ಕಾರವಾರ: ಮಕ್ಕಳು ಶಾಲೆಗೆ ಚಕ್ಕರ್ ಹೊಡೆಯುವುದು ಮಾಮೂಲಿ. ಆದರೆ ಉತ್ತರ ಕನ್ನಡ ಜಿಲ್ಲೆಯ ಮಂಡಗೋಡಿನಲ್ಲಿ ಶಿಕ್ಷಕರೇ ಶಾಲೆಗೆ ಚಕ್ಕರ್ ಹೊಡೆದು ಮಕ್ಕಳಿಂದ ಪಾಠ ಹೇಳಿಸಿಕೊಂಡಿದ್ದಾರೆ.
ಕಳೆದ ಮೂರು ತಿಂಗಳಿಂದ ಶಾಲೆಗೆ ಶಿಕ್ಷಕರು ಬಾರದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಶಾಲೆಯ ಎದುರು ಪ್ರತಿಭಟನೆ ನಡೆಸಿ ಶಿಕ್ಷಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಮುಂಡಗೋಡ ತಾಲೂಕಿನ ಬದ್ರಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇಬ್ಬರು ಶಿಕ್ಷಕರನ್ನು ಹೊಂದಿದ್ದು, 50 ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದಾರೆ.
ಕಳೆದ ಮೂರು ತಿಂಗಳಿಂದ ಮಕ್ಕಳಿಗೆ ಪಾಠ ಮಾಡದೇ ಶಿಕ್ಷಕ ಜಾವಳಗಿ, ಶಿಕ್ಷಕಿ ನಾಗಮಣಿ, ಶಾರದ ಎಂಬವರು ಗೈರಾಗುತ್ತಿದ್ದರು. ಕಳೆದ ಒಂದು ತಿಂಗಳ ಹಿಂದೆ ಶಿಕ್ಷಕಿ ನಾಗಮಣಿ ಅವರಿಗೆ ಅಪಘಾತದಲ್ಲಿ ಕೈ ಮುರಿದಿದ್ದು, ಈ ಕಾರಣದಿಂದ ರಜೆ ಹಾಕಿದ್ದಾರೆ. ಇವರ ಜಾಗಕ್ಕೆ ಶಾರದ ಅವರನ್ನು ಬದಲಿ ನಿಯುಕ್ತಿ ಮಾಡಲಾಗಿದೆ. ಆದರೆ ಶಾಲೆಗೆ ಈ ಶಿಕ್ಷಕರು ಕಳೆದ ಮೂರು ತಿಂಗಳಿಂದ ಬಾರದೇ ಚಕ್ಕರ್ ಹಾಕುತ್ತಿದ್ದರು.
ಪ್ರತಿದಿನ ಶಾಲೆಗೆ ಮಕ್ಕಳು ಬಂದು ಬೀಗ ಹಾಕಿರುವುದನ್ನು ನೋಡಿ ಮನೆಗೆ ಮರಳುತ್ತಿದ್ದರು. ಇದಲ್ಲದೇ ಈ ಕುರಿತು ಶಾಲೆಯ ಎಸ್‍ಡಿಎಂಸಿ ಸದಸ್ಯರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ಸಹ ನೀಡಿದ್ದಾರೆ. ಆದರೆ ಕಾರಣವೇ ಇಲ್ಲದೇ ಗೈರಾಗಿರುವ ಈ ಶಿಕ್ಷಕರ ವಿರುದ್ಧ ಯಾವ ಕ್ರಮವೂ ಜರುಗಿರಲಿಲ್ಲ. ಈ ಕಾರಣದಿಂದ ಇಂದು ಶಾಲೆಗೆ ಬಂದ ಮಕ್ಕಳು ಬೀಗ ಹಾಕಿರುವ ಶಾಲೆಯ ಎದುರು ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನೆ ವಿಷಯ ಶಿಕ್ಷಕರ ಕಿವಿಗೂ ಬಿದ್ದಿದ್ದು ನಂತರ ಶಾಲೆಗೆ ದೌಡಾಯಿಸಿದ್ದು, ಮಕ್ಕಳ ಹಾಗೂ ಪೊಷಕರ ಮುಂದೆ ನಾಟಕವಾಡಿದ್ದಾರೆ. ಮಕ್ಕಳು ಶಿಕ್ಷಕರಿಗೆ ಕ್ಲಾಸ್ ತೆಗೆದುಕೊಂಡಿದ್ದು ಶಾಲೆಗೆ ಪ್ರತಿದಿನ ಬರುವಂತೆ ಹಾಗೂ ಪಾಠ ಮಾಡುವಂತೆ ಆಗ್ರಹಿಸಿದರು.