Bengaluru CityKarnatakaLatestMain PostShivamogga

ಬುರ್ಖಾ ತೊಟ್ಟು ಭಕ್ತಿ ಗೀತೆ ಗುನುಗಿದ್ದು ಮಹಾಪ್ರಮಾದನಾ..?

– ಸಂಗೀತದಿಂದ ಶಾಂತಿ ಸಾರಿದ ಸುಹಾನ ವಿರುದ್ಧ ಧರ್ಮ ಸಮರ?
– ಸರಿಯೇ ಕೋಮು ವೇಷ ತೊಟ್ಟಮತಾಂಧರ ಟೀಕಾಸ್ತ್ರ?

ಹೆಣ್ಣು ಮಕ್ಕಳು ಅಂದರೆ ಕೇವಲ ಸಂಸಾರ ಸಾಗಿಸೋ ದೋಣಿ ಇದ್ದಂತೆ ಅಷ್ಟೇ. ಆಕೆ ಮದುವೆಗೂ ಮೊದಲು ಸಮಾಜ ಹೇಳಿದ್ದಕ್ಕೆ ತಲೆದೂಗಬೇಕು. ಮದುವೆಯ ನಂತರ ಗಂಡ ಹೇಳಿದ್ದಕ್ಕೆ ಸೈ ಅನ್ನ ಬೇಕು. ಮಕ್ಕಳಾದ ಮೇಲೆ ಮಕ್ಕಳಿಗೆ ಹೂಗುಟ್ಟಬೇಕು. ಇದಷ್ಟೇ ಹೆಣ್ಣಿನ ಪ್ರಪಂಚ ಅಂತಾ ಬಾಯಿ ಬಡಾಯಿಸೋ ಹಲವರಿಗೆ ರಿಯಾಲಿಟಿ ಶೋನಲ್ಲಿ ಮುಸಲ್ಮಾನ ಧರ್ಮಕ್ಕೆ ಸೇರಿದ ಯುವತಿಯೊಬ್ಬರು ತಕ್ಕ ಉತ್ತರ ನೀಡಿದ್ದಾರೆ.

ಆಗಿದ್ದು ಇಷ್ಟು:
ಝೀ ಕನ್ನಡ ವಾಹಿನಿಯ ಸರಿಗಮಪ ರಿಯಾಲಿಟಿ ಶೋಗೆ ಆಯ್ಕೆಯಾಗಿರುವ ಸುಹಾನ ಈಗ ತಮ್ಮ ಹಾಡು ಹಾಗೂ ಮಾತಿನಿಂದ ಎಲ್ಲರ ಮನಸ್ಸನ್ನ ಗೆದ್ದಿದ್ದಾರೆ. ಸುಹಾನ ಹಾಡಿ ಮುಗಿಸುತ್ತಿದ್ದಂತೆಯೇ ಚಪ್ಪಾಳೆಯ ಸುರುಮಳೆಯೇ ಸುರಿದಿತ್ತು. ಒಬ್ಬ ಮುಸಲ್ಮಾನ ಯುವತಿಯ ಬಾಯಲ್ಲಿ ಶ್ರೀಕರನೇ ಶ್ರೀನಿವಾಸನೇ ಎಂಬ ಭಕ್ತಿಗೀತೆಯನ್ನ ಕೇಳಿ ಎಲ್ಲರೂ ಶಬ್ಬಾಸ್ ಎಂದಿದ್ರು.

ಹಾಡು ಮುಗಿಯುತ್ತಿದ್ದಂತೆಯೇ ವಿಜಯ ಪ್ರಕಾಶ್ ಹಾಗೂ ಅರ್ಜುನ್ ಜನ್ಯ ಇಬ್ಬರೂ ಒಟ್ಟಾಗಿ ಸೇರಿ ಗ್ರೀನ್ ಸಿಗ್ನಲ್ ಕೊಟ್ಟೇ ಬಿಡ್ತಾರೆ ನೋಡಿ. ಇದಾದ ಬಳಿಕ ವಿಜಯ ಪ್ರಕಾಶ್ ಸುಹಾನಾರ ಹಾಡನ್ನ ಸಿಕ್ಕಾಪಟ್ಟೆ ಹೊಗಳ್ತಾರೆ. ಅಲ್ಲದೇ ನಿಮ್ಮಂತಾ ಸ್ಪರ್ಧಿ ಮೊದಲ ಬಾರಿ ಈ ವೇದಿಕೆಗೆ ಬಂದಿರೋದು ಅಂತಾನೂ ಹೇಳ್ತಾರೆ. ಅಷ್ಟೇ ಅಲ್ಲ ಮೊದಲಿನಿಂದಲೂ ಕನ್ನಡದ ಬಗ್ಗೆ ಅಭಿಮಾನ ಹೊಂದಿದ್ದ ಸುಹಾನ ಕನ್ನಡವನ್ನೂ ಕೇಳಿ ಅಂದು ಎಲ್ಲಾ ತೀರ್ಪುಗಾರರೂ ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ರು.

ಆಕೆಯ ಕಂಠವನ್ನ ಮೆಚ್ಚಿದ ತೀರ್ಪುಗರರು ಮತ್ತೊಂದು ಹಾಡು ಹಾಡುವಂತೆ ಹೇಳ್ತಾರೆ. ಆಗ ಸುಹಾನ ಜಾನಪದ ಸೊಗಡು ತುಂಬಿರೋ ‘ಮಳೆರಾಯ ಮಳೆಯಪ್ಪಾ’ ಅನ್ನೋ ಹಾಡನ್ನ ಹಾಡಿ ಎಲ್ಲರನ್ನೂ ತಲೆದೂಗಿಸಿಬಿಡ್ತಾರೆ. ಸುಹಾನ ಜನಪದ ಗೀತೆ ಹಾಡಿ ಮುಗಿದ ಮೇಲಂತೂ ವಿಜಯ ಪ್ರಕಾಶ್ ಖುಷಿ ಪಟ್ಟು ನೀವು ಕನ್ನಡಿಗರ ಮನಸ್ಸಿನಲ್ಲಿ ಸಿಹಿ ಹಂಚಿಬಿಟ್ಟಿದ್ದೀರಾ ಅಂದ್ರು.

ಇನ್ನು ಅರ್ಜುನ್ ಜನ್ಯ ಸಲಾಂ ವಾಲಿಕುಂ ಅಂತಾನೇ ಮಾತು ಶುರುಮಾಡಿ ಸುಹಾನಾರ ಧೈರ್ಯವನ್ನು ಹೊಗಳಿ ಬಿಟ್ಟರು. ರಾಜೇಶ್ ಕೃಷ್ಣನ್ ಸುಹಾನ ಹಾಡಿಗೆ ಕಪ್ಪು ಪಟ್ಟಿ ಬಿಚ್ಚದೇ ಇದ್ರೂ ಕುಡಾ ಆಕೆಯನ್ನ ನೋಡಿ ತುಂಬಾನೇ ಸಂತೋಷ ಪಡ್ತಾರೆ ಹಾಗೂ ಸರಿಗಮಪ ವೇದಿಕೆಗೆ ಒಂದೇ ಜಾತಿ, ಒಂದೇ ಧರ್ಮ ಅದು ಸಂಗೀತ ಮಾತ್ರ ಅನ್ನೋದನ್ನ ಗಾಯಕ ರಾಜೇಶ್ ಕೃಷ್ಣನ್ ಹೇಳಿದ್ರು.

