ಚಾಮರಾಜನಗರ: ಸುಳ್ವಾಡಿ ಕಿಚ್‍ಕುತ್ ಮಾರಮ್ಮ ದೇವಿ ಪ್ರಸಾದ ದುರಂತ ಪ್ರಕರಣದ ನಾಲ್ವರು ಆರೋಪಿಗಳನ್ನು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರು ನಾಲ್ಕು ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿದ್ದಾರೆ. ಮಾರಮ್ಮ ದೇವಾಲಯ ಪ್ರಸಾದ ಸೇವನೆಯಿಂದಾಗಿ 15 ಮಂದಿ ಮೃತಪಟ್ಟಿದ್ದರು. ಈ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಪ್ರಸಾದಕ್ಕೆ ವಿಷ ಪ್ರಾಶನ ಮಾಡಿದ್ದ ಪ್ರಮುಖ ರೂವಾರಿಗಳಾಗಿದ್ದ ಇಮ್ಮಡಿ ಮಹಾದೇವಸ್ವಾಮಿ, ಅಂಬಿಕಾ, ಮಹದೇವಸ್ವಾಮಿ ಹಾಗೂ ಮಾದೇಶ್ ಎಂಬ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಅಲ್ಲದೇ ಇಂದು ಸಂಜೆ ಕೊಳ್ಳೇಗಾಲದ ಅಂಬೇಡ್ಕರ್ ರಸ್ತೆಯಲ್ಲಿನ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಶ್ರೀಕಾಂತ್ ಅವರ ಮುಂದೆ ಆರೋಪಿಗಳನ್ನು ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ನಾಲ್ಕು ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿದ್ದಾರೆ.
ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ವಿಚಾರ ತಿಳಿಯುತ್ತಿದ್ದಂತೆ, ನ್ಯಾಯಾಧೀಶರ ಮನೆ ಮುಂದೆ ಜನರು ಜಮಾಯಿಸಿದ್ದರು. ಇದರ ಮಾಹಿತಿ ಪಡೆದ ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ನ್ಯಾಯಧೀಶರ ಮನೆ ಸುತ್ತ ಮುತ್ತ ಪೊಲೀಸ್ ಭದ್ರತೆಯನ್ನು ಹೆಚ್ಚಿಸಿದ್ದರು. ಇದನ್ನೂ ಓದಿ : ಮಹದೇವ ಸ್ವಾಮಿಯೇ ಸುಳ್ವಾಡಿಯ ವಿಷ ಸರ್ಪ -ಸ್ವಾಮಿಯ ಸಂಚನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಐಜಿಪಿ
Advertisement
Advertisement
ಘಟನಾ ವಿವರ:
ಹನೂರು ತಾಲೂಕಿನ ಸುಲ್ವಾಡಿ ಗ್ರಾಮದ ಕಿಕ್ ಕುತ್ ಮಾರಮ್ಮ ದೇವಸ್ಥಾನದಲ್ಲಿ ಕಳೆದ ಶುಕ್ರವಾರ ಗೋಪುರದ ಶಂಕುಸ್ಥಾಪನೆ ಕಾರ್ಯಕ್ರಮ ನೇರವೇರಿತ್ತು. ಪೂಜೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದ್ದ ಬಳಿಕ, ಭಕ್ತರು ಪ್ರಸಾದದ ರೂಪದಲ್ಲಿ ರೈಸ್ ಬಾತ್ ಸೇವಿಸಿದ್ದರು. ಆದರೆ ಸ್ವಲ್ಪ ಸಮಯದ ನಂತರ ರೈಸ್ ಬಾತ್ ಸೇವಿಸಿದ್ದ 100 ಕ್ಕೂ ಹೆಚ್ಚು ಜನರಿಗೆ ವಾಂತಿ ಭೇದಿ ಕಾಣಿಸಿಕೊಂಡು ಅಸ್ವಸ್ಥರಾಗಿ ಬಿದ್ದಿದ್ದರು. ಇದನ್ನು ಗಮನಿಸಿದ್ದ ಸ್ಥಳೀಯರು ಕೂಡಲೇ 108 ಆಂಬ್ಯುಲೆನ್ಸ್ ಗೆ ಕರೆ ಮಾಡಿ ಅಸ್ವಸ್ಥರನ್ನು ಆಸ್ಪತ್ರೆಗೆ ರವಾನಿಸಿದ್ದರು. ಅಸ್ವಸ್ಥರನ್ನು ಪರೀಕ್ಷಿಸಿದ್ದ ವೈದ್ಯರು, ಪ್ರಸಾದಲ್ಲಿ ವಿಷ ಬೆರೆತಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು. ಅಲ್ಲದೇ ವಿಧಿವಿಜ್ಞಾನ ವರದಿಯ ಪ್ರಕಾರ ಪ್ರಸಾದದಲ್ಲಿ ಆರ್ಗಾನ್ ಪಾಸ್ಫರಸ್ ಕಾಂಪೌಂಡ್ ಮೋನೋಕ್ರೋಟೋಫೋಸ್ ಎಂಬ ಕ್ರಿಮಿನಾಶಕ ಮಿಶ್ರಣವಾಗಿರುವುದಾಗಿ ಹೇಳಿತ್ತು. ಈ ಕ್ರಿಮಿನಾಶಕ ಮಿಶ್ರಣ ಮಾಡಿದ್ದ ಪ್ರಸಾದ ಸೇವಿಸಿದ್ದರ ಪರಿಣಾಮ ಇದುವರೆಗೂ 15 ಮಂದಿ ಮೃತಪಟ್ಟಿದ್ದರು.
Advertisement
Advertisement
ತನಿಖಾ ವಿವರ:
ವಿಷ ಪ್ರಸಾದ ಸೇವನೆ ಬಳಿಕ ಹಲವರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗುತ್ತಾರೆ. ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ ಎಸ್‍ಪಿ ಧರ್ಮೇಂದ್ರ ಕುಮಾರ್ ಮೀನಾ, ಅಪರ ಪೊಲೀಸ್ ಅಧೀಕ್ಷಕರರಾದ ಶ್ರೀಮತಿ ಗೀತಪ್ರಸನ್ನ ಹಾಗೂ ಕೊಳ್ಳೇಗಾಲ ಡಿವೈಎಸ್‍ಪಿ ಪುಟ್ಟಮಾದಯ್ಯ, ಜಿಲ್ಲಾಡಳಿತದ ಸಹಕಾರದೊಂದಿಗೆ ಮುತುವರ್ಜಿ ವಹಿಸಿ ಯಾವುದೇ ಕಾನೂನು ವ್ಯವಸ್ಥೆಗೆ ಭಂಗವಾಗುವಂತಹ ಘಟನೆ ನಡೆಯದಂತೆ ನೋಡಿಕೊಳ್ಳುತ್ತಾರೆ.
ರೈಸ್ ಬಾತ್‍ನಲ್ಲಿ ವಿಷವನ್ನು ಬೆರೆಸಿದ್ದ ಆಸಾಮಿಗಳನ್ನು ಪತ್ತೆ ಮಾಡುವ ಸಲುವಾಗಿ ಕೊಳ್ಳೇಗಾಲ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಪುಟ್ಟಮಾದಯ್ಯ ಅವರ ನೇತೃತ್ವದ 5 ವಿವಿಧ ತಂಡಗಳನ್ನು ರಚಿಸಿದರು. ತನಿಖೆ ಕೈಗೊಂಡಿದ್ದ 5 ತಂಡಗಳು ಕೌಶಲ್ಯದಿಂದ ಪ್ರತಿಯೊಂದು ಅಂಶಗಳನ್ನು ಗಣನೆಗೆ ತೆಗೆದುಕೊಂಡು ಲಭ್ಯವಿದ್ದ ಮಾಹಿತಿಯನ್ನು ವಿಶ್ಲೇಷಿಸಿ ಹಲವಾರು ಜನರನ್ನು ವಿಚಾರಣೆಗೆ ಒಳಪಡಿಸಿ ವಿಧಿ ವಿಜ್ಞಾನ ಪ್ರಯೋಗಾಲಯದ ಪರಿಣತರ ತಂಡದ ನೆರವನ್ನು ಬಳಸಿಕೊಂಡು ಈ ಘೋರ ನರಹತ್ಯೆ ನಡೆಸಿರುವ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದರು.
ಆರೋಪಿಗಳ ವಿವರ:
1. ಮಹದೇಶ್ವರ ಬೆಟ್ಟದಲ್ಲಿರುವ ಸಾಲೂರು ಮಠದ ಇಮ್ಮಡಿ ಮಹದೇವಸ್ವಾಮಿ (52) @ ದೇವಣ್ಣಬುದ್ದಿ ವೀರಬಸಪ್ಪ
2. ಕೊಳ್ಳೇಗಾಲ ತಾಲೂಕಿನ ಮಾರ್ಟಳ್ಳಿ ಗ್ರಾಮದ (ಸ್ವಂತ ಸ್ಥಳ ಶ್ಯಾಗ) ಅಂಬಿಕಾ ಮಾದೇಶ ಮಹದೇವಸ್ವಾಮಿ (35)
3. ಸುಳ್ವಾಡಿ ಕಿಚ್ ಗುತ್ ಮಾರಮ್ಮ ದೇವಸ್ಥಾನದ ವ್ಯವಸ್ಥಾಪಕ ಮಾದೇಶ ಮಹದೇವಸ್ವಾಮಿ (46) @ ಶ್ಯಾಗ ಮಾದೇಶ
4. ಈ ಹಿಂದೆ ನಾಗರಕಲ್ಲಿನ ಅರ್ಚಕನಾಗಿದ್ದ ಸುಳ್ವಾಡಿ ಗ್ರಾಮ ದೊಡ್ಡಯ್ಯತಂಬಡಿ (35) ದೊಡ್ಡಯ್ಯ ಬಿನ್ ಕಾಳತಂಬಡಿ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv