ಶಿವಣ್ಣ (Shivaraj Kumar) ಹಾಗೂ ಸುದೀಪ್. ಇಬ್ಬರೂ ಈಗ ಆತ್ಮೀಯರು. ಅದಕ್ಕೆ ಸಾಕ್ಷಿಯಾಗಿ ವಿಲನ್ ಸಿನಿಮಾ ಮಾಡಿದರು. ಆದರೆ ಇದೇ ಜೋಡಿ ಅದೊಂದು ಕಾಲದಲ್ಲಿ ಹಲ್ಲಲ್ಲು ಕಡಿಯುತ್ತಿತ್ತು. ನಾನಾ ನೀನಾ ಎನ್ನುವಂತೆ ಮೈದಾನಕ್ಕೆ ಇಳಿದಿತ್ತು. ಇನ್ನೇನು ಇಬ್ಬರೂ ಯುದ್ಧಕ್ಕೆ ಇಳಿಯುತ್ತಾರೆ ಎನ್ನುವಷ್ಟರಲ್ಲಿ ಗೀತಕ್ಕ ಎಂಟ್ರಿಯಾದರು. ಶಿವಣ್ಣನ ಪತ್ನಿ ಗೀತಾ (Geetha Shivaraj Kumar) ಬಗ್ಗೆ ಸುದೀಪ್ ಅದ್ಯಾಕೆ ಅಷ್ಟು ಅಕ್ಕರೆ….ಗೌರವ ತೋರಿಸುತ್ತಾರೆ? ಶಿವಣ್ಣ ಹಾಗೂ ಸುದೀಪ್ ನಡುವಿನ ದ್ವೇಷಕ್ಕೆ ಗೀತಕ್ಕ ಪ್ರೀತಿ ಮುಲಾಮು ಹಚ್ಚಿದ್ದು ಹೇಗೆ? ಆ ಸ್ನೇಹದ ಕಡಲಿನಾಳದ ಕಥನ ನಿಮ್ಮ ಮುಂದೆ.
Advertisement
ಶಿವಣ್ಣ ಹಾಗೂ ಸುದೀಪ್ (Kiccha Sudeep) ಇಬ್ಬರ ನಡುವಿನ ಅಂತರ ಕೇವಲ ಹತ್ತು ವರ್ಷ. ಅದಾಗಲೇ ಬೆಳೆದು ನಿಂತಿದ್ದ ಶಿವಣ್ಣ ಒಂದು ಕಡೆ, ಆಗಿನ್ನೂ ಬೆಳೆಯುತ್ತಿದ್ದ ಕಿಚ್ಚ ಇನ್ನೊಂದು ಕಡೆ. ಎಲ್ಲವೂ ಚೆನ್ನಾಗಿಯೇ ಇತ್ತು. ಕಿಚ್ಚನ ಶಾಂತಿ ನಿವಾಸ ಸಿನಿಮಾದಲ್ಲಿ ಶಿವಣ್ಣ ಹಾಡಿದರು. ಅವರಿಗಾಗಿ ಖುದ್ದು ಸುದೀಪ್ ಕಾಸ್ಟ್ಯೂಮ್ ಡಿಸೈನ್ ಮಾಡಿದರು. ಗೆಳೆತನ ಆಕಾಶದೆತ್ತರಕ್ಕೆ ಬೆಳೆಯುವ ಹಂತದಲ್ಲಿತ್ತು. ಆದರೆ ಅದೇ ಹೊತ್ತಿಗೆ ಹುಬ್ಬಳ್ಳಿ ಕ್ರಿಕೆಟ್ ಮೈದಾನದಲ್ಲಿ ನಡೆದ ಗಲಾಟೆ ಇಬ್ಬರ ನಡುವೆ ಕಿಡಿ ಹೊತ್ತಿಸಿತು. ರಾಘವೇಂದ್ರ ರಾಜ್‌ಕುಮಾರ್ ಸಮಾಧಾನ ಮಾಡಿದರು. ಶಿವಣ್ಣ ಹಾಗೂ ಸುದೀಪ್ ನಡುವೆ ಮೊದಲ ಬಿರುಕು ಬಿಟ್ಟಿದ್ದು ಆಗಲೇ.
Advertisement
Advertisement
ಅಷ್ಟಕ್ಕೆ ಜಗಳ ನಿಲ್ಲಲಿಲ್ಲ. ಡಬ್ಬಿಂಗ್ ವಿವಾದದ ಸಮಯದಲ್ಲೂ ಇಬ್ಬರೂ ಒಂದೊಂದು ದಿಕ್ಕಿಗೆ ನಿಂತರು. ಸುದೀಪ್ ಹೇಳಿದ ಮಾತಿಗೆ, ಶಿವಣ್ಣ ಕೌಂಟರ್ ಕೊಟ್ಟರು. ಅದು ಕಿಚ್ಚನನ್ನು ಇನ್ನಷ್ಟು ಕೆರಳಿಸಿತು. ಬಿರುಕು ದೊಡ್ಡದಾಯಿತು. ನಾನಾ ನೀನಾ ಎನ್ನುವ ಮಟ್ಟಕ್ಕೆ ಬಂದು ನಿಂತರು. ಅದನ್ನು ಇಬ್ಬರೂ ಬಾಯಿ ಬಿಟ್ಟು ಹೇಳಲಿಲ್ಲ. ಆದರೆ ಒಳಗೊಳಗೆ ಹೊಗೆ ಆಡುವುದು ನಿಲ್ಲಲಿಲ್ಲ. ಆ ಕ್ಷಣವೇ ನೋಡಿ ದೊಡ್ಮನೆ ದೊಡ್ಡ ಸೊಸೆ ಹಾಜರಾದರು. ಗೀತಾ ಹಾಗೂ ಸುದೀಪ್…ಇಬ್ಬರದ್ದೂ ಶಿವಮೊಗ್ಗ. ಬಹುಶಃ ಹುಟ್ಟಿದ ಮಣ್ಣಿನ ಮೋಹ ಇವರನ್ನು ಅಕ್ಕ ತಮ್ಮನನ್ನಾಗಿಸಿತು. ಮುಂದಾಗಿದ್ದು ತಿಕ್ಕಿ ಒರೆಸಿದರೂ ಅಳಿಸಲಾಗದ ಇತಿಹಾಸ. ಅದಕ್ಕೇ ಕಿಚ್ಚ ಹೇಳಿದ್ದಾರೆ. `ಗೀತಕ್ಕ ಇರದಿದ್ದರೆ…ಏನಾಗುತ್ತಿತ್ತೋ..?’ ಅದು ಸತ್ಯ.
