ರಾಯಚೂರು: ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯರು ಮಹಡಿ ಮೇಲಿನಿಂದ ಪಠ್ಯ, ಪುಸಕ್ತಗಳಿರುವ ಬ್ಯಾಗ್ ಎಸೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಗರದ ಜಸ್ಟಿಸ್ ಶಿವರಾಜ್ ಪಾಟೀಲ್ ಕಾಲೇಜಿನ ವಿದ್ಯಾರ್ಥಿನಿಯರು ಮಹಡಿ ಮೇಲಿನಿಂದ ಸಾಲು ಸಾಲಾಗಿ ಪಠ್ಯ ಪುಸಕ್ತಗಳು ಇರುವ ಬ್ಯಾಗ್ ನನ್ನು ಮೂರನೇ ಮಹಡಿಯಿಂದ ಭಾನುವಾರ ಎಸೆದಿದ್ದಾರೆ. ಇದನ್ನು ಕಂಡ ಕೆಲ ಸ್ಥಳೀಯರು 1 ನಿಮಿಷ 18 ಸೆಕೆಂಡ್ ವಿಡಿಯೋವನ್ನು ಚಿತ್ರೀಕರಣ ಮಾಡಿದ್ದಾರೆ.
ಈ ದೃಶ್ಯ ಕಂಡು ಸ್ಥಳೀಯರು, ವಿದ್ಯೆ ಕಲಿಸುವ ಪಠ್ಯ, ಪುಸಕಗಳ ಬೆಲೆ ಗೊತ್ತಿಲ್ಲದೆ, ಅಲೋಚನೆ ಇಲ್ಲದೆ ಮಾಡುತ್ತಿದ್ದಾರೆ. ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಹೆಸರು ಇರುವಂತಹ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಈ ರೀತಿ ಮಾಡಿರುವುದಕ್ಕೆ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.
ಭಾನುವಾರ ಪಿಯು ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ತರಗತಿಯನ್ನು ಏರ್ಪಡಿಸಲಾಗಿತ್ತು. ಕ್ಲಾಸಿನಲ್ಲಿ ಕೂರಲು ಇಷ್ಟವಿರದ ವಿದ್ಯಾರ್ಥಿಗಳು ಈ ರೀತಿಯಾಗಿ ಮಾಡುವ ಮೂಲಕ ಹುಡುಗಾಟ ಮಾಡಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರು ಹೇಳಿದ್ದಾರೆ. ವಿಡಿಯೋ ವೈರಲ್ ಆಗಿರುವ ಕುರಿತಂತೆ ಮಾಹಿತಿ ಬಂದಿದ್ದು, ಇದರ ಬಗ್ಗೆ ಪರಿಶೀಲಿಸುವುದಾಗಿ ಹೇಳಿದ್ದಾರೆ.