– ನಗರಸಭೆ ಚುನಾವಣೆ ಫಲಿತಾಂಶದಲ್ಲಿ ಎಲ್ಲಾ ಲೆಕ್ಕಾಚಾರ ಉಲ್ಟಾ
ಚಿಕ್ಕಬಳ್ಳಾಪುರ/ಹೊಸಕೋಟೆ: ನಗರಸಭೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಎರಡು ತಿಂಗಳ ಹಿಂದೆ ಚಿಕ್ಕಬಳ್ಳಾಪುರ ಹಾಗೂ ಹೊಸಕೋಟೆ ವಿಧಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದ್ದರಿಂದ ಈ ಎರಡೂ ನಗರಸಭೆಗಳ ಫಲಿತಾಂಶ ಏನಾಗಬಹುದು ಎಂಬ ಕುತೂಹಲ ಎಲ್ಲರಲ್ಲಿತ್ತು. ಆದರೆ ಚುನಾವಣಾ ಫಲಿತಾಂಶ ಬಂದಾಗ 2 ತಿಂಗಳ ಹಿಂದೆ ಚುನಾವಣೆಯಲ್ಲಿ ಗೆದ್ದು ಬಂದು ಸಚಿವರಾದ ಕೆ.ಸುಧಾಕರ್ ಸೋತಿದ್ದಾರೆ. ಉಪಚುನಾವಣೆಯಲ್ಲಿ ಸೋತಿದ್ದ ಮಾಜಿ ಸಚಿವ ಎಂಟಿಬಿ ನಾಗರಾಜ್ ನಗರಸಭೆ ಚುನಾವಣೆಯಲ್ಲಿ ಗೆದ್ದು ಬೀಗಿದ್ದಾರೆ.
ಹೊಸಕೋಟೆಯಲ್ಲಿ ಅರಳಿದ ಕಮಲ: ಹೊಸಕೋಟೆ ನಗರಸಭೆ ಬಿಜೆಪಿ ತೆಕ್ಕೆಗೆ ಹೋದರೆ, ಚಿಕ್ಕಬಳ್ಳಾಪುರ ನಗರಸಭೆ ಕಾಂಗ್ರೆಸ್ ಪಾಲಾಗಿದೆ. 31 ವಾರ್ಡ್‍ಗಳಲ್ಲಿ 22 ವಾರ್ಡ್‍ಗಳನ್ನು ಗೆಲ್ಲುವ ಮೂಲಕ ಮಾಜಿ ಸಚಿವ ಎಂಟಿಬಿ ನಾಗರಾಜ್ ಅವರು ಶಾಸಕ ಶರತ್ ಬಚ್ಚೇಗೌಡರ ವಿರುದ್ಧದ ಉಪಚುನಾವಣೆಯ ಸೋಲಿನ ಸೇಡನ್ನು ತೀರಿಸಿಕೊಂಡರು. ಶರತ್ ಬಚ್ಚೇಗೌಡ ಅವರ ‘ಕುಕ್ಕರ್’ ಕೇವಲ 7 ಸೀಟನ್ನಷ್ಟೇ ಗೆಲ್ಲಲು ಸಾಧ್ಯವಾಯಿತು. ಕಾಂಗ್ರೆಸ್ ಶೂನ್ಯ ಸುತ್ತುವ ಮೂಲಕ ಎಂಟಿಬಿ ಹೀರೋ ಆದರೆ, ಎಸ್‍ಡಿಪಿಐ ಹಾಗೂ ಪಕ್ಷೇತರರು ತಲಾ 1 ಸ್ಥಾನ ಪಡೆದುಕೊಂಡರು.
