ಮಂಗಳೂರು: ರೇಬಿಸ್ (Rabies) ರೋಗಕ್ಕೆ ಸುಳ್ಯ ತಾಲೂಕಿನ (Sullia) ಸಂಪಾಜೆಯ ಮಹಿಳೆಯೊಬ್ಬರು ಮಂಗಳೂರಿನಲ್ಲಿ ಮೃತಪಟ್ಟಿದ್ದಾರೆ.
ಸಂಪಾಜೆಯ (Sampaje) ಕಲ್ಲುಗುಂಡಿ ಬಳಿಯ 42 ವರ್ಷದ ಮಹಿಳೆ ಮಾ.7 ರಂದು ಅರಂತೋಡಿಗೆ ತೋಟದ ಕೆಲಸಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಬೀದಿಯಲ್ಲಿದ್ದ ನಾಯಿಮರಿ ಕಚ್ಚಿದೆ. ನಾಯಿ ಮರಿ ಕಚ್ಚಿದ್ದರೂ ಮಹಿಳೆ ಯಾರಿಗೆ ತಿಳಿಸದೇ, ಚಿಕಿತ್ಸೆ ಪಡೆಯದೇ ನಿರ್ಲಕ್ಷ್ಯ ವಹಿಸಿದ್ದರು.
ಮಾ.17(ಸೋಮವಾರ) ಮಹಿಳೆಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಮಹಿಳೆ ಚಿಕಿತ್ಸೆಗಾಗಿ ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಬಂದಿದ್ದಾರೆ. ಈ ವೇಳೆ ನೀರನ್ನು ನೋಡಿ ಕಿರುಚಾಡಲು ಆರಂಭಿಸಿದ್ದಾರೆ. ಇದನ್ನೂ ಓದಿ: ಒಂದೇ ಒಂದು ಇಂಚು ಬೇರೆಯವರ ಜಾಗಕ್ಕೆ ನಾವು ಬೇಲಿ ಹಾಕಿಲ್ಲ: ನಿಖಿಲ್ ಕುಮಾರಸ್ವಾಮಿ
ವಿಚಿತ್ರ ವರ್ತನೆ ತೋರುತ್ತಿದ್ದ ಹಿನ್ನೆಲೆಯಲ್ಲಿ ಮಹಿಳೆ ಬಳಿ ಮತ್ತಷ್ಟು ಪ್ರಶ್ನೆ ಕೇಳಿದಾಗ ನಾಯಿ ಕಚ್ಚಿದ್ದನ್ನು ತಿಳಿಸಿದ್ದಾರೆ. ಪರಿಸ್ಥಿತಿ ಗಂಭೀರವಾಗಿದ್ದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ (mangaluru Wenlock Hospital) ದಾಖಲಾಗುವಂತೆ ಸೂಚಿಸಿದ್ದಾರೆ.
ಸುಳ್ಯ ವೈದ್ಯರ ಶಿಫಾರಸಿನಂತೆ ಮಹಿಳೆಯನ್ನು ವೆನ್ಲಾಕ್ ಆಸ್ಪತ್ರಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು (ಮಾ.22) ಬೆಳಗ್ಗೆ ಮಹಿಳೆ ಮೃತಪಟ್ಟಿದ್ದಾರೆ.
ವೈದ್ಯಕೀಯ ವರದಿಗಳು ಮಹಿಳೆಗೆ ರೇಬಿಸ್ ಸೋಂಕು ತಗುಲಿದ್ದನ್ನು ದೃಢಪಡಿಸಿದೆ. ಮುನ್ನೆಚ್ಚರಿಕೆಯಾಗಿ ಅಧಿಕಾರಿಗಳು ಅವರು ನೆಲೆಸಿದ್ದ ಪ್ರದೇಶ ಮತ್ತು ಕುಟುಂಬದ ಹಲವಾರು ಜನರಿಗೆ ರೇಬಿಸ್ ವಿರೋಧಿ ಲಸಿಕೆಗಳನ್ನು ನೀಡಿದ್ದಾರೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ. ನಂದಕುಮಾರ್ ತಿಳಿಸಿದ್ದಾರೆ.
ಅರಂತೋಡಿನಲ್ಲಿ ಆ ನಾಯಿಮರಿ ಇತರರನ್ನು ಕಚ್ಚಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ನಾಯಿ ಕಚ್ಚಿದವರು ಕೂಡಲೇ ಲಸಿಕೆ ಪಡೆಯುವಂತೆ ಆರೋಗ್ಯ ಅಧಿಕಾರಿಗಳು ಮನವಿ ಮಾಡಿದ್ದಾರೆ.