ಚಿಕ್ಕಬಳ್ಳಾಪುರ: ಶಾಲೆಗೆ ನೀರು ಪೂರೈಸದ ಗ್ರಾಮ ಪಂಚಾಯಿತಿ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ಮೆಳೇಕೋಟೆ ಗ್ರಾಮದಲ್ಲಿ ನಡೆದಿದೆ.
ಮೆಳೇಕೋಟೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಬಳಕೆ ಹಾಗೂ ಅಡುಗೆಗೆ ನೀರಿನ ಸರಬರಾಜು ಇಲ್ಲದೆ, ಶಾಲೆ ಆರಂಭದಿಂದಲೂ ಬಸವಳಿಯುವಂತಾಗಿತ್ತು. ಇದರಿಂದ ಪಕ್ಕದ ಜಮೀನಿನಲ್ಲಿ ನೀರನ್ನು ತರಬೇಕಾದ ಅನಿವಾರ್ಯತೆ ಉಂಟಾಗಿದೆ. ಈ ಕುರಿತಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ, ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ.
ಅಲ್ಲದೆ ಶಾಲಾ ಶಿಕ್ಷಕರು ಮಕ್ಕಳ ಶೌಚಾಲಯಕ್ಕೂ ನೀರಿಲ್ಲದೆ ಪರಿತಪಿಸುತ್ತಿದರೂ, ಗ್ರಾಮ ಪಂಚಾಯತಿ ಅಧಿಕಾರಿ ಸಿಬ್ಬಂದಿ ಯಾರೂ ಮನವಿಗೂ ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಇದರಿಂದ ಬೇಸತ್ತ ವಿದ್ಯಾರ್ಥಿಗಳು ಇಂದು ಗ್ರಾಮ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಿದ್ದು, ತಟ್ಟೆ ಲೋಟ ಬಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೆಆರ್‌ಎಸ್‌ನಿಂದ 50 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ – ರಂಗನತಿಟ್ಟು ಪಕ್ಷಿಧಾಮದ ನಡುಗೆಡ್ಡೆಗಳು ಮುಳಗಡೆ
ವಿಷಯ ತಿಳಿದ ಪಿಡಿಒ ಗಂಗಭೈರಪ್ಪ ಅವರು ಸ್ಥಳಕ್ಕೆ ದೌಡಾಯಿಸಿದ್ದು, ನೂತನವಾಗಿ ವರ್ಗಾವಣೆಯಾಗಿ ಬಂದಿರುವ ಕಾರಣ, ಸಮಸ್ಯೆ ಗಮನಕ್ಕೆ ಬಂದಿಲ್ಲ. ಕೂಡಲೇ ಸರಿಪಡಿಸುವುದಾಗಿ ಭರವಸೆ ನೀಡಿ, ಮಕ್ಕಳೊಂದಿಗೆ ಶಾಲೆಗೆ ತೆರಳಿ ನೀರಿನ ಪೂರೈಕೆಯ ಕ್ರಮಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ: ನಾಳೆ ಚಾಮರಾಜಪೇಟೆ ಬಂದ್- ಜಮೀರ್ ಕಚೇರಿಗೆ ತೆರಳಿ ಹಿಂದೂ ಸಂಘಟನೆ ಮನವಿ