Advertisement
Advertisement
ಚಿಕ್ಕಬಳ್ಳಾಪುರದಲ್ಲಿ ಮತದಾರ `ಕೈ’ ಬಿಡಲಿಲ್ಲ: ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಗೆ ತನ್ನ ಸ್ಥಾನ ಹೆಚ್ಚಿಸಲು ಸಾಧ್ಯವಾಗಿದ್ದಷ್ಟೇ ಸುಧಾಕರ್ ಗೆ ಖುಷಿಯ ವಿಚಾರ. 2 ತಿಂಗಳ ಹಿಂದೆ ನಡೆದ ಉಪಚುನಾವಣೆಯಲ್ಲಿ ಚೊಚ್ಚಲ ಭಾರಿಗೆ ಭರ್ಜರಿ ಗೆಲುವು ದಾಖಲಿಸಿದ್ದ ಬಿಜೆಪಿ ಪಕ್ಷ, ಇದೀಗ ನಗರಸಭಾ ಚುನಾವಣೆಯಲ್ಲಿ ನೆಲಕಚ್ಚಿದೆ. 31 ಸ್ಥಾನಗಳಲ್ಲಿ 16 ಸ್ಥಾನಗಳನ್ನು ಗೆಲ್ಲುವ ಮೂಲಕ ಇಲ್ಲಿ ಕಾಂಗ್ರೆಸ್ ಸರಳ ಬಹುಮತ ಪಡೆದಿದೆ. ನಗರಸಭಾ ಚುನಾವಣಾ ಸಾರಥಿಯಾಗಿ ಸಚಿವ ಸುಧಾಕರ್ ಬಿರುಸಿನ ಚುನಾವಣಾ ಪ್ರಚಾರ ನಡೆಸಿದ್ರೂ ಫಲಕಾರಿಯಾಗಲಿಲ್ಲ. ನಗರಸಭೆಯ 31 ವಾರ್ಡ್ ಗಳಲ್ಲಿ ಕಾಂಗ್ರೆಸ್ 16, ಬಿಜೆಪಿ-9, ಜೆಡಿಎಸ್-2 ಹಾಗೂ ಪಕ್ಷೇತರು – 4 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಕಾಂಗ್ರೆಸ್ ಸರಳ ಬಹುಮತ ಪಡಿದಿದೆ. ಜೆಡಿಎಸ್ ಜೊತೆ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿದ್ದು ಎರಡು ಪಕ್ಷಗಳ 18 ಸದಸ್ಯರು ಸೇರಿ ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆಯಿದೆ. ಆದರೆ ಬಿಜೆಪಿ 9 ಸದಸ್ಯರ ಜೊತೆ ಪಕ್ಷೇತರರು 4 ಹಾಗೂ ಶಾಸಕ, ಸಂಸದರ ಮತ ಸೇರಿದರೆ 15 ಮತಗಳಾಗಲಿದ್ದು, ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಆಪರೇಷನ್ ಕಮಲ ನಡೆಯುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಆದರೆ ಮತದಾರ ಹಣ, ದರ್ಪಕ್ಕೆ ತಕ್ಕಪಾಠ ಕಲಿಸಿದ್ದಾರೆಂಬ ವರಸೆ ಕಾಂಗ್ರೆಸ್ ನಾಯಕರದ್ದು.
Advertisement
Advertisement
ಚಿಕ್ಕಬಳ್ಳಾಪುರ ನಗರಸಭೆಯ ಮಾಜಿ ಅಧ್ಯಕ್ಷರಾಗಿದ್ದ ಲೀಲಾವತಿ ಶ್ರೀನಿವಾಸ್, ಮುನಿಕೃಷ್ಣ ಹಾಗೂ ಎಂ.ವಿ. ಭಾಸ್ಕರ್ ಮೂವರು ಈ ಚುನಾವಣೆಯಲ್ಲಿ ಸ್ಫರ್ಧೆ ಮಾಡಿದ್ರೂ ಮೂವರು ಸೋಲುಂಡಿದ್ದಾರೆ. 17 ನೇ ವಾರ್ಡಿನ ಕಾಂಗ್ರೆಸ್ ಪಕ್ಷದ ಎಸ್.ಎಂ ರಫೀಕ್ ಸತತ 7ನೇ ಬಾರಿಗೆ ನಗರಸಭಾ ಸದಸ್ಯರಾದರು. ಇದೇ ಮೊದಲ ಬಾರಿಗೆ ಅತಿ ಹೆಚ್ಚು 9 ಸ್ಥಾನ ಗಳಿಸಿರೋದಷ್ಟೇ ಬಿಜೆಪಿಯ ಸಾಧನೆ.
ಎರಡು ತಿಂಗಳ ಹಿಂದಿಗಿಂತ ವ್ಯತಿರಿಕ್ತ ಫಲಿತಾಂಶವನ್ನು ನಗರಸಭೆ ಚುನಾವಣೆಯಲ್ಲಿ ನೀಡಿದ ಚಿಕ್ಕಬಳ್ಳಾಪುರ ಹಾಗೂ ಹೊಸಕೋಟೆ ನಗರಸಭೆಯ ಮತದಾರರು ಎಲ್ಲಾ ಪಕ್ಷಗಳ ಲೆಕ್ಕಾಚಾರವನ್ನು ಉಲ್ಟಾ ಮಾಡಿದ್ದಾರೆ. ಮತದಾರರು ಯಾಕೆ ಹೀಗೆ ಮಾಡಿದರು ಎಂದು ಸುಧಾಕರ್ ಹಾಗೂ ಎಂಟಿಬಿ ನಾಗರಾಜ್ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ.