ಕೋಲ್ಕತ್ತಾ: ನಾಟಕದಲ್ಲಿ ಉಸಿರಾಟದ ತಂತ್ರಗಾರಿಕೆಯನ್ನು ಕಲಿಸುತ್ತೇನೆ ಎಂದು ಕಲಾವಿದೆಯನ್ನು ಅತ್ಯಾಚಾರಗೈದ ಪಶ್ಚಿಮ ಬಂಗಾಳದ ಖ್ಯಾತ ಚಲನಚಿತ್ರಕಾರ, ರಂಗಭೂಮಿ ಕಲಾವಿದ ಸುದೀಪ್ತೊ ಚಟರ್ಜಿಯನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ಬಳಿಕ ಚಟರ್ಜಿ ಹಲವು ಬಾರಿ ಸಂತ್ರಸ್ತೆಯನ್ನು ಅತ್ಯಾಚಾರ ನಡೆಸಿದ್ದಾನೆ. ಬಂಧನದ ಬಳಿಕ ಚಟರ್ಜಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ. ನ್ಯಾಯಾಲಯ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ನೀಡಿದ್ದು, ಅಧಿಕಾರಿಗಳು ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ.
ಈ ವರ್ಷ ಮಾರ್ಚ್ ನಲ್ಲಿ ಘಟನೆ ನಡೆದಿದ್ದು, ಅಕ್ಟೋಬರ್ 17ರಂದು ಸಂತ್ರಸ್ತೆ ತನಗಾದ ಅನ್ಯಾಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಾಗ ಪ್ರಕರಣ ಬೆಳಕಿಗೆ ಬಂದಿದೆ. ಶುಕ್ರವಾರ ಸಂತ್ರಸ್ತೆ ಫೂಲ್‍ಭಾಗ್ ಪೊಲೀಸ್ ಠಾಣೆಗೆ ತೆರಳಿ ಚಟರ್ಜಿ ವಿರುದ್ಧ ದೂರು ಸಹ ದಾಖಲಿಸಿದ್ದಾರೆ. ಇತ್ತ ಭಲೆಗಟ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ಆರೋಪಿ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಎಫ್‍ಐಆರ್ ದಾಖಲಾಗಿದೆ. ಶನಿವಾರ ಫೂಲ್‍ಭಾಗ್ ಠಾಣೆಯ ಪೊಲೀಸರು ಚಟರ್ಜಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಲಯ ಆರೋಪಿಯನ್ನು ಎರಡು ದಿನ ಪೊಲೀಸ್ ಕಸ್ಟಡಿಗೆ ನೀಡಿದೆ.
ಚಟರ್ಜಿ ನನಗೆ ನಟನಾ ತರಬೇತಿ ನೀಡುತ್ತಿದ್ದರು. ಒಂದು ದಿನ ತರಬೇತಿಗಾಗಿ ಮನೆಗೆ ಕರೆಸಿಕೊಂಡಿದ್ದರು. ಅಂದು ನಾಟಕದಲ್ಲಿ ಉಸಿರಾಟದ ತಂತ್ರಗಾರಿಕೆ ಹೇಳಿ ಕೊಡುತ್ತೇನೆಂದು ಅತ್ಯಾಚಾರ ಮಾಡಿದರು. ಇದೇ ರೀತಿ ಚಟರ್ಜಿ ಹಲವು ವಿದ್ಯಾರ್ಥಿನಿಯರನ್ನು ಅತ್ಯಾಚಾರ ಗೈದಿದ್ದಾನೆ. ತರಬೇತಿ ವೇಳೆಯೂ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಸಂತ್ರಸ್ತೆ ಫೇಸ್‍ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.