DistrictsKarnatakaLatestLeading NewsMain PostUttara Kannada

ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಸುಧಾಕರ್

ಕಾರವಾರ: ಉತ್ತರ ಕನ್ನಡ (Uttara Kannada) ಜನರ ಬಹು ಕಾಲದ ಬೇಡಿಕೆ ಆಗಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕನಸು ಕೊನೆಗೂ ಈಡೇರಿದ್ದು, ಕುಮಟಾದಲ್ಲಿ (kumta) ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (Super Speciality Hospital) ನಿರ್ಮಾಣಕ್ಕೆ ಸರ್ಕಾರ ತಾತ್ವಿಕವಾಗಿ ಒಪ್ಪಿಗೆ ಕೊಟ್ಟಿದೆ.

ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ವಿಚಾರವಾಗಿ ಉತ್ತರ ಕನ್ನಡ ಶಾಸಕರ ಜೊತೆ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ (Sudhakar) ಸಭೆ ನಡೆಸಿದ್ದಾರೆ. ನಂತರ ಮಾತನಾಡಿದ ಸಚಿವರು, ಕುಮಟಾ ಭೌಗೋಳಿಕವಾಗಿ ಉತ್ತರ ಕನ್ನಡ ಜಿಲ್ಲೆಯ ಮಧ್ಯ ಭಾಗದಲ್ಲಿ ಇದೆ. ಇದರಿಂದಾಗಿ ಕುಮಟಾದಲ್ಲಿ ಆಸ್ಪತ್ರೆ ಮಾಡಲು ಸಲಹೆ ಬಂದಿದೆ. ಈ ಹಿನ್ನೆಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ತಾತ್ವಿಕವಾಗಿ ಒಪ್ಪಿಗೆ ನೀಡಲಾಗಿದ್ದು, ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಕೂಡ ಒಪ್ಪಿಗೆ ಕೊಟ್ಟಿದ್ದಾರೆ ಎಂದು ಹೇಳಿದರು.

ಉತ್ತರ ಕನ್ನಡ ಜಿಲ್ಲೆಗೆ ಉತ್ಕೃಷ್ಟ ಆರೋಗ್ಯ ಸೇವೆಗಳು ಜಿಲ್ಲೆಯ ಜನರಿಗೆ ಸಿಗಬೇಕು. ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ವೈದ್ಯರ ಕೊರತೆಯನ್ನು ತುಂಬಿಸುವ ಕೆಲಸ ಆಗಬೇಕು. ಆಸ್ಪತ್ರೆ ಮೇಲ್ದರ್ಜೆಗೆ ಏರಿಸುವ ಕೆಲಸ ಆಗಬೇಕು. ಇದರ ಜೊತೆಗೆ ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸೇವೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆಗಲಿದೆ. ಫೈಲ್ ಆರ್ಥಿಕ ಇಲಾಖೆಗೆ ಹೋಗಿದೆ ಎಂದರು. ಇದನ್ನೂ ಓದಿ: ಸುಮ್ಮನಹಳ್ಳಿ ಬ್ರಿಡ್ಜ್‌ ಮತ್ತೆ ಕುಸಿತದ ಭೀತಿ – ನೆಲ ಕಾಣುವ ಮಟ್ಟಕ್ಕೆ ಕಿತ್ತು ಹೋದ ಕಾಂಕ್ರಿಟ್ ಸ್ಲ್ಯಾಬ್

ವಿಧಾನಮಂಡಲ ಅಧಿವೇಶನ ಬಳಿಕ ಒಂದು ದಿನ ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಗುರುತಿಸಿರುವ ಜಾಗಗಳ ವೀಕ್ಷಣೆ ಮಾಡಲಾಗುವುದು ಅಲ್ಲದೆ, ಕಾರವಾರ ವೈದ್ಯಕೀಯ ಕಾಲೇಜು ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ಸೌಲಭ್ಯ ಒದಗಿಸುವ ಬಗ್ಗೆ ಖುದ್ದು ಪರಿಶೀಲನೆ ಮಾಡಲು ತೀರ್ಮಾನಿಸಿರುವುದಾಗಿ ಸಚಿವರು ಹೇಳಿದರು.

ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್‌ ಪೂಜಾರಿ ಮಾತನಾಡಿ, ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡುವ ಹಾಗೂ ವಿವಿಧ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವ ಸಂಬಂಧ ಆರೋಗ್ಯ ಸಚಿವರೊಂದಿಗೆ ನಡೆದ ಸಭೆ ಫಲಪ್ರದವಾಗಿದೆ. ಸಚಿವರು ಖುದ್ದು ಜಿಲ್ಲೆಗೆ ಭೇಟಿನೀಡಿ ಉತ್ತಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಇಡಿ ವಿಚಾರಣೆ ಎದುರಿಸಿದ್ದ ಡಿ.ಕೆ ಶಿವಕುಮಾರ್‌ಗೆ ಅನಾರೋಗ್ಯ

ಸಭೆಯಲ್ಲಿ ಸಚಿವ ಶಿವರಾಮ ಹೆಬ್ಬಾರ್, ಶಾಸಕರಾದ ದಿನಕರ್ ಶೆಟ್ಟಿ, ರೂಪಾಲಿ ನಾಯಕ್, ಗಣಪತಿ ಉಳವೇಕರ್, ಶಾಂತರಾಮ್ ಸಿದ್ದಿ, ಆರೋಗ್ಯ ಇಲಾಖೆ ಆಯುಕ್ತ ರಣದೀಪ್, ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಉತ್ತರ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶರದ್ ನಾಯಕ್, ಕಾರವಾರ ವೈದ್ಯಕೀಯ ಕಾಲೇಜು ನಿರ್ದೇಶಕ ಡಾ.ಗಜಾನನ ನಾಯಕ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Live Tv

Leave a Reply

Your email address will not be published. Required fields are marked *

Back to top button