Advertisement
ಶಿವಣ್ಣ ಹಾಗೂ ಸುದೀಪ್ ನಡುವೆ ಅಣ್ಣ ತಮ್ಮನ ಸಂಬಂಧ ಮೂಡಿಸಲು ಕಾರಣವಾಗಿದ್ದೇ ಗೀತಾ. ಅದುವರೆಗೆ ಇಬ್ಬರೂ ಹತ್ತಿರ ಬಂದಿರಲಿಲ್ಲ. ಬರೀ ದೂರದಿಂದಲೇ ಕಣ್ಣಿನ ಅಳತೆಯಲ್ಲೇ ಸಿಕ್ಕಿದ್ದರು. ಅದರಲ್ಲೇ ಮಾತಾಡಿದ್ದರು. ಅಕ್ಕ ಪಕ್ಕ ಕುಳಿತುಕೊಂಡರೂ ಅಂತರ ಇದ್ದೇ ಇತ್ತು. ಯಾವಾಗ ಗೀತಾ ಇವರಿಬ್ಬರನ್ನೂ ಒಂದೇ ಟೇಬಲ್ ಮುಂದೆ ಕೂಡಿಸಿ ಕೈಯಾರೆ ಅಕ್ಕಿ ರೊಟ್ಟಿ, ಕಾಯಿ ಚಟ್ನಿ ಬಡಿಸಿದರೋ ಮೊದಲ ಬಾರಿ ಸುದೀಪ್ ಕಣ್ಣಲ್ಲಿ ಶಿವಣ್ಣ ಆಕಾಶದೆತ್ತರಕ್ಕೆ ಬೆಳೆದಿರುವುದು ಕಾಣಿಸಿತು. ಆ ಸಜ್ಜನಿಕೆ, ಸಹನೆ, ಅಕ್ಕರೆ, ಪ್ರೀತಿ, ಎಲ್ಲವನ್ನೂ ಎದೆಯಾಳದಿಂದ ತಿನ್ನಿಸಿದರು ಶಿವಣ್ಣ. ಕಿಚ್ಚನ ಕಣ್ಣಿನಲ್ಲಿ ಬಿದ್ದಿದ್ದ ಧೂಳನ್ನು ಒರೆಸಲಿಲ್ಲ, ಬಿಸಿ ನೀರಿನಲ್ಲಿ ತೊಳೆದು ಬಿಟ್ಟರು. ಸ್ನೇಹ ಕೇಕೆ ಹಾಕಿತು.
ಬಣ್ಣದ ಲೋಕದಲ್ಲಿ ಎಲ್ಲರೂ ದೂರದಿಂದಲೇ ಇನ್ನೊಬ್ಬರನ್ನು ಅಳೆಯುತ್ತಾರೆ. ಅಥವಾ ಯಾರೋ ಹೇಳಿದ ಮಾತನ್ನು ಕೇಳಿ ಒಬ್ಬೊಬ್ಬರ ಬಗ್ಗೆ ಅಭಿಪ್ರಾಯ ರೂಪಿಸಿಕೊಳ್ಳುತ್ತಾರೆ. ಸುದೀಪ್ ಕೂಡ ಅದನ್ನೇ ಮಾಡಿದ್ದರು. ಆದರೆ ದೇವರು ದೊಡ್ಡವನು ಗೀತಕ್ಕ ಅದೆಲ್ಲ ಹಳವಂಡ ದೂರ ಮಾಡಿದರು. ಅದೇ ಕಾರಣಕ್ಕಾಗಿ ವಿಲನ್ ಸಿನಿಮಾದಲ್ಲಿ ಈ ಜೋಡಿ ಅಬ್ಬರಿಸಲು ಸಾಧ್ಯವಾಯಿತು. ಈಗ ಸುದೀಪ್ ಹಾಗೂ ಶಿವಣ್ಣ ಬರೀ ಸ್ನೇಹಿತರಾಗಿ ಉಳಿದಿಲ್ಲ. ರಕ್ತ ಸಂಬಂಧ ಮೀರಿದ ಸಿಂಹಾಸನದಲ್ಲಿ ಹೆಗಲ ಮೇಲೆ ಕೈ ಹಾಕಿ ವಿರಾಜಮಾನರಾಗಿದ್ದಾರೆ. ಹಳೆ ಮುಳ್ಳನ್ನು ಮುರಿದು ಹಾಕಿ ಹೊಸ ಅರಮನೆಯಲ್ಲಿ ಮೆರವಣಿಗೆ ಹೊರಟಿದ್ದಾರೆ. ಪ್ರೀತಿ ಇಲ್ಲದೆ ಹೂವು ಅರಳಿತೂ ಹೇಗೆ ? ಅಲ್ಲವೆ?