ಬೆಳಗಾವಿ: ಬೆಳಗಾವಿಯಲ್ಲಿ (Belagavi) ನಡೆಯುತ್ತಿರುವ ಕಬ್ಬಿನ (Sugarcane) ದರ ನಿಗದಿ ಹೋರಾಟ ಮತ್ತೊಂದು ಮಜಲು ಪಡೆಯುವ ಸಾಧ್ಯತೆಗಳು ದಟ್ಟವಾಗಿ ಕಾಣಿಸುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿಯೇ ಇಬ್ಬರು ಸಚಿವರಿದ್ದರೂ ಸಹ ಹಿರಿಯ ಸಚಿವ ಹೆಚ್‌ಕೆ ಪಾಟೀಲ್ ಅವರನ್ನು ಪ್ರತಿಭಟನಾ ಸ್ಥಳಕ್ಕೆ ಕಳುಹಿಸಿ ಸಂಧಾನ ಮಾಡುವ ಪ್ರಯತ್ನಕ್ಕೆ ರಾಜ್ಯ ಸರ್ಕಾರ ಕೈ ಹಾಕಿತು. ಆದರೆ ರೈತರು (Farmers) ಅದಕ್ಕೆ ಸೊಪ್ಪು ಹಾಕಲಿಲ್ಲ. ಹೀಗಾಗಿ ಇಂದೂ ಸಹ ಹೋರಾಟ ಮುಂದುವರೆಯಲಿದೆ.
ಕಬ್ಬಿನ ದರ ನಿಗದಿಗಾಗಿ ಬೆಳಗಾವಿ ಜಿಲ್ಲೆಯ ರೈತರು ನಡೆಸುತ್ತಿರುವ ಹೋರಾಟ ಎಂಟನೇ ದಿನಕ್ಕೆ ಕಾಲಿಡುತ್ತಿದೆ. ಈವರೆಗೂ ಹಲವು ಸಂಘ ಸಂಘಟನೆಗಳು ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿವೆ. ಅದರಲ್ಲೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪ್ರತಿಭಟನೆಯ ಆಖಾಡಕ್ಕೆ ಇಳಿದ ನಂತರ ರೈತರ ಹೋರಾಟ ತೀವ್ರಗತಿಯಲ್ಲಿ ಸಾಗುತ್ತಿದೆ. ಗುರ್ಲಾಪುರದ ಕ್ರಾಸ್ ಬಳಿ ರೈತರು ನಡೆಸುತ್ತಿರುವ ಹೋರಾಟದ ಸ್ಥಳಕ್ಕೆ ಹಿರಿಯ ಸಚಿವ ಹೆಚ್‌ಕೆ ಪಾಟೀಲ್ ಭೇಟಿ ನೀಡಿ ರೈತರ ನಿವೇದನೆ ಆಲಿಸಿದರು. ಅಲ್ಲದೇ ಇತ್ಯರ್ಥಕ್ಕೆ ಎರಡು ದಿನ ಸಮಯಾವಕಾಶವನ್ನೂ ಸಹ ಸಚಿವರು ಕೇಳಿದರು. ಅಲ್ಲದೇ ರೈತ ಮುಖಂಡರು ಬಂದು ಬುಧವಾರ ಬೆಂಗಳೂರಿನಲ್ಲಿ ಸಿಎಂ ಸಮ್ಮುಖದಲ್ಲಿ ಸಭೆ ಮಾಡೋಣ. ಬಳಿಕ ಕಾರ್ಖಾನೆ ಮಾಲೀಕರೊಂದಿಗೆ ಸಭೆ ಮಾಡಿ ಶುಕ್ರವಾರ ಮಧ್ಯಾಹ್ನದ ವೇಳೆಗೆ ರೈತರ ಬೇಡಿಕೆ ಈಡೇರಿಸುವುದಾಗಿ ಹೇಳಿದರು. ಆದರೆ ಸಂಧಾನ ವಿಫಲಗೊಂಡಿದೆ. ಇದನ್ನೂ ಓದಿ: ಇಂದು ಬಿಹಾರದಲ್ಲಿ ನಡೆಯಲಿದೆ ಮೊದಲ ಹಂತದ ಚುನಾವಣೆ
ಅತ್ತ ವಿಜಯಪುರ (Vijayapura) ನಗರದ ಡಿಸಿ ಕಛೇರಿ ಬಳಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಭೇಟಿ ನೀಡಿದ ಸಚಿವ ಎಂ.ಬಿ. ಪಾಟೀಲ್, ನಮ್ಮ ಸಿಎಂ ಸಿದ್ದರಾಮಯ್ಯ ಯಾವ ಸಕ್ಕರೆ ಕಾರ್ಖಾನೆಗಳ ಪರವಾಗಿ ಇಲ್ಲ. ಸಿಎಂ ರೈತರ ಪರವಾಗಿದ್ದಾರೆ. ರಾಜ್ಯ ಸರ್ಕಾರ ಕೂಡ ರೈತ ಪರವಾಗಿ ಇದೆ. ತಮ್ಮ ಎಲ್ಲ ಬೇಡಿಕೆಗಳ ಬಗ್ಗೆ ಗುರುವಾರ ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ ಸಿಎಂ ಜೊತೆ ಚರ್ಚೆ ಮಾಡುತ್ತೇವೆ ಎಂದು ಮನವೊಲಿಸಲು ಯತ್ನಿಸಿದರು. ಇದನ್ನೂ ಓದಿ: ವಿಶ್ವಕಪ್ ಗೆದ್ದಿದ್ದಕ್ಕೆ ಟ್ಯಾಟೂ ಹಾಕಿಸಿಕೊಂಡ ಟೀಂ ಇಂಡಿಯಾ ನಾಯಕಿ ಹರ್ಮನ್‌ಪ್ರೀತ್ ಕೌರ್
ಇಂದು ಸಂಜೆವರೆಗೆ ಸರ್ಕಾರಕ್ಕೆ ಡೆಡ್‌ಲೈನ್:
ಬೆಳಗಾವಿ ಹಾಗೂ ವಿಜಯಪುರ ಕಬ್ಬು ಹೋರಾಟಗಾರರು ಸಚಿವರ ಮನವಿಗೆ ಮಣೆ ಹಾಕದೇ ಇಂದು ಸಂಜೆವರೆಗಿನ ಡೆಡ್‌ಲೈನ್ ಕೊಟ್ಟಿದ್ದಾರೆ. ನಾವು ಬೆಂಗಳೂರಿಗೆ ಬರಲ್ಲ. ಸಿಎಂ ಸಿದ್ದರಾಮಯ್ಯ ಹಾಗೂ ಕಾರ್ಖಾನೆ ಮಾಲೀಕರೊಂದಿಗೆ ನೀವೇ ಸಭೆ ಮಾಡಿ. ಇಂದು ಸಂಜೆ ತನಕ ಟೈಂ ಕೊಟ್ಟಿದ್ದಾರೆ. ನಮ್ಮ ಪರವಾಗಿ ಡಿಸಿ-ಎಸ್‌ಪಿಯವರನ್ನು ಕರೆದು ನಿರ್ಧಾರ ಅಂತಿಮಗೊಳಿಸಿ ಎಂದು ಪಟ್ಟು ಹಿಡಿದರು. ಸಚಿವರ ಕಾರ್‌ಗೆ ಅಡ್ಡಲಾಗಿ ಮಲಗಿದರು. ಇದನ್ನೂ ಓದಿ: ಮಂತ್ರಾಲಯದಲ್ಲಿ ತುಂಗಾರತಿ ವೈಭವ – ಗುರುರಾಯರ ಮಠದಲ್ಲಿ ಕಳೆಗಟ್ಟಿದ ದೀಪೋತ್ಸವ
ಇಂದು ಸಂಜೆಯವರೆಗೆ ಮಾತ್ರ ರಾಜ್ಯ ಸರ್ಕಾರಕ್ಕೆ ತನ್ನ ನಿಲುವ ಸ್ಪಷ್ಟಪಡಿಸಲು ರೈತರು ಗಡುವು ನೀಡಿದ್ದಾರೆ. ಸಂಜೆಯೊಳಗೆ ರಾಜ್ಯ ಸರ್ಕಾರ ಸ್ಪಷ್ಟ ನಿಲುವಿಗೆ ಬರದಿದ್ದರೆ ಪಂಜಾಬ್ ಮಾದರಿ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಬೀದರ್ | ದೇವರ ದರ್ಶನ ಮುಗಿಸಿ ವಾಪಸಾಗುತ್ತಿದ್ದಾಗ ಭೀಕರ ಅಪಘಾತ – ನಾಲ್ವರು ಸಾವು
ಒಟ್ಟಿನಲ್ಲಿ ಕಬ್ಬು ಬೆಳೆಗಾರರ ಕಿಚ್ಚು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಸಚಿವರ ಸಂಧಾನ ಕೂಡ ವಿಫಲವಾಗಿದೆ. ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡುತ್ತಾ ಅನ್ನೋದು ಸಂಜೆಯೊಳಗೆ ಗೊತ್ತಾಗಲಿದೆ. ಒಂದು ವೇಳೆ ಬೆಂಬಲ ಬೆಲೆ ಪ್ರಕಟಿಸದಿದ್ದರೆ ರೈತರ ಹೋರಾಟ ಮತ್ತೊಂದು ಹಂತಕ್ಕೆ ಹೋಗಲಿದೆ. ಇದನ್ನೂ ಓದಿ: ಪಿಯುಸಿ ಮಕ್ಕಳಿಗೂ ಇನ್ಮುಂದೆ ಮಧ್ಯಾಹ್ನದ ಬಿಸಿಯೂಟ?

