ಚಿಕ್ಕಬಳ್ಳಾಪುರ: ಈಗ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಏನೋ ಕುರಿ ವ್ಯಾಪಾರ ಮಾಡುತ್ತಿದ್ದಾರಂತೆ ಎಂದು ಶಾಸಕ ಸುಧಾಕರ್ ಟೀಕಿಸಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ಆರೂರು ಬಳಿ ನೂತನ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಬೆಂಬಲಿಗರ ಸಮ್ಮುಖದಲ್ಲಿ ಭೂಮಿ ಪೂಜೆ ನೇರವೇರಿಸಿ ಸುಧಾಕರ್ ಅವರು ಮಾತನಾಡಿದರು. ಬೆಂಬಲಿಗರನ್ನ ಉದ್ದೇಶಿಸಿ ಮಾತನಾಡುತ್ತ ಸುಧಾಕರ್ ಅವರು ರಮೇಶ್ ಕುಮಾರ್ ವಿರುದ್ಧ ಕಿಡಿಕಾರಿದರು. ಈಗ ರಮೇಶ್ ಕುಮಾರ್ ಕುರಿ ವ್ಯಾಪಾರ ಮಾಡುತ್ತಿದ್ದಾರಂತೆ ಎಂದು ಬೆಂಬಲಿಗರು ಹೇಳಿದ್ದನ್ನು ಪುನರುಚ್ಚರಿಸಿದ ಸುಧಾಕರ್ ಅವರು, ‘ಹಾ ಏನೋ ಕುರಿಗಳ ವ್ಯಾಪಾರ ಮಾಡ್ತಾವರಂತೆ, ನನಗೆ ಗೊತ್ತಿಲ್ಲ’ ಎಂದು ನಗುತ್ತಾ ವ್ಯಂಗ್ಯವಾಡಿದರು.
ಸುಪ್ರೀಂ ಕೋರ್ಟ್ ರಮೇಶ್ ಕುಮಾರ್ ಗೆ ತಕ್ಕಶಾಸ್ತಿ ಮಾಡಿದ್ದು, ಅದಕ್ಕಿಂತ ಹೆಚ್ಚಾಗಿ ನಾನು ನಂಬಿದ ನೀವು ತಕ್ಕಶಾಸ್ತಿ ಮಾಡಿದ್ದೀರಿ ಅಂತ ರಮೇಶ್ ಕುಮಾರ್ ವಿರುದ್ಧ ಹರಿಹಾಯ್ದರು. ರಮೇಶ್ ಕುಮಾರ್ ನಮ್ಮನ್ನ ಅನರ್ಹರನ್ನಾಗಿ ಮಾಡಿದರು. 4 ವರ್ಷ ನಾವೆಲ್ಲಾ ಮನೆಯಲ್ಲಿರಬೇಕು. ಮತ್ತೆ ಚುನಾವಣೆಗೆ ನಿಲ್ಲಬಾರದು ಅಂತ ಅನರ್ಹರನ್ನಾಗಿ ಮಾಡಿದರು. ಕಾನೂನು ಬಿಟ್ಟು ರಮೇಶ್ ಕುಮಾರ್ ಅಂಬೇಡ್ಕರ್ ಆಗಲು ಹೊರಟರು. ಡಾ ಅಂಬೇಡ್ಕರ್ ಬರೆದಿರೋ ಸಂವಿಧಾನವೇ ಬೇರೆ, ಇವರು ಸಂವಿಧಾನವನ್ನ ಅರ್ಥೈಸಿದ್ದೇ ಬೇರೆ ಎಂದು ವಾಗ್ದಾಳಿ ನಡೆಸಿದರು.
ಈ ಹಿಂದೆ ಆಂಧ್ರದ ಮದನಪಲ್ಲಿಯ ಅಂಗಲಾ ಹಾಗೂ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ರೋಜೇನಹಳ್ಳಿ ಸಂತೆಗಳಿಗೆ ಭೇಟಿ ನೀಡಿ ರಮೇಶ್ ಕುಮಾರ್ ಕುರಿಗಳನ್ನು ಖರೀದಿಸಿದ್ದರು. ಆ ಬಳಿಕ ಚಿಕ್ಕಬಳ್ಳಾಪುರದ ಬಾಗೇಪಲ್ಲಿ ತಾಲೂಕಿನ ಚೇಳೂರು ಸಂತೆಯಲ್ಲಿ ಕುರಿಗಳನ್ನು ಖರೀದಿಸಿದ್ದರು. ಆಗ ರಾಜಕಾರಣಕ್ಕಿಂತ ಕುರಿ ಸಾಕುವುದು ಲೇಸು ಅಂತಲೋ ಏನೋ ಇತ್ತೀಚೆಗೆ ರಮೇಶ್ ಕುಮಾರ್ ಕುರಿ ಸಂತೆಗಳಲ್ಲಿ ಆಗಮಿಸಿ ಕುರಿ ಕೊಂಡುಕೊಳ್ಳುವ ಕಾಯಕ ಮಾಡುತ್ತಿದ್ದಾರೆ ಎಂಬ ಮಾತುಗಳು ಕೂಡ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿತ್ತು.