ನವದೆಹಲಿ: ಸರಕು ಮತ್ತು ಸೇವಾ ತೆರಿಗೆ ಜಾರಿಯಾಗಿದ್ದೆ ತಡ ಸಬ್ಸಿಡಿ ಸಹಿತ ಎಲ್‍ಪಿಜಿ ಸಿಲಿಂಡರ್ ಬೆಲೆ ಭಾರೀ ಏರಿಕೆಯಾಗಿದೆ.
ಕಳೆದ 6 ವರ್ಷದಲ್ಲಿ ಅತಿ ಹೆಚ್ಚು ಏರಿಕೆಯಾಗಿದ್ದು, 14.2 ಕೆಜಿ ತೂಕದ ಸಿಲಿಂಡರ್ ಬೆಲೆ 32 ರೂ. ಏರಿಕೆಯಾಗಿದೆ. ದೆಹಲಿಯಲ್ಲಿ ಜಿಎಸ್‍ಟಿ ಜಾರಿಯಾಗುವುದಕ್ಕೂ ಮೊದಲು ಸಬ್ಸಿಡಿ ಸಹಿತ ಪ್ರತಿ ಸಿಲಿಂಡರ್ ಬೆಲೆ 446.65 ರೂ. ಇದ್ದರೆ, ಈಗ ಈ ಬೆಲೆ 477.46 ರೂ.ಗೆ ತಲುಪಿದೆ.
Advertisement
ಕೋಲ್ಕತ್ತಾದಲ್ಲಿ 480.32 ರೂ. ಇದ್ದರೆ, ಚೆನ್ನೈನಲ್ಲಿ 465.56 ರೂ. ಇದೆ. ಸಬ್ಸಿಡಿ ರಹಿತ ಎಲ್‍ಪಿಜಿ ಬೆಲೆ ದೆಹಲಿಯಲ್ಲಿ 564 ರೂ. ಇದೆ.
Advertisement
ಇಂಡಿಯನ್ ಆಯಿಲ್ ವೆಬ್‍ಸೈಟ್ ಪ್ರಕಾರ ಬೆಂಗಳೂರಿನಲ್ಲಿ 14.2 ಕೆಜಿ ತೂಕದ ಸಬ್ಸಿಡಿ ಸಹಿತ ಸಿಲಿಂಡರ್ ಬೆಲೆ 477 ರೂ. ಇದ್ದರೆ, ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ 561 ರೂ. ಇರಲಿದೆ. 5 ಕೆಜಿ ಸಬ್ಸಿಡಿ ಸಹಿತ ಸಿಲಿಂಡರ್ ಬೆಲೆ 177.50 ರೂ. ಇದ್ದರೆ, ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ 209.50 ರೂ. ಇರಲಿದೆ.
Advertisement
ಜೂನ್ 2011ರಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿದ್ದ ಹಿನ್ನೆಲೆಯಲ್ಲಿ ಎಲ್‍ಪಿಜಿ ಸಿಲಿಂಡರ್ ಬೆಲೆ 50 ರೂ. ಏರಿಕೆ ಕಂಡಿತ್ತು.
Advertisement
ಏರಿದ್ದು ಯಾಕೆ?
ಜಿಎಸ್‍ಟಿಯಲ್ಲಿ ಎಲ್‍ಪಿಜಿ ಶೇ.5ರ ತೆರಿಗೆ ವ್ಯಾಪ್ತಿಯಲ್ಲಿ ಬರುತ್ತಿದ್ದು, ಈ ಹಿಂದೆ ದೆಹಲಿ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಹಸಿರು ಇಂಧನಕ್ಕೆ ತೆರಿಗೆ ವಿಧಿಸುತ್ತಿರಲಿಲ್ಲ. ಶೇ.2ರಿಂದ ಶೇ. 4ರಷ್ಟು ವ್ಯಾಟ್ ಶುಲ್ಕ ಮಾತ್ರ ವಿಧಿಸಲಾಗುತಿತ್ತು. ಜಿಎಸ್‍ಟಿ ಜಾರಿ ನಂತರ ಇಂಧನಕ್ಕೆ ತೆರಿಗೆ ವಿಧಿಸದ ರಾಜ್ಯಗಳಲ್ಲಿ ಎಲ್‍ಪಿಜಿ ಬೆಲೆ ಏರಿಕೆಯಾಗಿದೆ.
ಇಷ್ಟೇ ಅಲ್ಲದೇ ಜೂನ್ ನಿಂದ ಸಬ್ಸಿಡಿ ಮೊತ್ತ ಕಡಿಮೆಯಾಗಿದೆ. ಜೂನ್‍ವರೆಗೆ ಪ್ರತಿ ಸಿಲಿಂಡರ್‍ಗೆ 119.85 ರೂ. ಸಬ್ಸಿಡಿ ಸಿಗುತಿತ್ತು. ಆದರೆ ಹೊಸ ಅಧಿಸೂಚನೆಯಂತೆ ಈಗ 107 ರೂ. ಹಣ ಸಬ್ಸಿಡಿಯಾಗಿ ಬ್ಯಾಂಕ್ ಖಾತೆಗೆ ಜಮೆ ಆಗುತ್ತಿದೆ.
1 ವರ್ಷದಲ್ಲಿ ಒಂದು ಕುಟುಂಬಕ್ಕೆ 14.2 ಕೆಜಿ ತೂಕದ 12 ಸಿಲಿಂಡರ್ ಗಳನ್ನು ಸಬ್ಸಿಡಿ ದರದಲ್ಲಿ ಕೇಂದ್ರ ಸರ್ಕಾರ ನೀಡುತ್ತಿದೆ.