ಸುಹಾಸ್ ಶೆಟ್ಟಿ ಹತ್ಯೆ – ಪ್ರಕರಣ ಎನ್‌ಐಎಗೆ ನೀಡುವಂತೆ ಕುಟುಂಬಸ್ಥರ ಆಗ್ರಹ

Public TV
2 Min Read
Suhas Shetty Murder Case Mangaluru

ಮಂಗಳೂರು: ಕರಾವಳಿಯಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ (Suhas Shetty) ಹತ್ಯೆ ನಡೆದಿದೆ. ಮಗನ ಸಾವಿನಿಂದ ಕಂಗೆಟ್ಟಿರುವ ಕುಟುಂಬಸ್ಥರು ನ್ಯಾಯ ಕೊಡಿಸುವಂತೆ ಆಗ್ರಹಿಸಿದ್ದಾರೆ. ಪ್ರಕರಣದ ತನಿಖೆಯನ್ನು ಎನ್‌ಐಎಗೆ (NIA) ನೀಡುವಂತೆ ಆಗ್ರಹಿಸಿದ್ದಾರೆ.

ಮಂಗಳೂರಿನಲ್ಲಿ ನಡೆದಿರುವ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ಇಡೀ ಕರಾವಳಿಯನ್ನು ಬೆಚ್ಚಿಬೀಳಿಸಿದೆ. ಪ್ರಕರಣ ಭೇದಿಸಿರುವ ಮಂಗಳೂರಿನ ಪೊಲೀಸರು 8 ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ಎನ್‌ಐಎ ತನಿಖೆಗೆ ನೀಡುವಂತೆ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್ ದಾಳಿ‌ ಬಳಿಕ ಶಸ್ತ್ರಾಸ್ತ್ರ ಕಾರ್ಖಾನೆಗಳಿಗೆ ದೀರ್ಘ ರಜೆ ರದ್ದು

Mangaluru Suhas Shetty Murder

 

 

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ಹತ್ಯೆ ನಡೆಸಿದ ಎಲ್ಲಾ ಆರೋಪಿಗಳಿಗೆ ಮರಣದಂಡನೆ ನೀಡಬೇಕೆಂದು ತಾಯಿ ಸುಲೋಚನ ಶೆಟ್ಟಿ ಆಗ್ರಹಿಸಿದ್ದಾರೆ. ರಾಜ್ಯ ಸರ್ಕಾರದಲ್ಲಿ ನಮಗೆ ನಂಬಿಕೆ ಇಲ್ಲ. ಹೀಗಾಗಿ ಎನ್‌ಐಎ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ನಮ್ಮ ಮಗನಿಗೆ ಪೊಲೀಸರು ತೊಂದರೆ ಕೊಟ್ಟಿದ್ದಾರೆ. ಈ ರೀತಿ ಆಗಲು ಬಜ್ಪೆ ಪೊಲೀಸರೇ ಕಾರಣ, ಅವರೂ ಹತ್ಯೆಯಲ್ಲಿ ಶಾಮೀಲಾಗಿದ್ದಾರೆ. ಕೆಲ ದಿನಗಳಿಂದ ಪೊಲೀಸರು ಕಿರುಕುಳ ಹೆಚ್ಚಿಸಿದ್ದು, ವಾಹನವನ್ನು ತಪಾಸಣೆ ಮಾಡುತ್ತಿದ್ದರು. ಏನಾದರೂ ನಾವು ಹೇಳಿದಂತೆ ಕೇಳದಿದ್ದರೆ ಕಾಲಿಗೆ ಗುಂಡು ಹಾಕುತ್ತೇವೆ ಎಂದು ಹೆದರಿಸಿದ್ದರು ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಸತತ 10ನೇ ಬಾರಿ ಕದನ ವಿರಾಮ ಉಲ್ಲಂಘಿಸಿದ ಪಾಕ್‌ – ತಕ್ಕ ಪ್ರತ್ಯುತ್ತರ ನೀಡಿದ ಭಾರತೀಯ ಸೇನೆ

ಇನ್ನು ಸುಹಾಸ್ ಶೆಟ್ಟಿ ತಂದೆ ಮೋಹನ್ ಶೆಟ್ಟಿ ಮಾತನಾಡಿ, ಕೆಲವರು ನನ್ನ ಮಗನನ್ನು ರೌಡಿ ಶೀಟರ್ ಎಂದು ಬಿಂಬಿಸುತ್ತಿದ್ದಾರೆ. ಅವನು ರೌಡಿಶೀಟರ್ ಆಗಿದ್ದರೆ ನಮ್ಮ ಮನೆ ಹೀಗೆ ಇರುತ್ತಿತ್ತಾ? ನನ್ನ ಪತ್ನಿಗೆ ಕ್ಯಾನ್ಸರ್ ಚಿಕಿತ್ಸೆ ನೀಡಲು ಪರದಾಡುತ್ತಿದ್ದೇವೆ. ನಮ್ಮ ಹೆಸರಿನಲ್ಲಿ ಸಾಲ ಮಾಡಿ ಅವನ ವ್ಯವಹಾರಕ್ಕೆ ಸಹಾಯ ಮಾಡಿದ್ದೆ. ಮಂಗಳೂರಿನಲ್ಲಿ ಮರಳಿನ ವ್ಯವಹಾರ ಮಾಡುತ್ತಿದ್ದ. ಮನೆಗೆ ಆಧಾರ ಸ್ಥಂಭವಾಗಿದ್ದ ಮಗನನ್ನು ಕಳೆದುಕೊಂಡ ನಮಗೆ ನ್ಯಾಯ ಬೇಕಾಗಿದೆ ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಗಾಯಕ ಸೋನು ನಿಗಮ್ ಮೇಲೆ ಎಫ್‌ಐಆರ್

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯಿಂದಾಗಿ ಅವರ ಮನೆಯ ಆಧಾರ ಸ್ತಂಭವೇ ಕುಸಿದು ಬಿದ್ದಂತಾಗಿದೆ. ಹಿಂದುತ್ವಕ್ಕಾಗಿ ಕೆಲಸ ಮಾಡುತ್ತಿದ್ದ ಸುಹಾಸ್ ಶೆಟ್ಟಿ ತನ್ನ ಗುಡಿಸಲಿನಂತಿರುವ ಮನೆಯಲ್ಲೇ ತಂದೆ ತಾಯಿಯೊಂದಿಗೆ ಇದ್ದು, ಆದಷ್ಟು ಬೇಗ ಹೊಸ ಮನೆ ಕಟ್ಟಿ ಮದುವೆಯಾಗಬೇಕು ಎಂದುಕೊಂಡಿದ್ದ. ಆದರೆ ವಿಧಿಯಾಟವೇ ಬೇರೆ ಆಗಿ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬರ್ಬರವಾಗಿ ಹತ್ಯೆ ಆಗಿದ್ದಾನೆ. ಇದನ್ನೂ ಓದಿ: ಶಿವಾನಂದ್ ಪಾಟೀಲ್ ವಿಚಾರ ಹೈಕಮಾಂಡ್ ಗಮನಕ್ಕೆ ತರುತ್ತೇನೆ: ಎಂ.ಬಿ.ಪಾಟೀಲ್

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯಿಂದ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸುವಂತೆ ಮೃತ ಸುಹಾಸ್ ಶೆಟ್ಟಿ ತಾಯಿ ಆಗ್ರಹಿಸಿದ್ದು, ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ. ಇದನ್ನೂ ಓದಿ: ಭಾರತ-ಪಾಕ್‌ ಉದ್ವಿಗ್ನತೆ ನಡುವೆ ಪಾಕ್‌ ರೇಂಜರ್‌ನನ್ನ ಬಂಧಿಸಿದ ಬಿಎಸ್‌ಎಫ್‌

Share This Article