ಉಡುಪಿ: ಜಿಲ್ಲೆಯ ಮಣಿಪಾಲದ ಕೆಎಂಸಿ ಆಸ್ಪತ್ರೆಯ ವೈದ್ಯರಿಂದ 11 ದಿನಗಳ ಹಸುಗೂಸಿಗೆ ಹೃದಯದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆದಿದೆ. ಈ ಮೂಲಕ ಹುಟ್ಟಿನಲ್ಲೇ ಇದ್ದ ಕಂಟಕದಿಂದ ಮಗುವಿನ ಪ್ರಾಣ ಉಳಿದಿದೆ.
ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ತಾಯಿಯೊಬ್ಬರು ಮಗುವಿಗೆ ಜನ್ಮ ನೀಡಿದ್ದರು. ಆದ್ರೆ ಹುಟ್ಟಿದ ಮಗುವಿನ ಉಸಿರಾಟದಲ್ಲಿ ಸಮಸ್ಯೆ ಕಾಣುತ್ತಿತ್ತು. ಹೃದಯದ ಬಡಿತ ವಿಪರೀತವಾಗಿತ್ತು. ದೇಹದ ಎಲ್ಲಾ ಭಾಗದ ಚರ್ಮ ತಣ್ಣಗಾಗಿತ್ತು. ಕೂಡಲೇ ಮಗುವನ್ನು ಕೆಎಂಸಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಯ್ತು. ಅಲ್ಲಿ ವೈದ್ಯರು ಪರೀಕ್ಷಿಸಿದಾಗ, ದೊಡ್ಡ ರಕ್ತನಾಳ ಸ್ಥಾನ ಪಲ್ಲಟವಾಗಿದೆ. ಮಗುವಿನ ತಾಯಿ ಗರ್ಭ ಧರಿಸಿದ ಸಂದರ್ಭ ಅಸಹಜ ಬೆಳವಣಿಗೆಯಿಂದ ಈ ಸಮಸ್ಯೆ ಎದುರಾಗಿದೆ ಎಂದು ವೈದ್ಯರು ಕಂಡುಕೊಂಡಿದ್ದಾರೆ.
Advertisement
Advertisement
ಹೀಗಾಗಿ ಹೃದಯದ ಆಪರೇಶನ್ ಮಾಡಲು ನಿರ್ಧಾರ ಮಾಡಿದ್ದಾರೆ. ಪುಟ್ಟ ಮಗು ಆಗಿದ್ದರಿಂದ 10 ದಿನಗಳ ಕಾಲ ನಿಗಾ ಘಟಕದಲ್ಲಿಟ್ಟು, ಬಳಿಕ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಇದೀಗ ಈ ಆಪರೇಷನ್ ಯಶಸ್ವಿಯಾಗಿ ನಡೆದಿದೆ. ಮಣಿಪಾಲ ಕಾರ್ಡಿಯಾಕ್ ಸರ್ಜನ್ ಡಾ. ಅರವಿಂದ ಬಿಷ್ಣೋಯ್ ಬಹಳ ಮುತುವರ್ಜಿಯಿಂದ ಆಪರೇಶನ್ ಮಾಡಿದ್ದಾರೆ. ಇದನ್ನೂ ಓದಿ: ಬೇರ್ಪಟ್ಟಿದ್ದ 2 ಕಾಲುಗಳ ಮರು ಜೋಡಣೆ – ಮಂಗ್ಳೂರಿನ ಎಜೆ ಆಸ್ಪತ್ರೆ ವೈದ್ಯರಿಂದ ದೇಶದಲ್ಲೇ ಮೊದಲ ಶಸ್ತ್ರಚಿಕಿತ್ಸೆ ಯಶಸ್ವಿ
Advertisement
Advertisement
ಮಕ್ಕಳ ತಜ್ಞ ಡಾ, ಲೆಸ್ಲೀ ಲೂಯೀಸ್, ಹೃದ್ರೋಗ ತಜ್ಞ ಪದ್ಮಕುಮಾರ್, ಕೆಎಂಸಿ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ ಮಾತನಾಡಿ, ಇದೊಂದು ಅಪರೂಪದ ಶಸ್ತ್ರಚಿಕಿತ್ಸೆ ವೈದ್ಯರು ಬಹಳ ರಿಸ್ಕ್ ತೆಗೆದುಕೊಂಡು ಮಗುವಿನ ಜೀವ ಉಳಿಸಿದ್ದಾರೆ. ಈಗ ಮಗು ಆರೋಗ್ಯಯುತವಾಗಿದೆ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರದ ಮಕ್ಕಳ ಆರೋಗ್ಯ ವಿಮೆಯಲ್ಲಿ ಉಚಿತವಾಗಿ ಶಸ್ತ್ರಚಿಕಿತ್ಸೆಯನ್ನು ಮಾಡಿದ್ದಾರೆ.
ಉಡುಪಿಯ ಆಸ್ಪತ್ರೆಯಲ್ಲಿ ಮಗು ಹುಟ್ಟಿದಾಗ ಮಗುವಿನಲ್ಲಿ ಸಮಸ್ಯೆ ಇರುವುದಾಗಿ ತಂದೆ ತಾಯಿಯವರಿಗೆ ಕಂಡು ಬಂತು. ಮಗುವಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರೂ ಸಹ ಹೆಚ್ಚಿನ ಚಿಕಿತ್ಸೆ ಸೂಚಿಸಿದರು. ಮಗು ವೇಗವಾಗಿ ಉಸಿರಾಡುತ್ತಿತ್ತು, ಕೆಲವೊಮ್ಮೆ ಉಸಿರಾಡಲು ಕಷ್ಟಪಡುತ್ತಿತ್ತು, ಹೃದಯ ಬಡಿತ ತೀವ್ರವಾಗಿತ್ತು ಮತ್ತು ಚರ್ಮ ತಣ್ಣಗಿತ್ತು. ತಕ್ಷಣ ಮಗುವಿನ ಹೆತ್ತವರು ಕಸ್ತೂರ್ಬಾ ಆಸ್ಪತ್ರೆಯ ಶಿಶುಗಳ ತೀವ್ರ ನಿಘಾ ಘಟಕದಲ್ಲಿ ಶಿಶುರೋಗ ತಜ್ಞರಾದ ಡಾ. ಲೆಸ್ಲಿ ಲೂಯಿಸ್‍ವರನ್ನು ಕಂಡರು. ಹೃದ್ರೋಗ ತಜ್ಞರಾದ ಡಾ. ಪದ್ಮಕುಮಾರ್‍ರವರು ತಪಾಸಣೆ ನಡೆಸಿ `ಮಗು ಟ್ರಾನ್ಸ್ ಪೊಷಿಶನ್ ಆಫ್ ದಿ ಗ್ರೇಟ್ ಆರ್ಟರೀಸ್ (ಟಿಜಿಎ) ಅಂದರೆ ದೊಡ್ಡ ರಕ್ತನಾಳಗಳ ಸ್ಥಾನಪಲ್ಲಟ ಎಂಬ ಗಂಭೀರ ಜನ್ಮಜಾತ ಹೃದಯ ನ್ಯೂನತೆಯಿಂದ ಬಳಲುತ್ತಿದೆ’ ಎಂದು ಅಭಿಪ್ರಾಯಪಟ್ಟರು.
ಆರಂಭಿಕ ಹಂತಗಳಲ್ಲಿ ಇದನ್ನು ಕಂಡುಕೊಳ್ಳುವ ಏಕೈಕ ಮಾರ್ಗವೆಂದರೆ ಭ್ರೂಣದ ಹೃದಯ ಎಕೋಕಾರ್ಡಿಯೋಗ್ರಫಿ, ಇದನ್ನು ಹೆಚ್ಚು ಅಪಾಯದ ಗರ್ಭಧಾರಣೆ ಹೊಂದಿರುವ ಗರ್ಭಿಣಿ ರೋಗಿಗಳಿಗೆ ಅಂದರೆ ಹೈ ರಿಸ್ಕ್ ಪ್ರೆಗ್ನೆನ್ಸಿ ಪೇಶೆಂಟುಗಳಿಗೆ ಮಾಡಲಾಗುವುದು. ಈ ಸೌಲಭ್ಯ ಮತ್ತು ತಾಂತ್ರಿಕ ಪರಿಣತಿಯನ್ನು ಹೊಂದಿರುವ ಸಿಬ್ಬಂದಿಗಳು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಮಾತ್ರ ಇರುವುದು ಎಂದು ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ.ಟಾಮ್ ಅಭಿಪ್ರಾಯಪಟ್ಟರು. ವೈದ್ಯರ ಮೀಟಿಂಗ್ ನಲ್ಲಿ ಏನು ಮಾಡಬಹುದು ಎಂಬ ಚರ್ಚೆ ಅಂದು ಆರಂಭವಾಯ್ತು.
