ಬೆಂಗಳೂರು: ಆನಾರೋಗ್ಯದ ಕಾರಣ ವ್ಯಕ್ತಿಯೊಬ್ಬ ಮೃತಪಟ್ಟಿದ್ದು, ಇದರಿಂದ ನೊಂದು ಆತನ ಪತ್ನಿ ಮತ್ತು ತಾಯಿ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಶವಂತಪುರದ ಮುತ್ಯಾಲನಗರದಲ್ಲಿ ನಡೆದಿದೆ.
ಶೇಷ ಆನಾರೋಗ್ಯದಿಂದ ಬಳಲುತ್ತಿದ್ದು ಮೃತಪಟ್ಟಿದ್ದಾರೆ. ಇದರಿಂದ ನೊಂದ ಪತ್ನಿ ಉಷಾ ಮತ್ತು ತಾಯಿ ಸುಧಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರು ನಾಲ್ಕು ದಿನಗಳ ಹಿಂದೆಯೇ ಆತ್ಮಹತ್ಯೆಗೆ ಶರಣಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
Advertisement
ಆಂಧ್ರ ಮೂಲದ ಶೇಷ 30 ವರ್ಷಗಳ ಹಿಂದೆ ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದಿದ್ದರು. ಬಳಿಕ ಉಷಾಳನ್ನು ಮದುವೆ ಮಾಡಿಕೊಂಡಿದ್ದರು. ಇವರಿಬ್ಬರ ಜೊತೆ ತಾಯಿ ಸುಧಾ ಕೂಡ ವಾಸಿಸುತ್ತಿದ್ದರು. ವೃತ್ತಿಯಲ್ಲಿ ಟೈಲರ್ ಆಗಿದ್ದ ಶೇಷನಿಗೆ ಸಕ್ಕರೆ ಕಾಯಿಲೆ ಇತ್ತು. ಜೊತೆಗೆ ಮಕ್ಕಳಾಗದ ನೋವು ಕೂಡ ಕಾಡುತ್ತಿತ್ತು. ಆದರೆ ಇವರು ಆಸ್ಪತ್ರೆಗೆ ಹೋಗುತ್ತಿರಲಿಲ್ಲ. ನಮ್ಮ ಮೇಲೆ ದೇವರ ಅನುಗ್ರಹವಿದೆ. ಆ ದೇವರೇ ಕಾಪಾಡುತ್ತಾನೆ ಅಂತ ಪ್ರತಿನಿತ್ಯ ದೇವರ ಪೂಜೆ, ವ್ರತಗಳನ್ನ ಮಾಡುತ್ತಿದ್ದು, ವೈದ್ಯರ ಬಳಿಯೂ ಹೋಗದೇ ಜೀವನ ಸಾಗಿಸುತ್ತಿದ್ದರು. ಆದರೆ 4 ದಿನಗಳ ಹಿಂದೆ ಮನೆಯ ಯಜಮಾನ ಶೇಷ ಮೃತಪಟ್ಟಿದ್ದಾರೆ.
Advertisement
Advertisement
ಶೇಷನ ಶವವನ್ನ ಮನೆಯಲ್ಲೇ ಇಟ್ಟುಕೊಂಡು ಪತ್ನಿ ಉಷಾ ಮತ್ತು ತಾಯಿ ಸುಧಾ ದೇವರಲ್ಲಿ ಬದುಕಿಸುವಂತೆ ಪ್ರಾರ್ಥನೆ ಮಾಡುತಿದ್ದರು. ಯಾವಾಗ ಶೇಷ ಮತ್ತೆ ಬದುಕಲ್ಲ ಅಂತ ಗೊತ್ತಾಯಿತೋ ಇಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಸಂಬಂಧಿಕರು ಹಾಗೂ ಸ್ಥಳೀಯರ ಸಂಪರ್ಕದಲ್ಲೇ ಇರುತ್ತಿರಲಿಲ್ಲ. ಮನೆಯೊಳಗೆ ಸೇರಿಕೊಂಡರೆ ಕತ್ತಲಾದರೂ ಲೈಟ್ ಕೂಡ ಆನ್ ಮಾಡದೇ ಒಂಟಿಯಾಗಿಯೇ ಬದುಕುತ್ತಿದ್ದರು ಎಂದು ಸಂಬಂಧಿಗಳಾದ ಶಿವು ಮತ್ತು ಸುರೇಶ್ ಬಾಬು ತಿಳಿಸಿದ್ದಾರೆ.
Advertisement
ಇವರ ಮನೆಯಿಂದ ದುರ್ವಾಸನೆ ಬರುತ್ತಿತ್ತು. ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಮೂವರು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬಳಿಕ ಪೊಲೀಸರು ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.
ಈ ಕುರಿತು ಯಶವಂತರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ಮುಂದುವರಿದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv