ರಾಯಚೂರು: ಸೂರ್ಯಗ್ರಹಣ ಒಂದು ನೈಸರ್ಗಿಕ ಕ್ರಿಯೆ, ಮೂಢನಂಬಿಕೆಯ ಆಚರಣೆಗಳು ಬೇಡ ಎಂದು ರಾಯಚೂರಿನ ಉಡುಮಗಲ್ ಖಾನಾಪುರ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಗ್ರಾಮದಲ್ಲಿ ಜಾಗೃತಿ ಜಾಥಾ ನಡೆಸಿ ಗ್ರಾಮಸ್ಥರಿಗೆ ತಿಳುವಳಿಕೆ ನೀಡಿದರು.
ಡಿಸೆಂಬರ್ 26 ರಂದು ಬೆಳಿಗ್ಗೆ 8 ಗಂಟೆ 6 ನಿಮಿಷದಿಂದ 11 ಗಂಟೆ 8 ನಿಮಿಷದವರೆಗೆ ನಡೆಯುವ ಕಂಕಣ ಸೂರ್ಯಗ್ರಹಣ ನೈಸರ್ಗಿಕ ವಿದ್ಯಮಾನವಾಗಿದ್ದು, ಅದನ್ನ ಬರಿಗಣ್ಣಿನಿಂದ ನೋಡಬಾರದು ಅಂತ ಎಚ್ಚರಿಕೆ ನೀಡಿದರು. ಚಂದ್ರ ಸೂರ್ಯನನ್ನ ಸಂಪೂರ್ಣ ಮರೆಮಾಚದೆ ಅದರ ಅಂಚುಗಳಿಂದ ಬೆಳಕು ತೂರಿ ಬರುತ್ತಾ ಬಳೆ ಮಾದರಿಯಲ್ಲಿ ಕಾಣುವುದು ಇದನ್ನೇ ಕಂಕಣ ಗ್ರಹಣವೆಂದು ಕರೆಯುತ್ತಾರೆ. ಮೊಬೈಲ್ ಕ್ಯಾಮೆರಾ ಮೂಲಕ ಸೂರ್ಯಗ್ರಹಣ ಸೆರೆಹಿಡಿಯಬಾರದು. ಎಕ್ಸ್ ರೇ ಹಾಳೆ, ಸಾಮಾನ್ಯ ಸನ್ ಗ್ಲಾಸ್ ಮೂಲಕವೂ ಸೂರ್ಯಗ್ರಹಣ ನೋಡದೆ ತಾರಾಲಯದಲ್ಲಿನ ಕನ್ನಡಕ ಖರೀದಿಸಿ ಗ್ರಹಣ ವೀಕ್ಷಿಸಲು ಹೇಳಿದರು.
Advertisement
Advertisement
ಗ್ರಹಣ ಕಾಲದಲ್ಲಿ ಆಹಾರ ನೀರು ವಿಷವಾಗುವುದಿಲ್ಲ, ಗ್ರಹಣ ವೀಕ್ಷಿಸಿದರೆ ಗರ್ಭಿಣಿಯರಿಗೆ ತೊಂದರೆಯಾಗುವುದಿಲ್ಲ, ಗ್ರಹಣದ ವೇಳೆ ವಿಷಪೂರಿತ ಕಿರಣಗಳು ಬರುವುದಿಲ್ಲ. ಆದ್ರೆ ಬರಿಗಣ್ಣಿನ ಮೂಲಕ ನೋಡದೆ ಗ್ರಹಣವನ್ನ ಶೋಧಕದ ಮೂಲಕ ನೋಡಿ ಆನಂದಿಸಿ ಅಂತ ವಿದ್ಯಾರ್ಥಿಗಳು ಘೋಷಣೆ ಕೂಗುವುದರ ಮೂಲಕ ಜಾಗೃತಿ ಮೂಡಿಸಿದರು.
Advertisement
ಸಾರ್ವಜನಿಕ ಶಿಕ್ಷಣ ಇಲಾಖೆ, ರಾಜ್ಯ ವಿಜ್ಞಾನ ಪರಿಷತ್ತು, ಭಾರತ ಜ್ಞಾನ ವಿಜ್ಞಾನ ಸಮಿತಿ ಹಾಗೂ ಉಡುಮಗಲ್ ಖಾನಾಪುರ ಸರ್ಕಾರಿ ಪ್ರೌಢ ಶಾಲೆ ಸಂಯುಕ್ತಾಶ್ರಯದಲ್ಲಿ ಜಾಗೃತಿ ಕಾರ್ಯಕ್ರಮ ನಡೆಯಿತು. ಭಾರತ ಜ್ಞಾನ ವಿಜ್ಞಾನ ಸಮಿತಿ ಈಗಾಗಲೇ ಸುಮಾರು 200 ಕನ್ನಡಕಗಳನ್ನ ವಿದ್ಯಾರ್ಥಿಗಳಿಗೆ ವಿತರಣೆ ಮಾಡಿದ್ದು, ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಡಿಸೆಂಬರ್ 26 ರಂದು ಸೂರ್ಯಗ್ರಹಣ ವೀಕ್ಷಣೆಗೆ ರಾಯಚೂರಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ವ್ಯವಸ್ಥೆ ಮಾಡಿದೆ.