ಕೊಪ್ಪಳ: ಬಜೆಟ್‍ನಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಘೋಷಿಸಿರುವ ಸಾಲಮನ್ನಾ ಅಧಿಕೃತವಲ್ಲ ಎಂದು ಹೇಳಿ ಬ್ಯಾಂಕ್ ರೈತರೊಬ್ಬರ ಖಾತೆಗೆ ಜಮೆಯಾಗಿದ್ದ ಹಣವನ್ನು ಸಾಲ ಮರು ಪಾವತಿಗೆ ಸೇರಿಸಿಕೊಂಡಿದೆ.
ಕೊಪ್ಪಳ ತಾಲೂಕಿನ ಹ್ಯಾಟಿ ಗ್ರಾಮದ ರೈತ ನಿಂಗಪ್ಪ ಪೂಜಾರ್ ಅವರು ಕೆನರಾ ಬ್ಯಾಂಕಿನಲ್ಲಿ ಕೃಷಿ ಸಾಲ ಪಡೆದಿದ್ದರು. ಈಗ ಅದರ ಮೊತ್ತ ಸುಮಾರು 1.80 ಲಕ್ಷ ರೂ. ಆಗಿದ್ದು, ನಿಂಗಪ್ಪ ಮರು ಪಾವತಿ ಮಾಡಿರಲಿಲ್ಲ. ಹೀಗಾಗಿ ಬ್ಯಾಂಕ್ ಸಿಬ್ಬಂದಿ ಉಳಿತಾಯ ಖಾತೆಗೆ ಜಮೆಯಾಗಿದ್ದ 24 ಸಾವಿರ ರೂ. ಹಣವನ್ನು ನೀಡದೇ ಸತಾಯಿಸುತ್ತಿದ್ದಾರೆ.
ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯು ರಸಗೊಬ್ಬರ ಖರೀದಿಗೆ ಅಂತಾ ನಿಂಗಪ್ಪ ಪೂಜಾರ್ ಅವರ ಕೆನರಾ ಬ್ಯಾಂಕ್ ಖಾತೆಗೆ 24 ಸಾವಿರ ರೂ. ಜಮೆ ಮಾಡಿದ್ದರು. ಕೃಷಿ ಚಟುವಟಿಕೆಗೆ ಹಣ ಪಡೆಯಲು ನಿಂಗಪ್ಪ ಬ್ಯಾಂಕಿಗೆ ಹೋಗಿದ್ದಾಗ ಸಿಬ್ಬಂದಿ ನಾಳೆ ಕೊಡುತ್ತೇವೆ ಎಂದು ಕಾಲ ದೂಡುತ್ತಿದ್ದಾರೆ. ಹೀಗಾಗಿ ತಮ್ಮ ಖಾತೆಗೆ ಜಮೆಯಾದ ಹಣವನ್ನು ಬ್ಯಾಂಕ್ ಸಿಬ್ಬಂದಿ ಸಾಲದ ಮರುಪಾವತಿಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ನಿಂಗಪ್ಪ ಆರೋಪಿಸಿದ್ದಾರೆ.
ಬಜೆಟ್‍ನಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ 2 ಲಕ್ಷ ರೂ. ರೈತರ ಸಾಲ ಮನ್ನಾ ಅಂತಾ ಘೋಷಣೆ ಮಾಡಿದ್ದಾರೆ. ಆದರೂ ಬ್ಯಾಂಕ್ ಸಿಬ್ಬಂದಿ ರೈತರ ಖಾತೆಗೆ ಜಮೆಯಾದ ಹಣವನ್ನು ಸಾಲ ಮರುಪಾವತಿಗೆ ಬಳಿಸಿಕೊಳ್ಳುತ್ತಿದ್ದಾರೆ ಎಂದು ನಿಂಗಪ್ಪ ದೂರಿದರು.