ಇನ್ನು ಸುಹಾನ ಕೊನೆಯಲ್ಲಿ ಮಾತನಾಡ್ತಾ ಪ್ರಪಂಚದಲ್ಲಿ ಎಷ್ಟೋ ಪ್ರತಿಭೆಗಳಿಗೆ ಅವರಿಗೆ ಸಿಗಬೇಕಾದ ವೇದಿಕೆ ಹಾಗೂ ಪ್ರೋತ್ಸಾಹ ಸಿಕ್ಕಿಲ್ಲ. ಹೆಣ್ಣು ಮಕ್ಕಳಲ್ಲಿರೋ ಪ್ರತಿಭೆಯನ್ನ ತೋರಿಸೋಕೆ ಕೆಲವು ಕಟ್ಟುಪಾಡುಗಳು ಅಡ್ಡಿಯಾಗಿವೆ. ಆದ್ರೆ ನನ್ನನ್ನ ನೋಡಿಯಾದ್ರೂ ಪ್ರತಿಭೆಗಳು ಹೊರಕ್ಕೆ ಬರ್ಲಿ ಅಂದ್ರು ಸುಹಾನ.

ಈ ವಿರೋಧ ಸರಿಯೇ?
ನಡೆದಿದ್ದು ಇಷ್ಟು. ಆದ್ರೇ ಈಗ ಹಲವಾರು ಮಂದಿ ಆಕೆಯ ಪ್ರತಿಭೆಯನ್ನ ಗುರುತಿಸದೇ ಜಾತಿ ಧರ್ಮದ ಮೇಲೆ ಸುಹಾನಾರನ್ನ ವಿರೋಧಿಸ್ತಾ ಇದ್ದಾರೆ. ಆದ್ರೇ ಇದು ಎಷ್ಟರ ಮಟ್ಟಿಗೆ ಸರಿ? ಯುವತಿಯರು ಹಾಗಾದ್ರೇ ತಮ್ಮ ಪ್ರತಿಭೆಯನ್ನ ತೋರಿಸಲೇಬಾರದಾ ಅನ್ನೋ ವಾದ ವಿವಾದಗಳು ಸೃಷ್ಟಿಯಾಗಿದೆ. ಈ ಚರ್ಚೆ ನಡುವೆ ಸುಹಾನಳ ಅದ್ಭುತ ಕಂಠ ಮೂಲೆಗುಂಪಾಗಿದೆ. ಧರ್ಮದ ಕನ್ನಡಿಯಿಟ್ಟು ಅಖಾಡಕ್ಕೆ ಇಳಿದವ್ರಿಗೆ ಸುಹಾನಳ ಪ್ರತಿಭೆ ಕಾಣಿಸುತ್ತಿಲ್ಲ. ತಾನು ಯಾವ ಉದ್ದೇಶಕ್ಕೆ ಬಂದಿದ್ದೇನೆ ಅನ್ನೋದನ್ನ ಸ್ಪಷ್ಟವಾಗಿ ಹೇಳೋ ಹೆಣ್ಣಮಗಳನ್ನ ಧರ್ಮ ವಿರೋಧಿಯಂತೆ ಪ್ರತಿಬಿಂಬಿಸೋ ಕೆಲಸಗಳು ನಡೆಯುತ್ತಿವೆ. ಇದು ನಮ್ಮ ಸಮಾಜದ ವಿಪರ್ಯಾಸ ನೋಡಿ.

ಮೊದಲ ಮುಸ್ಲಿಂ ಮಹಿಳಾ ಸ್ಪರ್ಧಿ:
ಸುಹಾನ ಝೀ ಕನ್ನಡ ಮನೋರಂಜನಾ ವಾಹಿನಿಯ ಸರಿಗಮಪ ರಿಯಾಲಿಟಿ ಶೋಗೆ ಆಯ್ಕೆಯಾದ ಮೊದಲ ಮುಸ್ಲಿಂ ಸಮುದಾಯದ ಯುವತಿ. ಶಿವಮೊಗ್ಗ ಜಿಲ್ಲೆಯ ಸಾಗರ ಸಮೀಪದ ಭೀಮನಕೋಣೆ ಎನ್ನುವ ಪುಟ್ಟ ಹಳ್ಳಿಯಿಂದ ಬಂದ ಸುಹಾನ ತಮ್ಮ ಆಯ್ಕೆ ಸುತ್ತಿನಲ್ಲಿಯೇ ಬುರ್ಖಾ ಧರಿಸಿ, ಭಕ್ತಿ ಗೀತೆ ‘ಶ್ರೀವಾಸನೇ ಶ್ರೀನಿವಾಸನೇ’ ಹಾಡುವ ಮೂಲಕ ಸಂಗೀತಕ್ಕೆ ಅಂಚುಗಳಿಲ್ಲ ಎಂಬ ಸಂದೇಶವನ್ನು ಸಾರಿದ್ದಾರೆ.

ಈಕೆಯ ತಂದೆ ಸೈಯದ್ ಮುನೀರ್ ಹಾಗೂ ತಾಯಿ ನಸ್ರೀನ್ ಪರ್ವೀನ್ ಇಬ್ಬರೂ ಕೂಡಾ ಶಿಕ್ಷಕರು. ದಂಪತಿಗೆ ಇಬ್ಬರು ಮಕ್ಕಳು. ಮನೆಯಲ್ಲಿ ದೊಡ್ಡವಳಾದ ಸುಹಾನ ಸದ್ಯ ಬೆಂಗಳೂರಿನಲ್ಲಿ ಎಂಬಿಎ ಕಲಿಯುತ್ತಿದ್ದಾರೆ. ತಮ್ಮ ಸಮೀರ್ ಬಿ.ಕಾಂ ಮಾಡುತ್ತಿದ್ದಾರೆ. ಸುಹಾನಾಗೆ ಮೊದಲಿನಿಂದಲೂ ಕೂಡಾ ಕಲೆಯ ಬಗ್ಗೆ ಅಪಾರವಾದ ಆಸಕ್ತಿ ಇತ್ತು. ಸಾಗರದಿಂದ ಸುಮಾರು ಹತ್ತು ಕಿಲೋಮೀಟರ್ ದೂರದಲ್ಲಿರೋ ಹೆಸರಾಂತ ರಂಗಭೂಮಿ ನೀನಾಸಂನಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು.

ಪ್ರತಿಭಾ ಕಾರಂಜಿಯಲ್ಲೂ ಪ್ರಶಸ್ತಿ:
ಚಿಕ್ಕ ವಯಸ್ಸಿನಲ್ಲಿಯೇ ಶಾಲೆಯಲ್ಲಿ ನಡೆಯುವ ಪ್ರತಿಭಾ ಕಾರಂಜಿ ಸ್ಪರ್ಧೆಯಿಂದ ಈಕೆಗೆ ಸಂಗೀತದತ್ತ ಆಸಕ್ತಿ ಹೆಚ್ಚಾಗುತ್ತಾ ಬಂತು. ಕಲೆಯತ್ತ ಆಸಕ್ತಿ ಬೆಳೆಸಿಕೊಂಡ ಸುಹಾನ ರಾಜ್ಯಾದ್ಯಂತ ಹೊಸ ಅಲೆಯ ಚರ್ಚೆಯೊಂದನ್ನ ಹುಟ್ಟು ಹಾಕುವ ಸಾಧ್ಯತೆಗಳಿವೆ. ಸುಹಾನ ಮೊದಲಿನಿಂದಲೂ ಕೂಡಾ ದೇವಸ್ಥಾನಕ್ಕೂ ಹೋಗ್ತಿದ್ರು, ಮಸೀದಿಗೂ ತೆರಳುತ್ತಿದ್ರು. ಹೀಗೇ ಜಾತಿ ಧರ್ಮದ ಕಟ್ಟುಪಾಡಿಲ್ಲದೇ ಬದುಕಿದ್ದ ಸುಹಾನಾಗೆ ಈಗ ವಿರೋಧಗಳು ಕೂಡಾ ಕೇಳಿಬರ್ತಿದೆ.