ಗರ್ಭ ಧರಿಸಿದ ಮೊದಲ 8 ವಾರಗಳಲ್ಲಿ ಭ್ರೂಣದ ಹೃದಯದ ಅಸಹಜ ಬೆಳವಣಿಗೆಯಿಂದಾಗಿ ಹೃದಯದಿಂದ ಶ್ವಾಸಕೋಶಗಳಿಗೆ ಮತ್ತು ದೇಹದ ಇತರ ಭಾಗಗಳಿಗೆ ರಕ್ತವನ್ನು ಕೊಂಡೊಯ್ಯುವ ದೊಡ್ಡ ರಕ್ತನಾಳಗಳು ಅದಲು ಬದಲಾಗುತ್ತವೆ. ದೇಹದ ಭಾಗಗಳಿಗೆ ಆಮ್ಲಜನಕದ ಪೂರೈಕೆ ಸಮರ್ಪಕವಾಗಿರಲಿಲ್ಲ ಮತ್ತು ಶಿಶುಗಳ ಸುಸಜ್ಜಿತ ತೀವ್ರ ನಿಘಾ ಘಟಕದಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಂಡು ಅವಶ್ಯಕ ಆರೈಕೆಯನ್ನು ಒದಗಿಸಿದ ನಂತರ ಮಗುವನ್ನು ಹೃದಯ ಶಸ್ತ್ರಚಿಕಿತ್ಸಾ ವಿಭಾಗಕ್ಕೆ ಕಳುಹಿಸಲಾಯಿತು. ಈ ರೀತಿಯ ಪ್ರಕರಣಗಳನ್ನು ಮೊದಲು ಬೆಂಗಳೂರಿಗೆ ಶಸ್ತ್ರಚಿಕಿತ್ಸೆಗೆ ಕಳುಹಿಸಲಾಗುತ್ತಿತ್ತು. ಆದರೆ ಬೆಂಗಳೂರಿಗೆ ಹೋಗುವ ತನಕ ಶಿಶು ಬದುಕುಳಿಯುವ ಭರವಸೆ ಇರುತ್ತಿರಲಿಲ್ಲ. ಇದಲ್ಲದೆ, ಸಾರಿಗೆ ವ್ಯವಸ್ಥೆಗಳಿಗೆ, ವೈದ್ಯರು, ದಾದಿಯರು ಮತ್ತು ಇತರೆ ಅಗತ್ಯ ವೆಚ್ಚವು ಸುಮಾರು 60000 – ವರೆಗೆ ಆಗುತ್ತದೆ ಎಂದು ಮನಗಂಡ ವೈದ್ಯರು ಮಗುವನ್ನು ಉಳಿಸಲು ಮುಂದಾದರು.
ತಜ್ಞರ ಪ್ರಕಾರ, ಇಂತಹ ಶಿಶುಗಳು ಒಂದು ತಿಂಗಳು ಮೀರಿ ಬದುಕುವುದಿಲ್ಲ. ಮತ್ತು ಶಿಶುಗಳ ಉಳಿವಿಗಾಗಿ ಶಸ್ತ್ರಚಿಕಿತ್ಸೆಯೊಂದೇ ಏಕೈಕ ಮಾರ್ಗವಾಗಿದೆ. ಹೃದಯ ಶಸ್ತ್ರಚಿಕಿತ್ಸಾ ವಿಭಾಗದ ಸಹ ಪ್ರಾಧ್ಯಾಪಕರು ಮತ್ತು ಕನ್ಸಲ್ಟಂಟ್ ಕಾರ್ಡಿಯಾಕ್ ಸರ್ಜನ್ ಆಗಿರುವ ಡಾ. ಅರವಿಂದ ಬಿಷ್ಣೋಯ್‍ಯವರು ಸಾಮಾನ್ಯವಾಗಿ, ಕಡಿಮೆ ಆಮ್ಲಜನಕಯುಕ್ತ ರಕ್ತ (ನೀಲಿ) ದೇಹದ ಭಾಗಗಳಿಂದ ಬಲ ಹೃತ್ಕರ್ಣಕ್ಕೆ ಹಿಂತಿರುಗುತ್ತದೆ, ನಂತರ ಎಡ ಹೃತ್ಕುಕ್ಷಿಯನ್ನು ಸೇರುತ್ತದೆ. ಅಲ್ಲಿಂದ ಅದನ್ನು ಹೃದಯವು ಪಲ್ಮನರಿ ಅಪಧಮನಿಗೆ ಪಂಪ್ ಮಾಡುತ್ತದೆ ಮತ್ತು ಅಲ್ಲಿ ಅದು ಶ್ವಾಸಕೋಶಗಳಿಂದ ಆಮ್ಲಜನಕವನ್ನು ಪಡೆದುಕೊಳ್ಳುತ್ತದೆ. ಆಮ್ಲಜನಕದಿಂದ ಸಮೃದ್ಧವಾದ ರಕ್ತವು (ಕೆಂಪು) ಶ್ವಾಸಕೋಶಗಳಿಂದ ಎಡ ಹೃತ್ಕರ್ಣಕ್ಕೆ ಹಿಂತಿರುಗುತ್ತದೆ ಮತ್ತು ನಂತರ ಎಡ ಹೃತ್ಕುಕ್ಷಿಯನ್ನು ಸೇರುತ್ತದೆ. ಬಳಿಕ ಹೃದಯವು ಅದನ್ನು ಅಯೋರ್ಟಾಕ್ಕೆ ಪಂಪ್ ಮಾಡಿ ದೇಹದ ಉಳಿದ ಭಾಗಗಳಿಗೆ ಕಳುಹಿಸುತ್ತದೆ. ಟ್ರಾನ್ಸ್ ಪೊಷಿಶನ್ ಆಫ್ ದಿ ಗ್ರೇಟ್ ಆರ್ಟರಿ ಅಥವಾ ದೊಡ್ಡ ರಕ್ತನಾಳಗಳ ಸ್ಥಾನಪಲ್ಲಟ ಎಂಬ ಈ ಸ್ಥಿತಿಯಲ್ಲಿ ಅಯೋರ್ಟಾವು ಬಲ ಹೃತ್ಕುಕ್ಷಿಗೆ ಮತ್ತು ಪಲ್ಮನರಿ ಅಪಧಮನಿ ಎಡ ಹೃತ್ಕುಕ್ಷಿಗೆ ಜೋಡಣೆಯಾಗಿರುತ್ತದೆ. ಅಂದರೆ ಇದು ಹೃದಯದ ಸಾಮಾನ್ಯ ಚಟುವಟಿಕೆಗೆ ವಿರುದ್ಧವಾಗಿತ್ತು. ಅಪಧಮನಿಗಳನ್ನು ಅದಲು ಬದಲು ಮಾಡುವುದನ್ನು ಒಳಗೊಂಡಿರುವ ಬಹಳ ಸಂಕೀರ್ಣವಾದ ಟಿಜಿಎ ಶಸ್ತ್ರಚಿಕಿತ್ಸೆಗೆ ಒಳಗಾದ ಶಿಶುಗಳು ಸಹಜ ಬೆಳವಣಿಗೆ ಹೊಂದುತ್ತಾರೆ. ಎಂಬುದಾಗಿ ಡಾ. ಅರವಿಂದ ಬಿಷ್ಣೋಯ್ ಹೇಳಿದರು.
11 ದಿನದ ಮಗುವಿನ ಶಸ್ತ್ರಚಿಕಿತ್ಸೆಯ ಬಳಿಕ ಡಾ. ಲೆಸ್ಲಿ ಲೂಯಿಸ್‍ರವರ ನೇತೃತ್ವದಲ್ಲಿ ಶಿಶುರೋಗ ತಜ್ಞರು ಮಗು ಚೇತರಿಸಿಕೊಳ್ಳಲು ಅಗತ್ಯವಿರುವ ಆರೈಕೆಯನ್ನು ಒದಗಿಸಿದರು. ಈಗ ಮಗು ಈಗ ಚೆನ್ನಾಗಿ ಚೇತರಿಸಿಕೊಂಡಿದೆ. ಆಪರೇಶನ್ ಆಗಿ ಒಂದು ವಾರ ನಿಗಾ ಘಟಕದಲ್ಲಿ ಮಗುವಿಗೆ ಶುಶ್ರೂಶೆ ನೀಡಲಾಗಿದೆ. ಈಗ ಮಗು ಶೇ. 90 ಸುಧಾರಿಸಿದೆ ದು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ ಶೆಟ್ಟಿ ಮಾಹಿತಿ ನೀಡಿದರು.
ಟಿಜಿಎ ಅಂದರೆ ದೊಡ್ಡ ರಕ್ತನಾಳಗಳ ಸ್ಥಾನಪಲ್ಲಟ ಎಂಬ ಈ ಸ್ಥಿತಿ ಬಹಳ ಅಪರೂಪವಾಗಿ ಸಂಭವಿಸುತ್ತದೆ. ಇಂಥ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಲು ವಿಶೇಷ ಕೌಶಲ ಮತ್ತು ನಿಖರತೆಯ ಅವಶ್ಯಕತೆ ಇರುತ್ತದೆ. ಇಂಥ ಪ್ರಕರಣಗಳಲ್ಲಿ ಶಸ್ತ್ರಚಿಕಿತ್ಸೆಯ ಮುಂಚೆ ಮತ್ತು ನಂತರ ನೀಡುವ ಆರೈಕೆಯು ಮಗು ಚೇತರಿಸಿಕೊಳ್ಳುವಲ್ಲಿ ಗಮನಾರ್ಹ ಪಾತ್ರವಹಿಸುತ್ತದೆ ಎಂದು ಹೇಳಿದರು.