ಬೆಳಗಾವಿ: ಹತ್ತರಗಿ ಟೋಲ್ ಬಳಿ ಕಲ್ಲು ತೂರಾಟ ನಡೆಸಿದವರು ರೈತರಲ್ಲ ಎಂದು ರೈತ ಮುಖಂಡ ಇಂಚಿಗೇರಿ ಶಶಿಕಾಂತ ಗುರೂಜಿ ಹೇಳಿದ್ದಾರೆ.
ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಳೆದ 7 ದಿನಗಳಿಂದ ನಾವು ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದೇವೆ. ನಮ್ಮ ಹೋರಾಟವನ್ನು ನಿಲ್ಲಿಸಲು ಕಲ್ಲು ತೂರಾಟದ ಷಡ್ಯಂತ್ರ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ನಾವು ಇಲ್ಲಿಯವರೆಗೆ ಶಾಂತಿಯುತ ಹೋರಾಟ ನಡೆಸುತ್ತಿದ್ದೇವೆ. ಯಾವುದೇ ಆಸ್ತಿಪಾಸ್ತಿಗಳನ್ನು ನಾವು ನಷ್ಟ ಮಾಡಿಲ್ಲ. ನಾವು ಶಾಂತಯುತವಾಗಿ ಪ್ರತಿಭಟಿಸುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ – ಪೊಲೀಸ್ ವಾಹನಗಳ ಮೇಲೆ ಕಲ್ಲು ತೂರಾಟ
ಆಗಿದ್ದು ಏನು?
ಪ್ರತಿಭಟನಾ ನಿರತ ರೈತರ ಆಕ್ರೋಶದ ಕಟ್ಟೆ ಇಂದು ಒಡೆದಿದೆ. ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ಬಳಿ ನಿಂತಿದ್ದ ಪೊಲೀಸ್ ವಾಹನಗಳ ಮೇಲೆ ರೈತರು ಕಲ್ಲು ತೂರಾಟ ನಡೆಸಿದ್ದಾರೆ. ಕಲ್ಲು ತೂರಾಟದ ಬೆನ್ನಲ್ಲೇ ಪೊಲೀಸರು ಸ್ಥಳದಿಂದ ಓಡಿ ಹೋಗಿದ್ದಾರೆ. ಸರ್ಕಾರದ ಸಂಧಾನ ಸಭೆ ವಿಫಲವಾದ ಬೆನ್ನಲ್ಲೇ ಹೋರಾಟದಲ್ಲಿ ಭಾಗಿಯಾಗಲು ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆಗಮಿಸುತ್ತಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಲು ಭಾರೀ ಸಂಖ್ಯೆಯಲ್ಲಿ ಟ್ರ್ಯಾಕ್ಟರ್‌ಗಳನ್ನು ರಸ್ತೆಗೆ ಇಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಗಡಿಯಿಂದ 30 ಕಿ.ಮೀ ದೂರದಲ್ಲಿರುವ ರೈತರಿಗೆ ಮಹಾರಾಷ್ಟ್ರದ ಫ್ಯಾಕ್ಟರಿಗಳು 1 ಟನ್ ಕಬ್ಬಿಗೆ 3,500 ರೂ. ನೀಡುತ್ತಿರುವಾಗ ಕರ್ನಾಟಕದ ಕಬ್ಬು ಫ್ಯಾಕ್ಟರಿಗಳು ಯಾಕೆ ನೀಡುತ್ತಿಲ್ಲ ಎಂದು ಪ್ರಶ್ನಿಸಿ ಆಕ್ರೋಶ ಹೊರಹಾಕುತ್ತಿದ್ದಾರೆ.