ಝೀ ಕನ್ನಡದ ಈ ರಿಯಾಲಿಟಿ ಶೋ ಸ್ಪರ್ಧೆಯಲ್ಲಿ ವಿಕಲ ಚೇತನ ಮೆಹಬೂಬ್‍ಸಾಬ್ ಸೇರಿದಂತೆ ಒಟ್ಟು 17 ಅಭ್ಯರ್ಥಿಗಳಿಗೆ ಈ ಬಾರಿ ಅವಕಾಶ ನೀಡಲಾಗಿದೆ. ಆ ಅಭ್ಯರ್ಥಿಗಳಲ್ಲಿ ಸುಹಾನಾ ಕೂಡಾ ಒಬ್ಬರು. ಮೊದಲಿನಿಂದಲೂ ಸುಹಾನಾ ಬಿಂದಾಸ್ ಆಗೇ ಇದ್ದವರು. ಧರ್ಮದ ಆಚರಣೆಗಳನ್ನ ಒಪ್ಪಿದವರಲ್ಲ. ಎಲ್ಲರ ವಿರೋಧವನ್ನೂ ಎದುರಿಸುತ್ತಲೇ ಆಕೆ ಹೊರಬಂದಿದ್ದಾರೆ. ಪುಟ್ಟ ಹಳ್ಳಿಯಲ್ಲಿ ಬೆಳೆದು ಬಂದ ಹುಡುಗಿ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದ್ದಾರೆ. ಆದ್ರೇ ಧರ್ಮವನ್ನ ಮುಂದಿಟ್ಟುಕೊಮಡು ಕಲೆಯನ್ನ ಹೊಸಕಿ ಹಾಕೋದು ಎಷ್ಟರ ಮಟ್ಟಿಗೆ ಸರಿ ಎನ್ನುವ ಪ್ರಶ್ನೆ ಈಗ ಎದ್ದಿದೆ.

ಆಯ್ಕೆ ಹೀಗಾಯ್ತು:
ರಜೆಗೆಂದು ಬಂದಿದ್ದ ಸುಹಾನಾಗೆ ಶಿವಮೊಗ್ಗದಲ್ಲಿ ನಡೆಯುತ್ತಿದ್ದ ಸರಿಗಮಪ ಆಡಿಷನ್ ಬಗ್ಗೆ ತಿಳಿಯುತ್ತೆ. ಜನವರಿ 27 ರಂದು ಸುಹಾನ ತಂದೆ ಮುನೀರ್ ಸುಹಾನಾರನ್ನ ಆಡಿಷನ್‍ಗೆ ಕರೆದುಕೊಂಡು ಹೋಗ್ತಾರೆ. ಅಲ್ಲಿ 2 ಸುತ್ತಿನ ಆಯ್ಕೆ ಬಳಿಕ ಬೆಂಗಳೂರಿನಲ್ಲಿ ನಾಲ್ಕು ಸುತ್ತಿನ ಆಯ್ಕೆ ನಡೆಯುತ್ತೆ. ಆಮೇಲೆ ಆಯ್ಕೆ ಸುತ್ತಿನ ಕಾರಣಕ್ಕೆ ವೇದಿಕೆಯಲ್ಲಿ ಶ್ರೀಕಾರಬೇ ಶ್ರೀನಿವಾಸನೇ ಎಂದು ಸುಹಾನಾ ಹಾಡ್ತಾರೆ. ಹೀಗೆ ಸುಹಾನಾ ತಮ್ಮ ಧೈರ್ಯ ಹಾಗೂ ಮಾತಿನಿಂದ ಎಲ್ಲರ ಮನಸೂರೆಗೊಂಡಿದ್ದಾರೆ.

ಕಲೆ ಅನ್ನೋದು ಎಲ್ಲರಿಗೂ ಒಲಿದು ಬರುವಂತದ್ದಲ್ಲ. ಸುಹಾನ ಕುಟುಂಬದಲ್ಲಿಯೇ ಹೀಗೊಂದು ಸಾಂಸ್ಕೃತಿಕ ಅಭಿರುಚಿ ಬೆಳೆದು ಬಂದಿದೆ. ಯಾಕಂದ್ರೇ ಸುಹಾನಾ ಅಜ್ಜಿ ಫರೀದಾ ಬೇಗಂ ಕುಡಾ ಸಂಗೀತದ ಬಗ್ಗೆ ಆಸಕ್ತಿ ಹೊಂದಿದ್ದರು. ಹೀಗಾಗಿ ಕಲೆ ಈಕೆಗೆ ರಕ್ತಗತವಾಗಿಯೇ ಬಂದಿರೋ ವರವಾಗಿದೆ. ಅಷ್ಟೇ ಅಲ್ಲ ಪ್ರಬುದ್ಧವಾಗಿ ಆಲೋಚನೆ ಮಾಡುವ ಸುಹಾನ ನಾನೇನಾದ್ರೂ ಒಳ್ಳೆಯ ಕೆಲಸ ಮಾಡ್ಲೇ ಬೇಕು ಅಂತಾ ಕನಸು ಕಂಡಿದ್ರು.

ವಿರೋಧ ಮೊದಲೇನಲ್ಲ:
ಹಾಗೆ ನೋಡಿದ್ರೇ ಇಂತಹಾ ಪ್ರತಿರೋಧ ಸುಹಾನ ಕುಟುಂಬದ ಪಾಲಿಗೆ ಇದೇ ಮೊದಲೇನಲ್ಲ. ಚಿಕ್ಕ ವಯಸ್ಸಿನಿಂದಲೂ ಕೂಡಾ ಸುಹಾನ ತಂದೆ ತಾಯಿ ಆಕೆಯ ಸಾಂಸ್ಕೃತಿಕ ಚಟುವಟಿಕೆಗಳನ್ನು ಬೆಂಬಲಿಸಿದ ಹಿನ್ನೆಲೆಯಲ್ಲಿ ವಿರೋಧವನ್ನೂ ಕೇಳಿಕೊಂಡು ಬಂದಿದ್ದಾರೆ. ಯಕ್ಷಗಾನ, ನೃತ್ಯ ಹಾಗೂ ಅಂದ್ರೇ ಸುಹಾನಾಗೆ ಮುಂಚಿಂದಲೂ ಅಚ್ಚುಮೆಚ್ಚು. ಧಾರ್ಮಿಕ ಕಟ್ಟಲೆಗಳನ್ನು ಹೇರಲಾಗುತ್ತಿರುವ ಸಮಯದಲ್ಲಿ ಸುಹಾನ ಅವರ ದಿಟ್ಟ ನಡೆ ಇನ್ನಷ್ಟು ಜನರಿಗೆ ಸ್ಪೂರ್ತಿ ನೀಡಲಿದೆ.

ಮನೋರಂಜನಾ ಕಾರ್ಯಕ್ರಮವೊಂದರ ವೇದಿಕೆಯೊಂದರಿಂದ ರಾಜಕೀಯ ಸಂದೇಶವೊಂದು ಹೊರಬೀಳುತ್ತಿದ್ದಂತೆಯೇ ಸಮಾಜದ ಒಂದು ವರ್ಗ ಪ್ರತಿಕ್ರಿಯಿಸಲು ಈಗ ಶುರುಮಾಡಿದೆ. ಮೊದಲ ಹೆಜ್ಜೆಯಾಗಿ ಸಂಗೀತ ಕಾರ್ಯಕ್ರಮದ ವೇದಿಕೆಯನ್ನು ಹತ್ತಿದ ಸುಹಾನ ಸೈಯದ್ ವಿರುದ್ಧ ವಾಟ್ಸಾಪ್, ಫೇಸ್‍ಬುಕ್‍ನಂತಹಾ ಸಾಮಾಜಿಕ ಜಾಲತಾಣಗಳಲ್ಲಿ ಅಕ್ಷರಗಳ ಸರಮಾಲೆಯನ್ನು ಹರಿದು ಬಿಡಲಾಗುತ್ತಿದೆ.

ಕಲೆಗೆ ಜಾತಿ, ಮತ, ಪಂಥ, ಭಾಷೆಯ ಭೇದವಿಲ್ಲ. ಇವೆಲ್ಲವನ್ನ ಮೀರಿ ನಿಂತಿರೋದೇ ಕಲೆ. ಆ ಕಲೆ ಎಲ್ಲರಿಗೂ ಒಲಿಯೋದು ಇಲ್ಲ. ಆದ್ರೆ ಆ ಕಲೆಯನ್ನ ಪ್ರದರ್ಶಿಸಬೇಕಾದ್ರೆ ಬಹಳಷ್ಟು ಬಾರಿ ಸಾಮಾಜಿಕ ಕಟ್ಟಳೆಗಳನ್ನ ಮುರಿದು ಮುಂದೆ ಸಾಗಬೇಕಾಗುತ್ತದೆ. ಹಾಗೇ ತನಗಿದ್ದ ಎಲ್ಲಾ ಅಡ್ಡಿಗಳನ್ನ ಮೆಟ್ಟಿ, ತನ್ನ ಕಲೆಯನ್ನ ಪ್ರದರ್ಶಿಸೋಕೆ ಬಂದಿರೋ ಹೆಣ್ಣು ಸುಹಾನ.

ಫೇಸ್‍ಬುಕ್, ವಾಟ್ಸಪ್‍ನಲ್ಲಿ ಚರ್ಚೆ
ಆದ್ರೆ ಸುಹಾನಳ ಈ ಪ್ರತಿಭೆಯನ್ನ ಗುರುತಿಸಿ ಚಪ್ಪಾಳೆ ತಟ್ಟಬೇಕಾದ ಅದೆಷ್ಟೋ ಕೈಗಳು ಮಾತ್ರ ಇಂದು ಸಾಮಾಜಿಕ ಜಾಲತಾಣದಲ್ಲಿ ಬಿರುಸಿನಿಂದ ಅಕ್ಷರಗಳನ್ನ ಟೈಪ್ ಮಾಡಿ, ಧರ್ಮದ ಬಣ್ಣ ಮೆತ್ತಿ ಜಾತಿ ಸಂಘರ್ಷದ ರಣಕಹಳೆಯನ್ನ ಮೊಳಗಿಸೋ ಪ್ರಯತ್ನದಲ್ಲಿದೆ. ಫೇಸ್‍ಬುಕ್, ವಾಟ್ಸಾಪ್‍ನಲ್ಲಿ ಕಳೆದ ಐದಾರು ದಿನಗಳಿಂದ ಸುಹಾನಳದ್ದೇ ಚರ್ಚೆ. ಪರ-ವಿರೋಧಗಳ ಕೆಸರೆರಾಚಾಟ. ದೇವರನಾಮ ಹಾಡಿದ್ದಕ್ಕೆ ಶುರುವಾದ ಈ ಚರ್ಚೆ ಸದ್ಯ ಆಕೆಯ ಕುಟುಂಬಕ್ಕೆ ಮತಾಂಧರ ಜೀವ ಬೆದರಿಕೆಯ ತನಕ ಬಂದು ಮುಟ್ಟಿದೆ.

ಮಂಗಳೂರು ಮುಸ್ಲಿಂ ಅನ್ನೋ ಫೇಸ್‍ಬುಕ್ ಪೇಜ್‍ನಲ್ಲಿ ಸುಹಾನಳ ಬಗ್ಗೆ ಬರೆದಿರೋ ಪೋಸ್ಟ್‍ಗಳನ್ನ ಗಮನಿಸಿದ್ರೆ ನಮ್ಮ ಸಮಾಜದ ಅಂಧತ್ವದ ಅರಿವಾಗುತ್ತೆ. ಆ ಪೇಜ್‍ನಲ್ಲಿ “ಸುಹಾನಾಜಿ ಕ್ಯಾಬಾತ್ ಹೈ..!! ಕ್ಯಾ ಬಾತ್ ಹೈ..!” ಹೆಡ್‍ಲೈನ್ ಹಾಕಿ ಆಕೆಯನ್ನು ನಿಂದಿಸಿ ಬರೆಯಲಾಗಿದೆ.

ಇದನ್ನೂ ಓದಿ: ಮುಸ್ಲಿಂ ಯುವತಿ ಸುಹಾನಗೆ ಸಚಿವ ಖಾದರ್ ಬೆಂಬಲ

ಪೇಜ್‍ನಲ್ಲಿ ಏನಿದೆ?
ಸುಹಾನಾ ಎಂಬ ಮುಸ್ಲಿಂ ನಾಮವನ್ನಿಟ್ಟುಕೊಂಡು ಮುಂದೊಂದು ದಿನ ಇಡಿ ಮುಸ್ಲಿಂ ಸಮುದಾಯದ ಸತ್ಯ ವಿಶ್ವಾಸಿನಿಯರ ಪಾಲಿಗೆ ಕಳಂಕಿತರಾಗಲು ಹೊರಟ ಒಬ್ಬಳು ನಾಮಧಾರಿ ಪರ್ದಾದಾರಿಣಿಯಾದ ಮುಸ್ಲಿಂ ಹೆಣ್ಣು ಅಲ್ಲಹನು ತನ್ನ ಔದಾರ್ಯದಿಂದ ಅನುಗ್ರಹವಾಗಿ ಕೊಟ್ಟ ಶಬ್ದದಿಂದ ಅಲ್ಲಾಹನು ಮತ್ತು ಅವನ ಪ್ರವಾದಿ ಸ.ಅರವರ ಕಲ್ಪನೆಯನ್ನು ಕಡೆಗಣಿಸಿ ಅನ್ಯ ಸಮುದಾಯದ ಅನ್ಯಪುರುಷರ ಮುಂದೆ ತನ್ನ ಸೌಂದರ್ಯವನ್ನು ಪ್ರದರ್ಶಿಸಿ ವೇದಿಕೆಯಲ್ಲಿ ನಿಂತು ಸಿನಿಮಾ ಹಾಡುಗಳನ್ನು ಹಾಡಿ ರಿಯಾಲಿಟಿ ಶೋನ ತೀರ್ಪುಗಾರರಿಂದ ಪ್ರಶಂಸಿಸಲ್ಪಟ್ಟು ತಾನೇನೋ ಮಹಾಸಾಧನೆ ಮಾಡಿದ್ದೇನೆಂದು ಭಾವಿಸಿದ್ದಾಳೆ.

ಸುಹಾನ ನೀನೇನೋ ಮಹಾಸಾಧನೆ ಮಾಡಿದ್ದೀಯೆಂದು ಭಾವಿಸಬೇಡ. ಇಂಪಾದ ಶಬ್ಧದಿಂದ ಸಿನಿಮಾ ಹಾಡುಗಳನ್ನು ಅನುಕರಿಸಿ ಹಾಡುವುದು ನೀನಂದು ಕೊಂಡ ಹಾಗೆ ಮಹಾಸಾಧನೆ ಏನಲ್ಲ. ಇಸ್ಲಾಂಮಿನ ಅದೆಷ್ಟೋ ಪುಟಾಣಿ ಮಕ್ಕಳು ಪವಿತ್ರ ಖುರಾನಿನ 6236 ಆಯತ್‍ಗಳಿರುವ 114 ಅಧ್ಯಾಯ ಗಳನ್ನೊಳಗೊಂಡ 604 ಪುಟಗಳನ್ನು ಕೇವಲ 8,10,15,20, ತಿಂಗಳ ಒಳಗೆ ಸಂಪೂರ್ಣ ಕಂಠಪಾಠ ಮಾಡಿದ ಪುಟಾಣಿಗಳ ಮುಂದೆ ನಿನ್ನ ಪ್ರತಿಭೆ ಏನೂ ಅಲ್ಲ. ನಿನ್ನ ಇಂಪಾದ ಸಿನಿಮಾ ಹಾಡುಗಳು ಅವರು ಓದುವ ಖುರಾನಿನ ಆಯತ್‍ಗಳ ಮಾಧುರ್ಯದ ಮುಂದೆ ನಗಣ್ಯ.

