ಬಾಗಲಕೋಟೆ: ತೀವ್ರ ಕುತೂಹಲ ಕೆರಳಿಸಿರುವ ಬಾದಾಮಿ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪರ ನಟ ಸುದೀಪ್ ಪ್ರಚಾರಕ್ಕೆ ಆರಂಭದಲ್ಲೇ ವಿರೋಧ ಕೇಳಿ ಬಂದಿದೆ.
ಸಿಎಂ ಸಿದ್ದರಾಮಯ್ಯ ಅವರು ಬಾದಾಮಿಯಲ್ಲಿ ಮೇ 9 ರಂದು ಪ್ರಚಾರ ನಡೆಸಲು ವೇಳಾಪಟ್ಟಿ ನಿಗದಿಯಾಗಿದೆ. ಈ ದಿನದಂದು ನಟ ಸುದೀಪ್ ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಸುದೀಪ್ ಅವರು ರಾಜಕೀಯ ಪಕ್ಷವೊಂದರ ಪರ ಪ್ರಚಾರ ನಡೆಸಲು ಕಾಂತಿ ವೀರ ಸಿಂಧೂರ ಲಕ್ಷ್ಣಣ ಯುವಸೇನೆ (ರಿ) ಜಿಲ್ಲಾ ಘಟಕ ಆಕ್ಷೇಪ ವ್ಯಕ್ತಪಡಿಸಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ಆಡಳಿತ ಅವಧಿಯಲ್ಲಿ ವಾಲ್ಮಿಕಿ ಸಮುದಾಯಕ್ಕೆ ಸೂಕ್ತ ಮೀಸಲಾತಿ ನೀತಿ ಬೇಡಿಕೆಯನ್ನು ಪೂರೈಸದ ಹಿನ್ನೆಲೆಯಲ್ಲಿ ಯುವಸೇನೆ ನಾಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸುದೀಪ್ ಅವರು ಸಿಎಂ ಪರ ಪ್ರಚಾರ ಆಗಮಿಸಿದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.
ಬಾದಾಮಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಸೋಲಿಸಲು ಪಣತೊಟ್ಟಿರುವ ಬಿಜೆಪಿ ಸಂಸದ ಶ್ರೀರಾಮುಲುರನ್ನು ಬಾದಾಮಿಯಲ್ಲಿ ಕಣ್ಣಕ್ಕಿಳಿಸಿರುವುದು ತಿಳಿದ ಸಂಗತಿ. ಶ್ರೀರಾಮುಲು ಅವರು ರಾಜ್ಯ ವಾಲ್ಮೀಕಿ ಸಮುದಾಯದ ಪ್ರಮುಖ ನಾಯಕರಾಗಿದ್ದು, ಕ್ಷೇತ್ರದಲ್ಲಿ ಸಮುದಾಯದ ಮತ ಪ್ರಮುಖ ಪಾತ್ರವಹಿಸುತ್ತವೆ. ಈ ಮತಗಳನ್ನು ಸೆಳೆಯಲು ವಾಲ್ಮಿಕಿ ನಾಯಕ ಸಮುದಾಯದ ಸುದೀಪ್ ಅವರನ್ನು ಪ್ರಚಾರಕ್ಕೆ ಕರೆತರಲು ಸಿದ್ಧತೆ ನಡೆಸಿತ್ತು.