ಬೆಂಗಳೂರು: ನನಗೆ ಹಾರ, ಸನ್ಮಾನ ಯಾವುದು ಬೇಡ ಎಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸರಳತೆ ಮೆರೆದಿದ್ದಾರೆ.
ಸ್ಯಾಂಡಲ್‍ವುಡ್ ನಲ್ಲಿ ಹೊಸಬರ ತಂಡ ಸೇರಿ ಮಾಡಿರುವ ಎಟಿಎಂ (ಅಟೆಂಪ್ಟ್ ಟು ಮರ್ಡರ್) ಸಿನಿಮಾದ ಟ್ರೇಲರ್ ಅನ್ನು ಸುದೀಪ್ ಬಿಡುಗಡೆ ಮಾಡಿ ಶುಭ ಹಾರೈಸಿದರು.
ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ ನಂತರ ಚಿತ್ರತಂಡ ಕಿಚ್ಚ ಸುದೀಪ್ ಅವರಗೆ ಸನ್ಮಾನ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ವೇದಿಕೆ ಮೇಲೆ ಶಾಲು ಹಾರ ತುರಾಯಿಗಳನ್ನಿಟ್ಟು ಸನ್ಮಾನಿಸಲು ಕರೆಯಬೇಕು ಎನ್ನುವ ವೇಳೆ ಇದರ ಸೂಕ್ಷ್ಮವನ್ನು ಗಮನಿಸಿದ ಅವರು ನನಗೆ ಹಾರ ಸನ್ಮಾನ ಯಾವುದು ಬೇಡ, ಈ ಹಾರವನ್ನು ದೇವರಿಗೆ ಹಾಕಿ ಎಂದು ಹೇಳಿ ಸಂಭವಿಸಬೇಕಿದ್ದ ಸನ್ಮಾನವನ್ನು ನಯವಾಗಿ ತಿರಸ್ಕರಿಸಿದರು.
ಈ ಬಾರಿ ಸುದೀಪ್ ಅವರು ತಮ್ಮ ಹುಟ್ಟು ಹಬ್ಬದ ಸಂದರ್ಭದಲ್ಲೂ ಯಾವುದೇ ಸಂಭ್ರಮಾಚರಣೆ ಮಾಡುವುದಿಲ್ಲ ಎಂದು ಹೇಳಿದ್ದರು. ಅಲ್ಲದೇ ಅಭಿಮಾನಿಗಳು ಯಾರೂ ಹಾರ, ಕೇಕ್ ಗಳನ್ನು ತರದಿರಲು ಸೂಚಿಸಿದ್ದರು. ಅಲ್ಲದೇ ತಮ್ಮ ಸಿನಿಮಾವೊಂದರ ಬಿಡುಗಡೆಯ ಸಮಯದಲ್ಲೂ ಸಹ ಪೋಸ್ಟರ್ ಗಳಿಗೆ ಹಾಲು ಸುರಿದು ವ್ಯರ್ಥ ಮಾಡದೇ ಯಾವುದಾದರೂ ಅನಾಥಾಶ್ರಮಕ್ಕೆ ನೀಡಿ ಎಂದು ತಿಳಿಸಿದ್ದರು.
ಸುದೀಪ್ ಅವರ ಇಂತಹ ಅಲೋಚನೆಗಳು ತಮ್ಮ ಅಭಿಮಾನಿಗಳನ್ನೇ ವಿರೋಧ ಕಟ್ಟಿಕೊಳ್ಳಬೇಕಾದ ಸಂದರ್ಭವನ್ನು ಸೃಷ್ಟಿಸಿತ್ತು. ಆದರೆ ಸುದೀಪ್ ಅವರ ನಿಜವಾದ ಅಭಿಮಾನಿಗಳು ಅವರ ಮಾತಿನ ಹಿಂದಿನ ಕಾಳಜಿಯನ್ನು ಅರ್ಥಮಾಡಿಕೊಂಡಿದ್ದರು. ಬಹುಪರಾಕುಗಳನ್ನೇ ಉಸಿರಾಗಿಸಿಕೊಂಡ ಸಿನಿಮಾ ರಂಗದಲ್ಲಿ ಇಂತಹ ಎಲ್ಲದರಿಂದ ದೂರ ಸರಿಯುತ್ತಿರುವ ಸುದೀಪ್ ನಿಜಕ್ಕೂ ಹೊಸ ಹೀರೋಗಳಿಗೆ ಮಾದರಿಯಾಗಿದ್ದಾರೆ.