ನವದೆಹಲಿ: ಎಂಜಿನಿಯರಿಂಗ್ ಪದವಿ ಕೋರ್ಸ್ ಸೇರುವ ಸಂದರ್ಭದಲ್ಲಿ ಪ್ರಾಂಶುಪಾಲರು ನನಗೆ ಮೂರು ಷರತ್ತುಗಳನ್ನು ವಿಧಿಸಿದ್ದರು ಎಂದು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಡಾ.ಸುಧಾಮೂರ್ತಿ ತಮ್ಮ ಕಾಲೇಜು ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಈ ಕುರಿತು ಹಿಂದಿಯ ಖಾಸಗಿ ವಾಹಿನಿಯಲ್ಲಿ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ನಡೆಸಿಕೊಡುವ ‘ಕೌನ್ ಬನೇಗಾ ಕರೋಡ್ ಪತಿ’ ಕಾರ್ಯಕ್ರಮದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ಇದರ ಪ್ರೋಮೋ ಇದೀಗ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸುಧಾಮೂರ್ತಿಯವರು ಭಾಗವಹಿಸಿರುವ ಕಾರ್ಯಕ್ರಮ ನವೆಂಬರ್ 29ರಂದು ರಾತ್ರಿ 9ಕ್ಕೆ ಪ್ರಸಾರವಾಗಲಿದೆ.
Advertisement
ಕಾರ್ಯಕ್ರಮದಲ್ಲಿ ಪ್ರಶ್ನೆಗಳಿಗೆ ಉತ್ತರಿಸುವುದರ ಜೊತೆಗೆ ಬಿಗ್ ಬಿ ಕೇಳುವ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೂ ಸುಧಾಮೂರ್ತಿಯವರು ಉತ್ತರಿಸಿದ್ದಾರೆ. ಇದೇ ವೇಳೆ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರು ವಿಧಿಸುವ ಷರತ್ತುಗಳ ಕುರಿತು ವಿವರಿಸಿದ್ದಾರೆ.
Advertisement
https://www.instagram.com/tv/B5ShWE0lsEE/?utm_source=ig_embed
Advertisement
ಸುಧಾಮೂರ್ತಿಯವರು ಹಾವೇರಿ ಜಿಲ್ಲೆಯ ಶಿಗ್ಗಾಂವ್ ಮೂಲದವರಾಗಿದ್ದು, ತಮ್ಮ ಎಂಜಿನಿಯರಿಂಗ್ ಪದವಿಯನ್ನು ಹಾವೇರಿಯ ಬಿವಿಬಿ(ಈಗಿನ ಕೆಎಲ್‍ಇ) ಕಾಲೇಜಿನಲ್ಲಿ ಓದಿದ್ದಾರೆ.
Advertisement
ಚಿಕ್ಕವಯಸ್ಸಿನಲ್ಲೇ ಓದಿನಲ್ಲಿ ಮುಂದಿದ್ದ ನಾನು ಎಂಜಿನಿಯರಿಂಗ್ ಓದುವ ಬಯಕೆಯನ್ನು ಹೊಂದಿದ್ದೆ. 1968ರಲ್ಲಿ ಎಂಜಿನಿಯರಿಂಗ್ ಓದುವ ಹುಡುಗಿಯರೇ ಇರಲಿಲ್ಲ. ಹೀಗಾಗಿ ಎಂಜಿನಿಯರಿಂಗ್ ಓದಿದರೆ ಯಾವ ಹುಡುಗನೂ ಸಿಗುವುದಿಲ್ಲ ಎಂಬ ಭಯ ನಮ್ಮ ಮನೆಯವರಲ್ಲಿತ್ತು. ಆದರೆ ಹೇಗೋ ಮನೆಯವರ ಮನವೊಲಿಸಿ ಹುಬ್ಬಳ್ಳಿಯ ಬಿವಿಬಿ ಎಂಜಿನಿಯರಿಂಗ್ ಕಾಲೇಜಿಗೆ ಸೇರಿಕೊಂಡೆ ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.
ಆಗ ಕಾಲೇಜಿನಲ್ಲಿ 599 ಹುಡುಗರಿದ್ದರೆ, ನಾನೊಬ್ಬಳೇ ಹುಡುಗಿ. ಹೀಗಾಗಿ ಕಾಲೇಜು ಸೇರಿಕೊಳ್ಳುವಾಗ ಪ್ರಾಂಶುಪಾಲರು ನನಗೆ ಷರತ್ತು ವಿಧಿಸಿದ್ದರು. ಕಾಲೇಜಿಗೆ ಸೀರೆಯನ್ನು ಮಾತ್ರ ಧರಿಸಿಕೊಂಡು ಬರಬೇಕು. ಕಾಲೇಜು ಕ್ಯಾಂಟೀನಿಗೆ ಹೋಗುವ ಹಾಗಿಲ್ಲ ಹಾಗೂ ಹುಡುಗರೊಂದಿಗೆ ಯಾವುದೇ ಕಾರಣಕ್ಕೂ ಮಾತನಾಡುವಂತಿಲ್ಲ ಎಂಬ ಮೂರು ಷರತ್ತು ವಿಧಿಸಿದ್ದರು ಎಂದು ಹೇಳಿ ಷರತ್ತುಗಳ ಗುಟ್ಟನ್ನು ಸುಧಾಮೂರ್ತಿ ಬಿಚ್ಚಿಟ್ಟರು. ಇದನ್ನೂ ಓದಿ: ಸರಳವಾಗಿ ನಡೆಯಲಿದೆ ಇನ್ಫಿ ದಂಪತಿಯ ಮಗನ ವಿವಾಹ
ಮೊದಲೆರಡು ಷರತ್ತುಗಳು ನನಗೆ ಕಷ್ಟವೆನಿಸಲಿಲ್ಲ. ಆದರೆ ಮೂರನೇ ಷರತ್ತಿಗೆ ಸಂಬಂಧಿಸಿದಂತೆ ಮೊದಲ ವರ್ಷ ನಾನು ಹುಡುಗರನ್ನು ಮಾತನಾಡಿಸಲಿಲ್ಲ. ಆದರೆ ನಾನು ಓದಿನಲ್ಲಿ ಮುಂದಿರುವುದನ್ನು ಕಂಡು ಎರಡನೇ ವರ್ಷ ಅವರೇ ನನ್ನನ್ನು ಮಾತನಾಡಿಸಲು ಪ್ರಾರಂಭಿಸಿದರು ಎಂದು ಮೂರನೇ ಷರತ್ತಿನ ಕುರಿತು ವಿವರಿಸಿದರು. ಇದೇ ವೇಳೆ ಕಾಲೇಜಿನಲ್ಲಿ ಪಟ್ಟ ಕಷ್ಟವನ್ನು ಸಹ ಸುಧಾಮೂರ್ತಿಯವರು ನೆನೆದಿದ್ದು, ಕಾಲೇಜಿನಲ್ಲಿ ಸೂಕ್ತ ಶೌಚಾಲಯ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಹೆಣ್ಣು ಮಕ್ಕಳ ಕಷ್ಟ ಅರಿತು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆಯಾದ ನಂತರ ಸುಮಾರು 16 ಸಾವಿರ ಶೌಚಾಲಯಗಳನ್ನು ಕಟ್ಟಿಸಿದ್ದೇವೆ ಎಂದು ಮಾಹಿತಿ ನೀಡಿದರು.
ಈ ಪ್ರೋಮೋದಲ್ಲಿ ಸುಧಾಮೂರ್ತಿಯವರು ಬಡವರಿಗೆ, ಹಳ್ಳಿಗಳಲ್ಲಿನ ಮಕ್ಕಳಿಗೆ, ನಿರ್ಗತಿಕರಿಗೆ ಮಾಡಿರುವ ಸಮಾಜಮುಖಿ ಕೆಲಸಗಳನ್ನು ಸಹ ತೋರಿಸಲಾಗಿದೆ. ಪ್ರೋಮೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದು, ವಿಡಿಯೋ ವೈರಲ್ ಆಗಿದೆ. ಹಲವರು ಸುಧಾಮೂರ್ತಿಯವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.