ನಿನ್ನ ಅಪೇಕ್ಷೆಯು ನಿನ್ನಲ್ಲಿರುವ ಪ್ರತಿಭೆಗೆ ಯಾವುದೇ ರೀತಿಯ ಕಟ್ಟುಪಾಡುಗಳು ಯಾವುದೇ ತೊಂದರೆಗಳು ಅಡ್ಡಿಬರಬಾರದು ಎಂಬುದಾಗಿತ್ತಲ್ಲವೆ, ನಿನಗೆ ಜನ್ಮಕೊಟ್ಟ ತಂದೆ ತಾಯಿಗಳೆ ಅಡ್ಡಿಬಾರದೆ ನಿನ್ನನ್ನು ಪ್ರೋತ್ಸಾಹಿಸಿ ಹತ್ತು ಜನರೀಗ ನಿನ್ನ ಸೌಂದರ್ಯವನ್ನೂ ನಿನ್ನ ಶಬ್ಧವನ್ನು ಪ್ರದರ್ಶಿಸಿ ಅವರಿಗೆ ಆಸ್ವಾದಿಸಲು ಸಕಲ ಸೌಕರ್ಯಗಳನ್ನು ಮಾಡಿಕೊಟ್ಟಿರುತ್ತಾರೆ. ಆದರೆ ಪಾಪ ಅವರಿಗೆ ತಿಳಿದಿಲ್ಲ ಖಯಾಮತ್ ದಿನದಂದು ಅವರು ಮಾಡಿದ ಒಳಿತು ಕೆಡಕುಗಳ ವಿಚಾರಣೆ ನಡೆದಾಗ ಒಳಿತುಗಳೇ ಹೆಚ್ಚಾಗಿ ಸ್ವರ್ಗ ಪ್ರವೇಶಿಸಲು ಅವರಿಗೆ ಅನುಮತಿ ಸಿಕ್ಕಿದಾಗ ನೀನು ಅವರಿಗೆ ತಡೆಯಾಗಿ ನಿಲ್ಲುತ್ತಿ ಎಂಬ ವಿಷಯ..!!!
ಖುರಾನ್ ಕಂಠಪಾಠ ಮಾಡಿದ ಆ ಮಕ್ಕಳ ತಂದೆ ತಾಯಂದಿರಿಗೆ ಅಲ್ಲಾಹನು ಸ್ವರ್ಗದಲ್ಲಿ ಕಿರೀಟವನ್ನು ಧರಿಸಿ ಸನ್ಮಾನಿಸುವ ಆ ಸಂದರ್ಭದಲ್ಲಿ ನಿನ್ನ ಹೆತ್ತವರು ತನ್ನ ಮಗಳ ಪ್ರತಿಭೆಯಿಂದ ಸಂಘಿತ ನಿರ್ದೇಶಕರ ಪ್ರಶಂಸೆಯಿಂದ ತೃಪ್ತಿ ಪಡಬೇಕಾಗಿ ಬರುತ್ತದಲ್ಲದೆ ಅಲ್ಲಾಹುನ ವಿಚಾರಣೆಗೆ ಒಳಪಡಬೇಕಾಗಿ ಬರುವುದು.

ನೀನೇನೋ ನರಕದ ಹಾದಿ ಹಿಡಿದಿದ್ದೀಯ ಅದು ಸಾಲದೆ ಉಳಿದವರನ್ನು ಬರಮಾಡಿಕೊಳ್ಳಲು ನಿನ್ನನ್ನು ಮಾದರಿಯಾಗಿ ಸ್ವೀಕರಿಸಬೇಕೆಂದು ಅವರಿಗೆ ಧೈರ್ಯ ಕೊಡುತ್ತೀಯಾ, ಯಾಕೆ ಇನ್ನುಳಿದ ಸತ್ಯವಿಶ್ವಾಸಿನಿಯರನ್ನು ವಿನಾಶದೆಡೆಗೆ ಧುಮುಕಲು ಪ್ರೇರೆಪಿಸುತ್ತೀಯಾ..? ನೀನು ಮುಸ್ಲಿಂ ಸ್ತ್ರೀಯರಿಗೆ ಮಾದರಿಯಾಗಲು ಶ್ರಮಿಸಬೇಡ ಅವರು ಸತ್ಯವಿಶ್ವಾಸಿಗಳಾದ ಮುಮ್ಮಹಾತುಲ್ ಮುಮಿನೀನಾತ್ ಗಳನ್ನು ಮಾದರಿಯಾಗಿ ಸ್ವೀಕರಿಸುತ್ತಿದಾರೆ. ಅವರಿಗೆ ನಿನ್ನ ಹಾಗೆ ರಿಯಾಲಿಟಿ ಷೋಗಳ ವೇದಿಕೆಗಳಲ್ಲಿ ಪ್ರಶಂಸಿಸಲ್ಪಡುವ ಆಗ್ರಹವಿಲ್ಲ. ನಾಳೆ ಪರಲೋಕದಲ್ಲಿ ಅಲ್ಲಾಹುನು ಸತ್ಯವಿಶ್ವಾಸಿಗಳನ್ನು ಪ್ರಶಂಸಿಸಲು ನಿರ್ಮಿಸಲ್ಪಟ್ಟ ಪ್ರತ್ಯೇಕ ವೇದಿಕೆಗಳಲ್ಲಿ ಉನ್ನತ ಸ್ಥಾನವನ್ನು ಗಿಟ್ಟಿಸಲು ಆಗ್ರಹಿಸುತ್ತಿದ್ದಾರೆ.

ಇನ್ನು ನೀನು ಮೈಮೇಲೆ ಹಾಕಿಕೊಂಡ ಬುರ್ಖಾ ಇದೆಯಲ್ಲ ದಯಮಾಡಿ ಅದನ್ನು ಕಳಚಿಡು. ಅದು ನಿನ್ನಮತ ಹೆಣ್ಣಿಗೆ ಭೂಷಣವಲ್ಲ. ಪರ್ದವು ಪವಿತ್ರವಾದದ್ದು ಅದಕ್ಕೆ ಪ್ರತ್ಯೇಕ ಸ್ಥಾನವಿದೆ. ಅದನ್ನು ಹಾಕಿಕೊಳ್ಳುವ ಯೋಗ್ಯತೆ ನಿನಗಿಲ್ಲ. ಅದು ಸತ್ಯವಿಶ್ವಾಸಿನಿಯರ ರಕ್ಷಾ ಕವಚ ಅ ಪವಿತ್ರವಾದ ವಸ್ತ್ರವನ್ನು ಧರಿಸಿ ಲಂಗುಲಗಾಮಿಲ್ಲದ ನಿನ್ನ ಪಯಣವು ಅದರ ಶ್ರೇಷ್ಠತೆಗೆ ಮತ್ತು ಘನತೆಗೆ ಕಳಂಕವಾಗಬಹುದು ನೀನು ಅದನ್ನು ಹಾಕಿದ್ದನ್ನು ನೋಡುವಾಗ ಸಿಗರೇಟ್ ಪ್ಯಾಕ್ನಲ್ಲಿ ಬರೆದ ಆರೋಗ್ಯಕ್ಕೆ ಹಾನಿಕರಕ ಎಂಬ ವಾಕ್ಯ ನೆನಪಿಗೆ ಬರುತ್ತದೆ.

ಇನ್ನೂ ಸಾಮಾಜಿಕ ಜಾಲತಾಣದಲ್ಲಿ ಸದ್ಯ ಸುಹಾನ ಬಗ್ಗೆ ಕೆಲವೊಂದು ವರ್ಗಗಳು ಹಾಕುತ್ತಿರುವ ಕಾಮೆಂಟ್‍ಗಳು ಅಸಹ್ಯದ ಪರಮಾವಾಧಿಯಾಗಿದೆ. ಕೆಟ್ಟ ಕೆಟ್ಟ ಪದಗಳ ಬಳಕೆ ಮಾಡಿ ಹೆಣ್ಣನ್ನು ಕುಗ್ಗಿಸೋ ಎಲ್ಲಾ ಪ್ರಯತ್ನವೂ ಯಾವುದೇ ಅಡ್ಡಿ ಆತಂಕವಿಲ್ಲದ ನಡೆಯುತ್ತಿದೆ.

ಇದನ್ನೂ ಓದಿ: ಸಹಿಷ್ಣುತೆಯ ಪಾಠ ಹೇಳೋ ಲದ್ದಿಜೀವಿಗಳು ಈಗ ಎಲ್ಲಿದ್ದಾರೆ- ಸುಹಾನ ವಿಚಾರದಲ್ಲಿ ಪ್ರತಾಪ್ ಸಿಂಹ ಪ್ರಶ್ನೆ

suhana muslim facebook page 2

ವಿರೋಧ ಯಾಕೆ?
ಕೆಲವೊಂದು ವ್ಯಕ್ತಿಗಳ ಕಾಮೆಂಟ್‍ಗಳನ್ನ ನೋಡಿದ್ರೆ ಮೂಡೋ ಅನುಮಾನ ಮೂರು. ಕೆಲವರಿಗೆ ಸುಹಾನ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರ ಬಗ್ಗೆ ವಿರೋಧವಿಲ್ಲ. ಬದಲಾಗಿ ಆಕೆ ದೇವರ ನಾಮವನ್ನ ಹಾಡಿದ್ದಕ್ಕೆ ವಿರೋಧವಿದೆ. ಇನ್ನೂ ಕೆಲವ್ರಿಗೆ ಆಕೆ ಬುರ್ಖಾ ಹಾಕ್ಕೊಂಡು ಹಾಡಿದ್ದಕ್ಕೆ ವಿರೋಧವಿದೆ. ಮತ್ತೆ ಕೆಲ ಮಂದಿಗೆ ರಿಯಾಲಿಟಿ ಶೋನದಲ್ಲಿ ಮುಸ್ಲಿಂ ಧರ್ಮದ ಹುಡುಗಿಯಾಗಿ ಹಾಡಿದ್ದೇ ತಪ್ಪು ಅನಿಸಿದೆ. ಇದೆಲ್ಲದ್ರ ಹೊರತಾಗಿ ಒಂದಷ್ಟು ವರ್ಗಕ್ಕೆ ಆಕೆ ಹಾಡಿನ ಬಳಿಕ ಮುಸ್ಲಿಂ ಧರ್ಮದ ಕಟ್ಟುಪಾಡುಗಳ ಬಗ್ಗೆ ಮಾತಾಡಿದ್ದಳಲ್ಲಾ. ಆ ವಿಷಯಕ್ಕೆ ವಿರೋಧವಿದೆ. ಹೀಗೆ ಒಟ್ಟಾರೆ ಸುಹಾನ ಈ ಒಂದು ಪರ್ಫಾಮೆನ್ಸ್‍ನಿಂದ ಸಾಕಷ್ಟು ವಿವಾದಕ್ಕೆ ವೇದಿಕೆಯಾಗ್ಬಿಟ್ಟಿದ್ದಾರೆ.

ಇನ್ನು ಕೆಲ ಧಾರ್ಮಿಕ ಮುಖಂಡರ ವಾದದ ಪ್ರಕಾರ ಸಂಗೀತವೇ ಮುಸ್ಲಿಂ ಧರ್ಮದಲ್ಲಿ ಬಾಹಿರವಾಗಿದೆ. ಮುಸ್ಲಿಂ ಧರ್ಮದ ಅನುಸಾರ ಬದುಕೋ ವ್ಯಕ್ತಿಗೆ ಒಂದಷ್ಟು ಕಟ್ಟಳೆಗಳಿವೆ. ಅದ್ರಲ್ಲಿ ಸಂಗೀತವೂ ಒಂದು ಅಲ್ಲಾ, ಪ್ರವಾದಿಗಳನ್ನ ಹೊಗಳೋ ಪದಗಳಷ್ಟೇ ಮುಸ್ಲಿಂ ಧರ್ಮ ಒಪ್ಪುವ ಸಂಗೀತ. ಉಳಿದವೆಲ್ಲವೂ ಧರ್ಮ ವಿರೋಧಿ ಅನ್ನೋ ವಾದವನ್ನ ಮುಂದಿಡ್ತಾರೆ. ಆದ್ರೆ ಅದೇ ಧರ್ಮದ ಇನ್ನೊಂದಷ್ಟು ವಿಚಾರವಾದಿಗಳು ಸುಹಾನ ಬಗ್ಗೆ ಎದ್ದಿರೋ ವಿವಾದಕ್ಕೆ ತಮ್ಮ ಅಸಮಾಧಾನವನ್ನೂ ಹೊರಹಾಕ್ತಾರೆ. ಸಂಗೀತ ಮುಸ್ಲಿಂ ಧರ್ಮದಲ್ಲಿ ನಿಷಿದ್ಧವಲ್ಲ ಅಂತಾರೆ. ಹೀಗೆ ಧಾರ್ಮಿಕ ಮುಖಂಡರ ನಡುವೆಯೇ ಗೊಂದಲಗಳಿವೆ. ಸಂಗೀತಕ್ಕೂ ಧರ್ಮಕ್ಕೂ ತಳುಕು ಹಾಕೋ ಪ್ರಯತ್ನಗಳು ಸಾಗ್ತಿವೆ.

ಈ ಬಗ್ಗೆ ಪ್ರತಿಕ್ರಿಯಿಸಿರೋ ಆಹಾರ ಮತ್ತು ನಾಗರಿಕ ಸಚಿವ ಖಾದರ್, ಮೈಸೂರು ಸಂಸದ ಪ್ರತಾಪ್ ಸಿಂಹ ಸುಹಾನ ಬೆಂಬಲಿಸಿ ಮಾತನಾಡಿದ್ದಾರೆ. ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷ ದ್ವಾರಕನಾಥ್ ತಮ್ಮ ಫೇಸ್‍ಬುಕ್ ಪೇಜ್‍ನಲ್ಲಿ ಬೆಂಬಲ ವ್ಯಕ್ತಪಡಿಸಿ ಬರೆದಿದ್ದಾರೆ

ಧರ್ಮದ ಅಂಧಕಾರದಲ್ಲಿ ಬದುಕೋ ಕೆಲವೊಂದು ವರ್ಗದ ಜನ ಎಲ್ಲಾ ಧರ್ಮದಲ್ಲೂ ಇದ್ದಾರೆ. ಕಣ್ಣಿಗೆ ಅಂಧತ್ವದ ಪಟ್ಟಿ ಕಟ್ಟಿಕೊಂಡವ್ರ ವಾದಗಳನ್ನ ತಿದ್ದೋದು ಕೂಡ ಅಷ್ಟೊಂದು ಸುಲಭವಲ್ಲ. ಅದೆಷ್ಟೋ ಬೆದರಿಕೆ, ಭಯ, ಇವೆಲ್ಲವನ್ನ ಮೆಟ್ಟಿ ನಿಂತು ಧೈರ್ಯದಿಂದ ಮುನ್ನುಗ್ಗೋದೇ ಸಾಹಸ. ಆ ಸಾಹಸದಲ್ಲಿ ಸುಹಾನ ಗೆದ್ದಿದ್ದಾರೆ.

ಇದನ್ನೂ ಓದಿ: ಹೆಣ್ಣು ಮಗಳು ಹಿಂದೂ ಹಾಡನ್ನು ಹಾಡಿದ್ದಕ್ಕೆ ನಾವು ಸಂತೋಷಪಡಬೇಕು: ಭಗವಾನ್

ಧರ್ಮ ಮತ್ತು ಕಲೆ ಎರಡನ್ನೂ ಒಂದು ಮಾಡುವುದು ತಪ್ಪೇ?
ಧರ್ಮ ಮತ್ತು ಕಲೆ ಎರಡನ್ನೂ ಒಂದು ಮಾಡುವುದು ಸರಿಯೋ ತಪ್ಪೊ? ಹೀಗಂತ ಕೇಳಿದರೆ ನಿಜಕ್ಕೂ ಕಲೆಯ ಆರಾಧಕರು ಹೇಳುವುದು ಒಂದೇ ಮಾತು. ಯಾವ ಕಾರಣಕ್ಕೂ ಧರ್ಮ ಮತ್ತು ಕಲೆಯನ್ನು ಬೆರೆಸಬಾರದು. ಯಾಕೆಂದರೆ ಕಲೆಗೆ ಯಾವುದೇ ಜಾತಿ, ಧರ್ಮ ಮತ್ತು ಲಿಂಗಭೇದ ಇಲ್ಲ. ಆದರೆ ಸುಹಾನ ವಿಷಯದಲ್ಲಿ ಮಾತ್ರ ಇದು ಉಲ್ಟಾ ಆಗಿದೆ. ಆಕೆ ಹಾಡಿದ್ದು ತಪ್ಪು, ಹಿಂದೂ ಧರ್ಮದ ಗೀತೆಗೆ ಧ್ವನಿ ನೀಡಿದ್ದೂ ತಪ್ಪು, ಅದರಲ್ಲೂ ಬುರ್ಖಾ ಹಾಕಿಕೊಂಡು ಹಾಡಿದ್ದಂತೂ ಮಹಾ ಅಪರಾಧ ಎನ್ನುವ ಮಾತು ಕೇಳಿ ಬರುತ್ತಿವೆ. ಹಾಗಾದ್ರೆ ಮುಸ್ಲಿಂ ಧರ್ಮಕ್ಕೆ ಸೇರಿದ ಯಾರೂ ಈ ಹಿಂದೆ ಸಂಗೀತವನ್ನೇ ಜೀವನ ಮಾಡಿಕೊಂಡಿಲ್ಲವೆ? ಹಲವಾರು ಪುರುಷರು ಮತ್ತು ಸ್ರ್ತೀಯರು ಸಂಗೀತಕ್ಕೆ ಸೇವೆ ಸಲ್ಲಿಸಿಲ್ಲವೆ? ಆಗಿಲ್ಲದ ವಿರೋಧ ಈಗೇಕೆ ಎನ್ನುವ ಪ್ರಶ್ನೆ ಎದ್ದಿದೆ.

ಸುಹಾನ ಏಕಾಏಕಿ ಆಕೆ ಲೈಮ್‍ಲೈಟಿಗೆ ಬಂದಿದ್ದಾರೆ. ಈಕೆ ಬುರ್ಕಾ ತೊಟ್ಟು ಹಿಂದೂ ಗೀತೆಯನ್ನು ಹಾಡಿರುವುದು, ನನ್ನಿಂದ ಇನ್ನಷ್ಟು ಮುಸ್ಲಿಂ ಹುಡುಗಿಯರ ಪ್ರತಿಭೆ ಬೆಳಕಿಗೆ ಬರಲಿ ಎನ್ನುವ ಈಕೆಯ ಮಾತು. ಅದೂ ರಿಯಾಲಿಟಿ ಶೋವೊಂದರಲ್ಲಿ ಎಲ್ಲರ ಮುಂದೆ ಬುರ್ಕಾ ಹಾಕಿಕೊಂಡು ಇಷ್ಟೊಂದು ಧೈರ್ಯದಿಂದ ಹೇಳಬೇಕೆಂದರೆ ಈಕೆಗ ನಮ್ಮ ಧರ್ಮದ ಬಗ್ಗೆ ಗೌರವ ಇಲ್ಲ ಎಂದರ್ಥ ಎನ್ನುವುದು ಮುಸ್ಲಿಂ ಮೂಲಭೂತವಾದಿಗಳ ಕಂಪ್ಲೆಂಟು.

ಮುಸ್ಲಿಂ ಧರ್ಮದಿಂದ ಈಕೆಯನ್ನು ಬಹಿಷ್ಕಾರ ಹಾಕಬೇಕೆಂದು ಹೇಳುತ್ತಿದ್ದಾರೆ. ಹಾಗಾದ್ರೆ ಇವರ ಪ್ರಕಾರ ಮುಸ್ಲಿಂ ಹುಡುಗಿಯರು ಸಂಗೀತ ಕಲಿಯಬಾರದೆ? ಹಾಡಿಗೆ ಧ್ವನಿ ನೀಡಬಾರದೆ? ಇದನ್ನೇ ಮೂಲಭೂವಾದ ಅನ್ನೋದು. ಇಷ್ಟೆಲ್ಲಾ ಮಾತಾಡುವ ಇವರು ಈ ಹಿಂದೆ ಎಷ್ಟೊ ಗಾಯಕರು, ಗಾಯಕಿಯರು, ಸಂಗೀತಗಾರರು, ಸಿನಿಮಾ ನಟ ನಟಿಯರು ಮುಸ್ಲಿಂ ಧರ್ಮದಲ್ಲಿದ್ದುಕೊಂಡೇ ಪ್ರತಿಭೆ ಹೊರ ಹಾಕಿದರಲ್ಲ ಅಗೇಕೆ ಇವರ ಬಾಯಿ ಮುಚ್ಚಿಕೊಂಡಿತ್ತು. ಅದಕ್ಕೆ ಹಲವಾರು ಉದಾಹರಣೆಗಳಿವೆ.

ಗಂಡಸರಿಗೆ ನ್ಯಾಯ, ಹೆಂಗಸರಿಗೆ ಅನ್ಯಾಯದ ಕಾವು !
ತುಂಬಾ ದೂರ ಹೋಗುವುದು ಬೇಡ. ನಮ್ಮ ಶಿಶುನಾಳ ಶರೀಫರನ್ನೇ ತೆಗೆದುಕೊಳ್ಳಿ. ಈಗಲೂ ಅವರ ಒಂದೇ ಹಾಡು ಕೇಳಿದರೆ ಮುಖ ಅರಳಿಸದ ಹಿಂದೂವೂ ಇಲ್ಲ ಮುಸ್ಲಿಂ ಕೂಡ ಇಲ್ಲ. ಸಂತ ಕಬೀರರ `ದೋಹಾ’ಗಳಂತೂ ಹೊಸ ಪಂಥವನ್ನೇ ಹುಟ್ಟುಹಾಕಿತು. ಜಾತಿ ಧರ್ಮಗಳನ್ನು ಮೀರಿದ ಅವರ ತತ್ವ ಪದಗಳನ್ನು ಇಟ್ಟುಕೊಂಡೇ ಕನ್ನಡದಲ್ಲಿ ಶಿವಣ್ಣ ಅಭಿನಯದ ಸಂತೆಯಲ್ಲಿ ನಿಂತ ಕಬೀರ ಸಿನಿಮ ಕೂಡ ಬಂದಿತ್ತು.ನಮ್ಮ ಜೊತೆಗಿಲ್ಲದ ಸಿ.ಅಶ್ವತ್ಥ್ ಕನ್ನಡವೇ ಸತ್ಯ ಎನ್ನುವ ಕರ್ನಾಟಕದ ಇತಿಹಾಸದಲ್ಲೇ ಅಮರ ಸಂಗೀತ ಸಂಜೆ ಕಾರ್ಯಕ್ರಮ ಮಾಡಿದರು. ಅಲ್ಲಿ ಅವರು ಕಟ್ಟ ಕಡೆಯದಾಗಿ ಶಿಶುನಾಳ ಶರೀಫರ ‘ತರವಲ್ಲ ತಗಿ ನಿನ್ನ ತಂಬೂರಿ ಸ್ವರ ಆಯ್ಕೆ ಮಾಡಿಕೊಂಡು ಕಾರ್ಯಕ್ರಮ ಮುಗಿಸಿದ್ರು.

