– ಕಡಂದಲೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಅವಘಡ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದ್ರೆಯಲ್ಲಿ ಇತಿಹಾಸ ಪ್ರಸಿದ್ಧ ಕಡಂದಲೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಷಷ್ಠಿ ಉತ್ಸವದಲ್ಲಿ ಹಾರಿಸಿದ್ದ ಧ್ವಜವನ್ನು ಇಳಿಸುವ ವೇಳೆ ಧ್ವಜಸ್ತಂಭದಲ್ಲಿದ್ದ ಗರುಡ ಮತ್ತು ಕಿರು ಘಂಟೆ ಕೆಳಗೆ ಬಿದ್ದಿದೆ.
ದೇವಾಲಯದಲ್ಲಿ ಷಷ್ಠಿ ಉತ್ಸವ ನಡೆದು ಧೂಮಾವತಿ ದೈವದ ನೇಮ ಜರಗಿತ್ತು. ನೇಮದ ಸಂದರ್ಭದಲ್ಲಿ ಧೂಮಾವತಿ ದೈವದ ದೇವಸ್ಥಾನಕ್ಕೆ ಬ್ರಹ್ಮಕಲಶ ಆಗಬೇಕೆಂದು ದೈವ ನುಡಿ ಹೇಳಿತ್ತು. ಆದರೆ ಗ್ರಾಮಸ್ಥರು ಬ್ರಹ್ಮಕಲಶ ಮಾಡಲು ನಿರಾಕರಿಸಿದ್ದರು.
ಉತ್ಸವದ ಮರುದಿನ ಕಾಕತಾಳೀಯ ಎಂಬಂತೆ ಧ್ವಜಸ್ತಂಭದಲ್ಲಿದ್ದ ಗರುಡ ಮತ್ತು ಕಿರುಘಂಟೆಯನ್ನು ಇಳಿಸುವಾಗ ಹಗ್ಗ ತುಂಡಾಗಿ ಗರುಡ ಕೆಳಕ್ಕೆ ಬಿದ್ದಿದೆ. ಉತ್ಸವ ಸಂದರ್ಭದಲ್ಲಿ ಏರಿಸಲ್ಪಟ್ಟ ಗರುಡ ಕೆಳಕ್ಕೆ ಬಿದ್ದರೆ ಅನಾಹುತ ಸಂಭವಿಸುತ್ತದೆ ಎನ್ನುವ ನಂಬಿಕೆ ಕರಾವಳಿ ಭಾಗದಲ್ಲಿದೆ.
ಧೂಮಾವತಿ ದೈವ ದೇವಸ್ಥಾನಕ್ಕೆ ಬ್ರಹ್ಮಕಲಶ ಆಗಬೇಕೆಂದು ದೈವ ಹೇಳಿದ್ದ ಮರುದಿನವೇ ಗರುಡ ಮತ್ತು ಕಿರು ಘಂಟೆ ಕೆಳಗೆ ಬಿದ್ದಿದ್ದನ್ನು ಕಂಡು ಗ್ರಾಮಸ್ಥರು ಆತಂಕದಲ್ಲಿದ್ದಾರೆ.
19 ವರ್ಷಗಳ ಹಿಂದೆ ದೇವಸ್ಥಾನಕ್ಕೆ ಬ್ರಹ್ಮಕಲಶ ನಡೆದಿದ್ದರೂ, ಈಗ ಶಿಥಿಲಾವಸ್ಥೆಗೆ ಬಂದಿತ್ತು. ಈ ಸಂದರ್ಭದಲ್ಲಿ ಊರಿನ ಪ್ರಮುಖರು ದೈವದ ನುಡಿಯನ್ನು ಉಲ್ಲಂಘಿಸಿದ್ದೇ ಅನಾಹುತಕ್ಕೆ ಕಾರಣ. ಇದರಿಂದ ಮುಂದೆ ಅನಾಹುತ ಕಾದಿದೆ ಅನ್ನುವ ಮಾತು ಈಗ ಗ್ರಾಮಸ್ಥರ ಬಾಯಲ್ಲಿ ಹರಿದಾಡುತ್ತಿದೆ.
ನಡೆದ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ದೇವಸ್ಥಾನ ಆಡಳಿತ ಮಂಡಳಿ ಸದಸ್ಯ ಸಂತೋಷ್ ಶೆಟ್ಟಿ, 13ರಂದು ಷಷ್ಠಿ ದಿವಸವಾಗಿತ್ತು. ಅಂದು ಧ್ವಜರೋಹಣ ಆಗಿದೆ. ಆಗ ಗರುಡ ಸಮೇತ ಧ್ವಜಸ್ತಂಭಕ್ಕೆ ಏರಿಸುವಾಗ ಹಗ್ಗದ ಗಂಟು ರಾಟೆಗೆ ಸಿಲುಕಿಕೊಂಡಿದೆ. ಆದರೆ ಅಂದಿನ ದಿನ ಯಾರು ಇದನ್ನು ಗಮನಿಸಿರಲಿಲ್ಲ. ನಾಲ್ಕು ದಿನಗಳ ಬಳಿಕ ಪೂಜೆ ಸಲ್ಲಿಸಿ ಗರುಡನನ್ನು ಕೆಳಗೆ ಇಳಿಸಬೇಕಿತ್ತು. ನಾವು ಗರುಡವನ್ನು ಕೆಳಗಿಳಿಸಲು ಪ್ರಯತ್ನ ಮಾಡುತ್ತಿದ್ದೆವು. ಆಗ ಅಕಸ್ಮಾತಾಗಿ ಕೆಳಗೆ ಬಿದ್ದಿದೆ ಎಂದು ಹೇಳಿದ್ದಾರೆ.
ಧ್ವಜಸ್ತಂಭದಲ್ಲಿದ್ದ ಗರುಡ ಮತ್ತು ಕಿರು ಘಂಟೆ ಕೆಳಗೆ ಬಿದ್ದಿದ್ದರಿಂದ ಯಾವುದೇ ಅನಾಹುತವಾಗಿಲ್ಲ. ಆದರೂ ಯಾರಿಗೂ ತೊಂದರೆಯಾಗಬಾದರದು ಎಂದು ಕೆಳಗೆ ಬಿದ್ದ ತಕ್ಷಣ 48 ಕಳಸವಿಟ್ಟು ಪೂಜೆ ಸಲ್ಲಿಸಿದ್ದೇವೆ ಎಂದು ಸಂತೋಷ್ ಶೆಟ್ಟಿ ಮಾಹಿತಿ ನೀಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv