ಮಂಡ್ಯ: ಗರ್ಭಿಣಿ ಸ್ತ್ರೀಗೆ ಕುಟುಂಬ ವರ್ಗ, ಬಂಧು ಬಳಗದವರು ಸೀಮಂತ ಕಾರ್ಯಕ್ರಮ ಮಾಡುವುದು ಸರ್ವೇ ಸಾಮಾನ್ಯ. ಆದರೆ ಓರ್ವ ಮಹಿಳಾ ಪೊಲೀಸ್ ಅಧಿಕಾರಿಗೆ ಠಾಣೆಯ ಸಿಬ್ಬಂದಿಯೇ ಹೃದಯ ತುಂಬಿ ಕುಟುಂಬಸ್ಥರಂತೆ ಸೀಮಂತ ಕಾರ್ಯಕ್ರಮ ಮಾಡಿದ್ದಾರೆ.
ಜಿಲ್ಲೆಯ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿರುವ ಸುಮಾರಾಣಿ ಅವರ ಸೀಮಂತ ಕಾರ್ಯಕ್ರಮ ಠಾಣೆಯಲ್ಲಿ ಪೊಲೀಸರ ಸಮ್ಮುಖದಲ್ಲಿ ನೆರವೇರಿದೆ. ಮನೆಗಳಲ್ಲಿ ಕುಟುಂಬ ವರ್ಗದವರು ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಕಾರ್ಯಕ್ರಮ ಮಾಡುವಂತೆಯೇ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಹಿಂದೂ ಸಂಸ್ಕೃತಿಯಂತೆ ಸಮಾರಂಭ ಮಾಡಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
Advertisement
Advertisement
ಸಬ್ ಇನ್ಸ್‌ಪೆಕ್ಟರ್ ಸುಮಾರಾಣಿ ಅವರು ಪಾಂಡವಪುರ ಪೊಲೀಸ್ ಠಾಣೆಗೆ ಹತ್ತು ತಿಂಗಳ ಹಿಂದೆ ಕರ್ತವ್ಯಕ್ಕೆ ಹಾಜರಾಗಿದ್ದು, ವಿಧಾನಸಭೆ ಚುನಾವಣೆ ಸೇರಿದಂತೆ ವಿವಿಧ ಹಂತದಲ್ಲಿ ಉತ್ತಮ ಮಹಿಳಾ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.
Advertisement
ಸೀಮಂತ ಕಾರ್ಯಕ್ರಮದಲ್ಲಿ ಸಬ್ ಇನ್ಸ್‌ಪೆಕ್ಟರ್ ಸುಮಾರಾಣಿ ಅವರಿಗೆ ಮಹಿಳಾ ಸಿಬ್ಬಂದಿ ವರ್ಗ ಅರಿಶಿಣ, ಕುಂಕುಮ ಹಚ್ಚಿ, ಹಣ್ಣು ಹಂಪಲು, ಸೀರೆ ನೀಡಿ ಮಡಿಲು ತುಂಬಿದರು. ಜೊತೆಗೆ ಠಾಣೆಯ ಹಿರಿಯರು ಸುಮಾರಾಣಿ ಅವರಿಗೆ ಅಕ್ಷತೆ ಹಾಕುವ ಮೂಲಕ ಶುಭ ಹಾರೈಸಿದರು. ಇನ್ನು ಸಹೋದ್ಯೋಗಿ ಪೊಲೀಸ್ ಸಿಬ್ಬಂದಿಯ ಕಾರ್ಯಕ್ಕೆ ಸಬ್ ಇನ್ಸ್‌ಪೆಕ್ಟರ್ ಸುಮಾರಾಣಿ ಸಹ ಸಂತಸ ವ್ಯಕ್ತಪಡಿಸಿದ್ದಾರೆ.
Advertisement
ಸದಾ ಕ್ರೈಂ, ತನಿಖೆ, ವಿಚಾರಣೆ ಇಂತಹ ವಿವಾದದಲ್ಲೇ ಬ್ಯುಸಿಯಾಗಿರುತ್ತಿದ್ದ ಪೊಲೀಸ್ ಸಿಬ್ಬಂದಿ ತಮ್ಮ ಮೇಲಾಧಿಕಾರಿಯ ಸೀಮಂತ ಮಾಡಿ ಅಧಿಕಾರಿಯ ಮೇಲಿರುವ ಅಭಿಮಾನ ಮೆರೆದಿದ್ದಾರೆ.