪದಲ್ಲಿ ಬಂದ ಚಿನ್ನಾಭರಣ ಹಾಗೂ ಹಣಕಾಸನ್ನು ಇಮ್ಮಡಿ ಮಹದೇವಸ್ವಾಮಿ ಕೊಂಡೊಯ್ಯುತ್ತಿದ್ದರು. ಇದು ಇನ್ನೊಂದು ಬಣಕ್ಕೆ ನುಂಗಲಾರದ ತುತ್ತಾಗಿತ್ತು. ಈ ಹಿನ್ನೆಲೆಯಲ್ಲಿ ಎರಡು ಬಣದ ನಡುವೆ ಗಲಾಟೆಗಳು ನಡೆಯುತ್ತಿದ್ದವು. ಈ ನಡುವೆ ದೇವಸ್ಥಾನದ ಆಡಳಿತವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಇಮ್ಮಡಿ ಸ್ವಾಮೀಜಿ ಪ್ರಯತ್ನ ನಡೆಸುತ್ತಿದ್ದ.
ಹೇಗಾದರೂ ಮಾಡಿ ಇನ್ನೊಂದು ಬಣಕ್ಕೆ ಕೆಟ್ಟ ಹೆಸರು ತರಬೇಕೆಂಬ ಕೆಟ್ಟ ಆಲೋಚನೆ ಇಮ್ಮಡಿ ಸ್ವಾಮೀಜಿಯದ್ದಾಗಿತ್ತು. ಆಗ ಪ್ರಸಾದಕ್ಕೆ ವಿಷ ಬೆರೆಸುವ ಕುತಂತ್ರ ಹೊಳೆದಿದೆ. ವಿಷಮಿಶ್ರಿತ ಪ್ರಸಾದ ಸೇವಿಸಿದವರು ವಾಂತಿ ಮಾಡಿ ಅಸ್ವಸ್ಥಗೊಳ್ಳುತ್ತಾರೆ. ಆಗ ಟ್ರಸ್ಟಿ ಚಿನ್ನಪ್ಪಿ ಹಾಗೂ ಇತರರಿಗೆ ಕೆಟ್ಟ ಹೆಸರು ಬರುತ್ತದೆ. ಇದರಿಂದಾಗಿ ದೇವಸ್ಥಾನ ಸಂಪೂರ್ಣವಾಗಿ ತಮ್ಮ ಆಡಳಿತಕ್ಕೆ ಒಳಪಡುತ್ತೆ ಎಂಬುದು ಸ್ವಾಮೀಜಿ ಪ್ಲಾನ್ ಮಾಡಿಕೊಂಡಿದ್ದ.
ಸ್ವಾಮೀಜಿ ಕೃತ್ಯಕ್ಕೆ ವ್ಯವಸ್ಥಾಪಕ ಮಾದೇಶ್, ಮಾದೇಶನ ಹೆಂಡತಿ ಅಂಬಿಕಾ (ಅಂಬಿಕಾ ಸ್ವಾಮೀಜಿಯ ಸಂಬಂಧಿಯೂ ಹೌದು). ಈ ಮೂವರು ಸೇರಿ ಪ್ರಸಾದಕ್ಕೆ ವಿಷ ಬೆರೆಸಲು ಸಂಚು ರೂಪಿಸಿದ್ದರು. ಕ್ರಿಮಿನಾಶಕ ತಂದು ನಾಗರಕೊಯೀಲು ದೇವಸ್ಥಾನದ ಅರ್ಚಕ ದೊಡ್ಡಯ್ಯನಿಂದ ಪ್ರಸಾದದಲ್ಲಿ ವಿಷ ಬೆರೆಸಿದ್ದರು. ಪ್ರಕರಣದ ತೀವ್ರತೆಯನ್ನು ಅರಿತ ಪೊಲೀಸರು ತೀವ್ರವಾಗಿ ತನಿಖೆ ನಡೆಸಿದಾಗ ಈ ನಾಲ್ವರು ಆರೋಪಿಗಳು ಬಲೆಗೆ ಬಿದ್ದಿದ್ದಾರೆ. ಸದ್ಯ ನಾಲ್ವರು ಆರೋಪಿಗಳನ್ನು ವಿಚಾರಣೆಗೊಳಪಡಿಸಿ, ಜೈಲಿಗೆ ಕಳುಹಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv