ಕಿಚ್ಚ ಸುದೀಪ್ (Kichcha Sudeep) ನಟನೆಯ ಹೊಸ ಸಿನಿಮಾದ ಕುರಿತು ದಿನಕ್ಕೊಂದು ಸುದ್ದಿ ಹೊರ ಬೀಳುತ್ತಿವೆ. ಅಧಿಕೃತವಾಗಿ ಚಿತ್ರತಂಡ ಹೇಳಿಕೊಳ್ಳದೇ ಇದ್ದರೂ, ಈ ಸಿನಿಮಾಗೆ ತಮಿಳು ನಿರ್ದೇಶಕರು ಆಕ್ಷನ್ ಕಟ್ ಹೇಳಲಿದ್ದಾರೆ ಎಂಬ ಮಾಹಿತಿ ಇದೆ. ಜೊತೆಗೆ ಈ ಸಿನಿಮಾದ ನಾಯಕಿಯನ್ನು ಬಾಲಿವುಡ್ ನಿಂದ ಕರೆತರಲಾಗುತ್ತಿದೆಯಂತೆ. ಅಲ್ಲದೇ, ತಂತ್ರಜ್ಞರು ಮಾತ್ರ ಕನ್ನಡದವರೇ ಇರಲಿದ್ದಾರೆ ಎನ್ನುವುದು ಲೇಟೆಸ್ಟ್ ಅಪ್ ಡೇಟ್.
ಈ ಹೊಸ ಸಿನಿಮಾವನ್ನು ತಮಿಳು ನಿರ್ದೇಶಕರು ಹಾಗೂ ತಮಿಳು ಚಿತ್ರ ನಿರ್ಮಾಣ ಸಂಸ್ಥೆ ತಯಾರಿಸುತ್ತಿದ್ದರೆ, ಸಂಗೀತ, ಸಿನಿಮಾಟೋಗ್ರಫಿ ಮತ್ತು ಕಲಾ ನಿರ್ದೇಶನವನ್ನು ಕನ್ನಡದ ತಂತ್ರಜ್ಞರೇ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಜನೀಶ್ ಲೋಕನಾಥ (Ajanish Loknath) ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದರೆ, ಶಿವಕುಮಾರ್ ಕಲಾನಿರ್ದೇಶಕ. ಶೇಖರ್ ಚಂದ್ರ ಅವರ ಸಿನಿಮಾಟೋಗ್ರಫಿ ಚಿತ್ರಕ್ಕೆ ಇರಲಿದೆಯಂತೆ. ಆದರೆ, ಈ ಮಾಹಿತಿಯನ್ನು ಚಿತ್ರತಂಡ ಇನ್ನೂ ಖಚಿತ ಪಡಿಸಿಲ್ಲ. ಇದನ್ನೂ ಓದಿ:ನಟ ಚಿರಂಜೀವಿ ಸರ್ಜಾ 3 ನೇ ವರ್ಷದ ಪುಣ್ಯತಿಥಿ
ಈ ಸಿನಿಮಾವನ್ನು ತಮಿಳು (Tamil) ನಿರ್ದೇಶಕ ವಿಜಯ್ (Vijay) ಎನ್ನುವವರು ನಿರ್ದೇಶನ ಮಾಡಲಿದ್ದು, ಈ ಸಿನಿಮಾ ಮೂಲಕ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ತಮಿಳಿನ ಕಲೈಪುಲಿ ಎಸ್ ತನು (Kalaipuli S Tanu) ನಿರ್ಮಾಣ ಸಂಸ್ಥೆ ಚಿತ್ರಕ್ಕೆ ಹಣ ಹೂಡಿದೆ. ಮೊನ್ನೆಯಷ್ಟೇ ಕಿಚ್ಚ ಕಾರಿನಿಂದ ಇಳಿಯುವುದರ ಜೊತೆಗೆ ಮೇಕಪ್ ನಲ್ಲಿ ಭಾಗಿಯಾಗುವ ಸಣ್ಣದೊಂದು ವಿಡಿಯೋ ಬಿಡುಗಡೆ ಮಾಡಿತ್ತು ಚಿತ್ರತಂಡ. ಸುದೀಪ್ ಅವರ ಗೆಟಪ್ ಜಭರದಸ್ತಾಗಿ ಇರಲಿದೆ ಎನ್ನುವ ಸುಳಿವನ್ನೂ ನೀಡಿತ್ತು.
ಒಂದು ದಿನದಲ್ಲಿ ನಡೆಯುವ ಕಥೆಯು ಇದಾಗಿದ್ದು, ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಮಾದರಿಯ ಚಿತ್ರವಂತೆ. ಕಥೆ, ಚಿತ್ರಕಥೆಯನ್ನು ನಿರ್ದೇಶಕರೇ ಬರೆದಿದ್ದಾರೆ. ಭಾರೀ ಬಜೆಟ್ ನ ಚಿತ್ರ ಇದಾಗಿದ್ದು, ಕನ್ನಡ ಮತ್ತು ತಮಿಳಿನಲ್ಲಿ ಈ ಸಿನಿಮಾ ಏಕಕಾಲಕ್ಕೆ ರೆಡಿಯಾಗಲಿದೆ. ಅರ್ಜುನ್ ಜನ್ಯ ಬದಲಾಗಿ ಈ ಚಿತ್ರಕ್ಕೆ ಹ್ಯಾರೀಸ್ ಜೈರಾಜ್ ಎನ್ನುವವರು ಸಂಗೀತ ಸಂಯೋಜನೆ ಮಾಡಲಿದ್ದಾರೆ. ಅಧಿಕೃತವಾಗಿ ಚಿತ್ರತಂಡ ಮಾಹಿತಿ ಕೊಡದೇ ಇದ್ದರೂ, ಸುದೀಪ್ ಅವರ ಆಪ್ತರಿಂದಲೇ ಇವಿಷ್ಟು ಮಾಹಿತಿ ಹೊರ ಬಂದಿವೆ.
ಈ ಹಿಂದೆಯಷ್ಟೇ ತಾವು ಮೂರು ಸಿನಿಮಾಗಳನ್ನು ಒಪ್ಪಿಕೊಂಡಿರುವ ಕುರಿತು ಕಿಚ್ಚ ಸುದೀಪ್ (Sudeep) ಬಹಿರಂಗ ಪಡಿಸಿದ್ದರು. ಮೂರು ಸಿನಿಮಾಗಳಲ್ಲಿ ಮೊದಲು ಯಾವುದು ಶುರುವಾಗಲಿದೆ ಎನ್ನುವ ಕುತೂಹಲ ಎಲ್ಲರದ್ದಾಗಿತ್ತು. ‘ಬಿಲ್ಲ ರಂಗ ಬಾಷಾ’ (Billa Ranga Basha) ಮೊದಲು ಮೂಡಿ ಬರಲಿದೆ ಎನ್ನಲಾಗಿತ್ತು. ಆದರೆ, ಅದಕ್ಕೂ ಮುನ್ನ ವಿಜಯ್ ನಿರ್ದೇಶನದ ಚಿತ್ರ ತಯಾರಾಗಲಿದೆ ಎನ್ನುವ ಮಾಹಿತಿ ಸಿಕ್ಕಿದೆ.