ಕನ್ನಡ ಚಿತ್ರರಂಗದ ಗೀತ ಸಾಹಿತಿ ಕರೀಂಖಾನ್ ಎಷ್ಟೊ ಜನರಿಗೆ ಗೊತ್ತಿಲ್ಲ. ಅವರು ಕನ್ನಡದ ಒಂದು ಚಿತ್ರಕ್ಕೆ ಬರೆದ ಹಾಡನ್ನು ಕೇಳಿದರೆ ಅವರ ಸಾಹಿತ್ಯ ಪ್ರೀತಿ ಅರ್ಥವಾಗುತ್ತದೆ. ಇದನ್ನೆಲ್ಲಾ ನೋಡುತ್ತಿದ್ದರೆ ಈ ಮತಾಂಧರು ಆಗ ಯಾಕೆ ಇವರನ್ನು ವಿರೋಧಿಸಲಿಲ್ಲ. ಶರೀಫ ಮತ್ತು ಕರೀಖಾನ್‍ಗಾದರೆ ಮಾಫಿ. ಸುಹಾನಾಗೆ ವಿವಾದದ ಟ್ರೋಫಿನಾ? ನಮ್ಮ ಜೊತೆಗಿಲ್ಲದ ಬಾಲಿವುಡ್‍ನ ಖ್ಯಾತ ಹಿನ್ನೆಲೆ ಗಾಯಕರಾದ ಮಹ್ಮದ್ ರಫಿ ಅವರ ಹಾಡುಗಳ ಮಾಧುರ್ಯಕ್ಕೆ ಮನ ಸೋಲದವರು ಇದ್ದಾರಾ?

ಇನ್ನು ಬಾಲಿವುಡ್‍ನ ಶೋ ಮ್ಯಾನ್‍ಗೆ ಕಂಠವೇ ಆಗಿದ್ದು ಮುಖೇಶ್, ದರ್ದಭರೀ ಗೀತೆಗಳನ್ನು ಹಾಡುಗಳನ್ನು ಕೇಳುತ್ತಿದ್ದರೆ ಪ್ರೇಮದಲ್ಲಿ ತಲ್ಲಣಗೊಂಡವರು ಕಣ್ಣೀರಾಗುತ್ತಿದ್ದರು. ಇವರಿಗೆಲ್ಲರಿಗಿಂತ ಮುಂಚೆ ಯುವಕ ಯುವತಿಯರ ಹೃದಯಕ್ಕೆ ಕಿಚ್ಚು ಹಚ್ಚಿದ್ದು ತಲತ್ ಮೆಹಮೂದ್. ಅವರನ್ನು ಮಿಮಿಕ್ರಿ ಮಾಡಿ ಹಾಡುವುದೇ ಅಂದಿನ ಕಾಲೇಜು ಹುಡುಗರ ಹವ್ಯಾಸವಾಗಿತ್ತು. ರಾಮ್ ಗೋಪಾಲ್‍ವರ್ಮಾ ನಿರ್ದೇಶನದ ರಂಗೀಲಾ ಚಿತ್ರಕ್ಕೆ ಕಿಕ್ ಕೊಡುವ ಹಾಡನ್ನು ಬರೆದದ್ದು ಮೆಹಬೂಬ್ ಎನ್ನುವ ಮುಸ್ಲಿಂ. ಸುರಯ್ಯಾ ಎನ್ನುವ ಮಹಾನ್ ನಾಯಕಿ ಕಮ್ ಗಾಯಕಿ ದಶಕಗಳ ಹಿಂದೆಯೇ ಹಾಡುಗಳ ಮೂಲಕ ಹೊಸ ಹಾದಿಯನ್ನು ಮುಸ್ಲಿಂ ಹೆಂಗಸರಿಗೆ ತೋರಿಸಿದ್ದರು.

ಬಾಲಿವುಡ್ ನಟರಾದ ಅಮೀರ್, ಶಾರೂಖ್ ಮತ್ತು ಸಲ್ಮಾನ್ ಗಂಡಸರು ಎನ್ನುವ ಕಾರಣಕ್ಕೆ ಮೂಲಭೂತವಾದಿಗಳು ಸೈಲೆಂಟಾಗಿದ್ದೀರಾ ? ಮುಸ್ಲಿಂ ಧರ್ಮಕ್ಕೆ ಸೇರಿದ ಅನೇಕ ನಟಿಯರು ಎಲ್ಲಾ ಭಾಷೆಯ ಚಿತ್ರರಂಗದಲ್ಲಿ ಇದ್ದಾರೆ. ಅವರಿಗಿಲ್ಲದ ಪ್ರಶ್ನೆ ಸುಹಾನಾಗೆ ಯಾಕೆ ಎನ್ನುವುದು ಎಲ್ಲರ ಆಕ್ರೋಶ. ಇನ್ನೊಂದು ವಿಷಯ ಡಾ.ರಾಜ್‍ಕುಮಾರ್ ಅಭಿನಯದ ಸನಾದಿ ಅಪ್ಪಣ್ಣ ಚಿತ್ರದಲ್ಲಿ ಶಹನಾಯಿ ನುಡಿಸಿದ್ದು ಬೇರಾರೂ ಅಲ್ಲ. ದಿ ಗ್ರೇಟ್ ಬಿಸ್ಮಿಲ್ಲಾ ಖಾನ್. ಪಾಕಿಸ್ತಾನದ ನುಸ್ರತ್ ಫತೇ ಅಲಿಖಾನ್ ಹಾಡಲು ಕುಳಿತರೆ ಪಿನ್ ಡ್ರಾಪ್ ಸೈಲೆಂನ್ಸ್ ಇರುತ್ತೆ.

ಸಲ್ಮಾನ್ ಖಾನ್ ಮನೆಯಲ್ಲಿ ಗಣೇಶನ ಹಬ್ಬಕ್ಕೆ ಕೊಟ್ಟ ಪ್ರಾಮುಖ್ಯತೆಯನ್ನೇ ರಂಜಾನ್‍ಗೂ ಕೊಡುತ್ತಾರೆ. ಯಾಕೆಂದರೆ ಸಲ್ಲು ತಂದೆಯ ಪತ್ನಿಯರಲ್ಲಿ ಒಬ್ಬರು ಹಿಂದೂ ಇನ್ನೊಬ್ಬರು ಮುಸ್ಲಿಂ. ಭಜರಂಗಿ ಭಾಯಿಜಾನ್ ಚಿತ್ರದಲ್ಲಿ ಸಲ್ಮಾನ್, ಹನುಮಂತನ ಭಕ್ತನಾಗಿ ನಟಿಸಿದ್ದಕ್ಕೆ ಈ ಜನ ಏನು ಹೇಳ್ತಾರೆ?

ಈ ಮುಸ್ಲಿಂ ಮೂಲಭೂತವಾದಿಗಳು ಒಂದನ್ನು ತಿಳಿದುಕೊಳ್ಳಬೇಕು. ಒಬ್ಬ ಕಲಾವಿದ, ಸಂಗೀತಗಾರ, ಕಲಾರಾಧಕ, ಇವರೆಲ್ಲ ಯಾವುದೇ ಧರ್ಮಕ್ಕೆ ಸೇರಿದವರಲ್ಲ. ಅವರಿಗೆ ಜಾತಿ ಮತ್ತು ಧರ್ಮ ಇಲ್ಲ. ಇಲ್ಲಿವರೆಗೆ ಇಲ್ಲದ ಈ ನಿಯಮವನ್ನು ಸುಹಾನ ವಿವಾದದಿಂದ ಮುರಿಯಲು ಹೊರಟಿದ್ದಾರೆ. ಇಂಥವರನ್ನು ಏನು ಮಾಡಬೆಕೆಂದು ನೀವೇ ನಿರ್ಧರಿಸಿ. ಸುಹಾನ ಬದುಕು ಸಫರ್ ಆಗದಿರಲಿ ಎನ್ನವುದು ಸಂಗೀತ ಪ್ರೇಮಿಗಳ ಆಶಯ.

https://www.youtube.com/watch?v=-1cdz0_sRnA

Related Articles

Leave a Reply

Your email address will not be published. Required fields are marked *