ಸುಧಾಕರ್ V/S ಕುಮಾರಸ್ವಾಮಿ- ಜೆಡಿಎಸ್ ಚುನಾವಣಾ ಉಸ್ತುವಾರಿಯಾಗಿ ನಿಖಿಲ್ ನೇಮಕ

Public TV
2 Min Read
Nikhil HDK Sudhakr

-ಹೆಚ್‍ಡಿಕೆ ಶಪಥ ಪೂರ್ಣಗೊಳಿಸಲು ರಣೋತ್ಸಾಹಿಗಳಾದ ದಳ ಕಾರ್ಯಕರ್ತರು

ಚಿಕ್ಕಬಳ್ಳಾಪುರ: ಉಪಚುನಾವಣೆಗೆ ತಯಾರಿ ನಡೆಸಿತ್ತಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರ ಉರುಳೋಕೆ ಪ್ರಮುಖ ಕಾರಣಕರ್ತರಾದ ಶಾಸಕರ ವಿರುದ್ದ ಸಮರ ಸಾರಿದ್ದಾರೆ. ಉಪಚುನಾವಣೆಯಲ್ಲಿ ಚಿಕ್ಕಬಳ್ಳಾಪುರದ ಅನರ್ಹ ಶಾಸಕರಾದ ಸುಧಾಕರ್ ಅವರನ್ನ ಸೋಲಿಸಲೇಬೇಕು ಅಂತ ತಮ್ಮ ಮಗ ನಿಖಿಲ್ ಕುಮಾರಸ್ವಾಮಿ ಅವರನ್ನೇ ಕ್ಷೇತ್ರದ ಉಸ್ತುವಾರಿಯನ್ನಾಗಿ ನೇಮಕ ಮಾಡಿದ್ದಾರೆ.

hdk nikhil final

ಚಿಕ್ಕಬಳ್ಳಾಪುರ ಕ್ಷೇತ್ರದ ಅನರ್ಹ ಶಾಸಕ ಸುಧಾಕರ್ ಅಂದರೆ ಕುಮಾರಸ್ವಾಮಿ ಅವರಿಗೆ ಒಂದು ರೀತಿ ಕೋಪ. ಸಕಾರಣ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸುಧಾಕರ್ ನಡೆದುಕೊಂಡ ರೀತಿ ಅನ್ನೋದು ಮಾಜಿ ಸಿಎಂ ಆಪ್ತವಲಯದವರ ಮಾತು. ಹೀಗಾಗಿ ಉಪಚುನಾವಣೆಯಲ್ಲಿ ಅನರ್ಹ ಶಾಸಕ ಸುಧಾಕರ್ ವಿರುದ್ಧ ಸೇಡು ತೀರಿಸಿಕೊಳ್ಳೋಕೆ ಕುಮಾರಸ್ವಾಮಿ ತಮ್ಮ ಮಗನನ್ನೇ ಈಗ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿಯಾಗಿ ನೇಮಕ ಮಾಡಿದ್ದಾರೆ. ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಶಾಸಕ ಬಚ್ಚೇಗೌಡರನ್ನ ಅಂತಿಮ ಮಾಡಿರೋ ಹೆಚ್‍ಡಿಕೆ ಚಿಕ್ಕಬಳ್ಳಾಪುರ ಕ್ಷೇತ್ರವನ್ನ ಪ್ರತಿಷ್ಠೆಯ ಕಣವಾಗಿ ಪರಿಗಣಿಸಿದ್ದು, ಏನೇ ಆದರೂ ಸಮ್ಮಿಶ್ರ ಸರ್ಕಾರ ಉರುಳಿಸಿದ ಅನರ್ಹ ಶಾಸಕ ಸುಧಾಕರ್ ವಿರುದ್ಧ ಸೇಡು ತೀರಿಸಿಕೊಳ್ಳಲೇಬೇಕು ಅಂತ ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ckb sudhakar 1

ಸುಧಾಕರ್ ಅಥವಾ ಅವರ ಬೆಂಬಲಿತ ಅಭ್ಯರ್ಥಿಯನ್ನ ಸೋಲಿಸಲು ರಣತಂತ್ರ ರೂಪಿಸಿರೋ ಹೆಚ್‍ಡಿಕೆ ಸ್ವತಃ ಚಿಕ್ಕಬಳ್ಳಾಪುರ ಕ್ಷೇತ್ರದ ಹಳ್ಳಿ ಹಳ್ಳಿಗೂ ಬಂದು ಚುನಾವಣಾ ಪ್ರಚಾರ ನಡೆಸುವುದಾಗಿ ತಿಳಿಸಿದ್ದಾರೆ. ಇದಲ್ಲದೇ ಎಲ್ಲವನ್ನೂ ನೋಡಿಕೋಳ್ಳೋಕೆ ಅಂತ ತಮ್ಮ ಮಗ ನಿಖಿಲ್ ಕುಮಾರ್ ಗೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಹೊಣೆಗಾರಿಕೆಯನ್ನ ಕೊಟ್ಟಿದ್ದಾರೆ. ಜೆಡಿಎಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಮಾಜಿ ಶಾಸಕ ಬಚ್ಚೇಗೌಡ ಸಹ ಅನರ್ಹ ಶಾಸಕ ಸುಧಾಕರ್ ಗೆ ವೋಟ್ ಹಾಕಲೇಬೇಡಿ ಅಂತ ಉಪಚುನಾವಣಾ ಪ್ರಚಾರಕ್ಕೆ ಇಳಿದಿದ್ದಾರೆ.

MTB SUDHAKAR

ಸುಧಾಕರ್ ಸ್ಪರ್ಧೆ ಮಾಡ್ತಾರೋ ಇಲ್ವೋ ಅನ್ನೋದು ಇನ್ನೂ ಸುಪ್ರಿಂಕೋರ್ಟ್ ಆದೇಶದ ಮೇಲೆ ನಿಂತಿದೆ. ಆದರೆ ಇತ್ತ ಸುಧಾಕರ್ ಅಥವಾ ಅವರ ಕಡೆಯಿಂದ ಯಾರೇ ಸ್ಪರ್ಧೆ ಮಾಡಿದ್ರೂ ಅವರನ್ನ ಸೋಲಿಸಲೇಬೇಕು ಅಂತ ಮಾಜಿ ಸಿಎಂ ಶಪಥ ಮಾಡಿದ್ದಾರಂತೆ. ಹೀಗಾಗಿ ಇಷ್ಟು ದಿನ ಚುನಾವಣೆಗೆ ನಮಗೂ ಸಂಬಂಧವೇ ಇಲ್ಲದಂತಿದ್ದ ಜೆಡಿಎಸ್ ಮುಖಂಡರು ಈಗ ಕುಮಾರಸ್ವಾಮಿಯವರ ಮಾತುಗಳಿಂದ ರಣೋತ್ಸಾಹಿಗಳಾಗಿ ಮೈಕೊಡವಿ ಎದ್ದಿದ್ದು ಚುನವಣಾ ಅಖಾಡಕ್ಕೆ ಧುಮುಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *