– 4, 5 ದಿನ ರಾಜ್ಯದಲ್ಲಿ ತಾಪಮಾನ ಏರಿಕೆ ಸಾಧ್ಯತೆ
ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಳಿ ಘರ್ಜಿಸುತ್ತಿದ್ದರೆ, ಇತ್ತ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಬಿಸಿಲಿನ ಪ್ರತಾಪ ಹೆಚ್ಚಾಗಿದೆ. ಕಂಕಣ ಸೂರ್ಯಗ್ರಹಣ ಮುಗಿದ ಬಳಿಕ ರಾಜ್ಯದಲ್ಲಿ ಹಠಾತ್ ತಾಪಮಾನ ಏರಿಕೆಯಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಾಖಲೆಯ ಚಳಿ ದಾಖಲಾಗಿದೆ. 2.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದೆಹಲಿಯಲ್ಲಿ ದಾಖಲಾಗಿದ್ದು, ಕೊರೆಯುವ ಚಳಿಯಿಂದಾಗಿ ಹಿಮ ಕೂಡ ಹೆಚ್ಚಾಗಿದೆ. ಇತ್ತ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕಳೆದ ಎರಡು ದಿನಗಳಿಂದ ಹವಾಮಾನದಲ್ಲಿ ವೈಪರೀತ್ಯ ಉಂಟಾಗಿದೆ. ಕಂಕಣ ಸೂರ್ಯಗ್ರಹಣ ಬಳಿಕ ರಾಜ್ಯದಲ್ಲಿ ಹಠಾತ್ ಬಿಸಿಲಿನ ತಾಪಮಾನ ಏರಿಕೆಯಾಗಿದೆ. ಇಷ್ಟು ದಿನ ಚಳಿಯಿಂದ ನಡುಗುತ್ತಿದ್ದ ಜನ, ಇದೀಗಾ ಬಿಸಿಲು ಸೆಕೆಯನ್ನ ಅನುಭವಿಸುತ್ತಿದ್ದಾರೆ.
ಗ್ರಹಣ ಮುಗಿದ ಬಳಿಕ ಕಳೆದ ಎರಡು ದಿನಗಳಿಂದ ಕರ್ನಾಟಕದಾದ್ಯಂತ ತಾಪಮಾನ ಏರಿಕೆಯಾಗಿದೆ. ಪೂರ್ವ, ಆಗ್ನೇಯ ದಿಕ್ಕಿನಿಂದ ಬಿಸಿಗಾಳಿ ಬೀಸುತ್ತಿದೆ. ಅರಬ್ಬೀ ಸಮುದ್ರದ ಪಶ್ಚಿಮ ಭಾಗದಲ್ಲಿ ಲೋ ಪ್ರೆಸರ್ ಸಿಸ್ಟಮ್ ಇತ್ತು. ಇದರಿಂದ ಪೂರ್ವ ಭಾಗದಿಂದ ಗಾಳಿ ಬರುತ್ತಿದೆ. ಇಲ್ಲಿಂದ ಬರುವ ಗಾಳಿ ತೇವಾಂಶವನ್ನ ತರುತ್ತದೆ. ಇದರಿಂದನೇ ರಾಜ್ಯದಲ್ಲಿ ತಾಪಮಾನ ಏರಿಕೆಯಾಗುತ್ತಿದೆ. ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಎರಡು ದಿನಗಳ ಹಿಂದೆ 15-17 ಡಿಗ್ರಿ ಸೆಲ್ಸಿಯಸ್ ತಾಪಮಾನವಿತ್ತು. ಆದರೆ ಇಂದು 17-19 ಡಿಗ್ರಿ ಸೆಲ್ಸಿಯಸ್ ತಾಪಮಾನವಿದೆ. ನಾಲ್ಕೈದು ದಿನಗಳಲ್ಲಿ ಮತ್ತಷ್ಟೂ ತಾಪಮಾನ ಹೆಚ್ಚಾಗುವ ಸಾಧ್ಯತೆಗಳಿವೆ. ಒಟ್ಟಾರೆ ರಾಜ್ಯದಲ್ಲಿ ಉಷ್ಣಾಂಶದ ಪ್ರಮಾಣ 20 ಡಿಗ್ರಿ ಸೆಲ್ಸಿಯಸ್ ಗೆ ತಲುಪಿದೆ ಎಂದು ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್ ಪಾಟೀಲ್ ತಿಳಿಸಿದ್ದಾರೆ.
ಎಲ್ಲಾ ಜಿಲ್ಲೆಗಳಲ್ಲಿ ವಾಡಿಕೆಗಿಂತ 2 ರಿಂದ 5 ಡಿಗ್ರಿ ಸೆಲ್ಸಿಯಸ್ ತನಕ ತಾಪಮಾನ ಏರಿಕೆಯಾಗುವ ಸಾಧ್ಯತೆಗಳಿವೆ. ಉತ್ತರ ದಿಕ್ಕಿನಿಂದ ಗಾಳಿ ಬೀಸಿದರೆ ಮಾತ್ರ ರಾಜ್ಯದಲ್ಲಿ ತಾಪಮಾನ ಇಳಿಕೆಯಾಗುತ್ತೆ. ಪೂರ್ವ ದಿಕ್ಕಿನಿಂದ ಮತ್ತೇ ಏನಾದರೂ ಬಿಸಿಗಾಳಿ ಬಂದರೆ ಮತ್ತಷ್ಟು ತಾಪಮಾನ ಏರಿಕೆಯಾಗಲಿದ್ದು, ಬೇಸಿಗೆಯ ಅನುಭವ ಆಗೋದು ಗ್ಯಾರಂಟಿ. ಪ್ರಾಕೃತಿಕ ವಲಯದಲ್ಲಿ ಈ ವ್ಯತ್ಯಾಸಗಳು ಸಾಮಾನ್ಯ ಆಗಿರುವುದರಿಂದ ಒಂದು ವಾರದೊಳಗೆ ಸಹಜಸ್ಥಿತಿಗೆ ಹವಾಮಾನ ಬರಲಿದೆ.