ನಟ ಸುಚೇಂದ್ರ ಪ್ರಸಾದ್ ಅವರನ್ನು ತಾವು ಮದುವೆನೇ ಆಗಿಲ್ಲ. ಮದುವೆ ಆಗದೇ ಡಿವೋರ್ಸ್ ಕೊಡುವ ಮಾತೆಲ್ಲಿಂದ ಬರುತ್ತೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದರು ನಟಿ ಪವಿತ್ರಾ ಲೋಕೇಶ್. ತೆಲುಗು ನಟ ನರೇಶ್ ಅವರ ಜೊತೆ ಪವಿತ್ರಾ ಲೋಕೇಶ್ ವಾಸಿಸುತ್ತಿದ್ದಾರೆ ಎಂದು ಸುದ್ದಿ ಆಯಿತು. ಈ ಕಾರಣದಿಂದಾಗಿಯೇ ಅವರು ಸುಚೇಂದ್ರ ಪ್ರಸಾದ್ ಅವರನ್ನು ತೊರೆದಿದ್ದಾರೆ ಎಂದೂ ಹೇಳಲಾಗಿತ್ತು. ಈ ಪ್ರಕರಣಕ್ಕೆ ಸ್ಪಷ್ಟನೆ ನೀಡಿದ್ದ ಪವಿತ್ರಾ ಲೋಕೇಶ್, ತಾವು ಸುಚೇಂದ್ರ ಪ್ರಸಾದ್ ಜೊತೆ ಮದುವೆಯನ್ನೇ ಆಗಿಲ್ಲ ಎಂದು ಹೇಳಿದ್ದರು.
16 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದ ಮತ್ತು ಎರಡು ಮಕ್ಕಳ ತಾಯಿಯೂ ಆಗಿದ್ದ ಪವಿತ್ರಾ ಲೋಕೇಶ್ ಅವರು ಆಡಿದ ಮಾತಿಗೆ ಈವರೆಗೂ ಸುಚೇಂದ್ರ ಪ್ರಸಾದ್ ಯಾವುದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡಿರಲಿಲ್ಲ. ನಡೆದದ್ದೆಲ್ಲವನ್ನೂ ನೋಡಿಕೊಂಡು ಸುಮ್ಮನಿದ್ದರು. ಇತ್ತೀಚೆಗೆ ಅವರು ಮಾಧ್ಯಮಗಳ ಜೊತೆ ಮಾತನಾಡುತ್ತಾ, ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ಪವಿತ್ರಾ ಲೋಕೇಶ್ ಅವರೇ ತಮ್ಮ ಹೆಂಡತಿ ಎನ್ನುವುದನ್ನು ಪುರಾವೆ ಸಮೇತ ವಿವರಿಸಿದ್ದಾರೆ. ಇದನ್ನೂ ಓದಿ: ಕಾಳಿ ಕೈಗೆ ಸಿಗರೇಟು : ಮಾಳವಿಕಾ ಅವಿನಾಶ್ ಛೀಮಾರಿ, ನಟ ಕಿಶೋರ್ ವಿಭಿನ್ನ ಪ್ರತಿಕ್ರಿಯೆ
ನಾನು ಹಿಂದೂ ವಿವಾಹದ ಸಂಪ್ರದಾಯದಂತೆ ಮದುವೆ ಆಗಿದ್ದೇನೆ. ನಾನೇ ಪವಿತ್ರಾ ಲೋಕೇಶ್ ಅವರ ಗಂಡ ಎನ್ನುವುದಕ್ಕೆ ಅವರ ಪಾಸ್ ಪೋರ್ಟ್ ಹಾಗೂ ಆಧಾರ್ ಕಾರ್ಡ್ ಗಮನಿಸಿದರೆ ಗೊತ್ತಾಗುತ್ತದೆ. ನನ್ನ ಪಾಸ್ ಪೋರ್ಟ್ ನಲ್ಲೂ ಅವರೇ ಹೆಂಡತಿ ಅಂತಿದೆ. ಅಲ್ಲದೇ, ನಾವಿಬ್ಬರೂ ಗಂಡ ಹೆಂಡತಿ ಅನ್ನುವ ಕಾರಣಕ್ಕಾಗಿಯೇ ಹಲವಾರು ಧಾರ್ಮಿಕ ಗುರುಗಳು ನಮ್ಮನ್ನು ಸನ್ಮಾನಿಸಿದ್ದಾರೆ. ನಾವೂ ಒಟ್ಟಿಗೆ ಅದೆಷ್ಟೋ ಕಾರ್ಯಕ್ರಮಗಳಲ್ಲಿ ಗಂಡ ಹೆಂಡತಿ ಅನ್ನೋ ಕಾರಣಕ್ಕಾಗಿಯೇ ಹೋಗಿದ್ದೇವೆ. ಇದಕ್ಕಿಂತ ಬೇರೆ ಪುರಾವೆ ಬೇಕಿಲ್ಲ ಎಂದಿದ್ದಾರೆ. ಆದರೆ, ಮದುವೆ ನೋಂದಣಿ ಪತ್ರ ಮಾತ್ರ ಮಾಡಿಸಿಲ್ಲ ಎಂದಿದ್ದಾರೆ.
ಮದುವೆ ನೋಂದಣಿ ಪತ್ರ ಭಾರತದಲ್ಲಿ ಕಡ್ಡಾಯವಲ್ಲ ಎಂದು ಹೇಳಿರುವ ಅವರು, ಅದೊಂದು ವಿದೇಶಿ ಸಂಸ್ಕೃತಿ. ನಮ್ಮಲ್ಲಿ ಮದುವೆ ನೋಂದಣಿ ಕಡ್ಡಯವಲ್ಲ ಎನ್ನುವ ಕಾರಣಕ್ಕೆ ಸುಮ್ಮನಾಗಿದ್ದೆ ಎನ್ನುವು ಸುಚೇಂದ್ರ ಪ್ರಸಾದ್, ಆ ನೋಂದಣಿಯನ್ನು ಮಾಡಿಸುವುದು ಈಗ ನನಗೆ ಸುಲಭ ಎಂದೂ ಅವರು ಮಾತನಾಡಿದ್ದಾರೆ.