ಮಡಿಕೇರಿ: ಪ್ರತಿ ತಿಂಗಳಿಗೊಮ್ಮೆ ಶಾಲಾ ಮಕ್ಕಳು ಪೊಲೀಸ್ ಠಾಣೆಗೆ ಬರುತ್ತಾರೆ ಅಂದರೆ ಯಾಕೆ ಬರುತ್ತಾರೆ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತೆ. ಆದರೆ ಇದಕ್ಕೆ ಉತ್ತರ ‘ತೆರೆದ ಮನೆ’ ಕಾರ್ಯಕ್ರಮ.
ಹೌದು. ಪೊಲೀಸ್ ಇಲಾಖೆಯು ಜನಸ್ನೇಹಿ, ಸಮಾಜಮುಖಿಯಾಗಲಿ ಎಂದು ‘ತೆರೆದ ಮನೆ’ ಅನ್ನುವ ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ಕೊಡಗು ಜಿಲ್ಲೆಯಲ್ಲಿ ‘ತೆರೆದ ಮನೆ’ ಕಾರ್ಯಕ್ರಮ ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುತ್ತಿದೆ. ಹೀಗಾಗಿ ಕಡ್ಡಾಯವಾಗಿ ಕೊಡಗಿನ ಪೊಲೀಸ್ ಠಾಣೆಯಲ್ಲಿ ಪ್ರತಿ ತಿಂಗಳು ಈ ಕಾರ್ಯಕ್ರಮ ನಡೆಯಲಿದ್ದು ವಿದ್ಯಾರ್ಥಿಗಳು ಠಾಣೆಗೆ ಬಂದು ಇಲ್ಲಿನ ಕೆಲಸ, ಕಾರ್ಯಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲಿದ್ದಾರೆ.
Advertisement
Advertisement
ಏನಿದು ತೆರೆದ ಮನೆ?
ತೆರೆದ ಮನೆಗೆ ಶಾಲಾ ಮಕ್ಕಳು ಮುಕ್ತವಾಗಿ ಬರಬಹುದಾಗಿದೆ. ಪೊಲೀಸ್ ಠಾಣೆಯಲ್ಲಿ ಏನೇನು ದೈನಂದಿನ ಕಾರ್ಯಗಳು ನಡೆಯುತ್ತೆ? ಪೊಲೀಸರು ಹಾಗೂ ಶಾಲಾ ಮಕ್ಕಳ ಮಧ್ಯೆ ಬಾಂಧವ್ಯ ವೃದ್ಧಿ, ಕಾನೂನು ತಿಳುವಳಿಕೆ, ಮಕ್ಕಳ ಸುರಕ್ಷತೆ, ರಸ್ತೆ ಸಂಚಾರ ನಿಯಮಾವಳಿ, ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣ ಸೇರಿದಂತೆ ಮಕ್ಕಳಿಗೆ ಉಪಯುಕ್ತವಾದ ಕಾನೂನಿನ ಬಗ್ಗೆ ತೆರೆದ ಮನೆಯಲ್ಲಿ ಅರಿವು ಮೂಡಿಸಲಾಗುತ್ತಿದೆ.
Advertisement
ಶಾಲಾ ಹಂತದಲ್ಲೇ ಮಕ್ಕಳಿಗೆ ಕಾನೂನಿನ ಬಗ್ಗೆ ತಿಳುವಳಿಕೆ ನೀಡಿದರೆ ಉತ್ತಮ ನಾಗರಿಕರನ್ನಾಗಿ ಮಾಡಬಹುದು ಅನ್ನೋದು ಪೊಲೀಸ್ ಇಲಾಖೆ ಚಿಂತನೆಯಾಗಿದೆ. ಈ ಕಾರ್ಯಕ್ರಮ ರಾಜ್ಯಾದ್ಯಂತ ಜಾರಿಯಲ್ಲಿದ್ದು, ತೆರೆದ ಮನೆಯಲ್ಲಿ ಕಾನೂನಿನ ಬಗ್ಗೆ ತಿಳಿದುಕೊಳ್ಳಲು ಶಾಲಾ ಮಕ್ಕಳು ಸಹ ಉತ್ಸುಕರಾಗಿದ್ದಾರೆ. ಕಾನೂನು ಪಾಲನೆಯಲ್ಲಿ ನಮ್ಮ ಪಾತ್ರವೇನು ಎನ್ನುವುದನ್ನು ವಿದ್ಯಾರ್ಥಿಗಳ ಮೂಲಕ ಅವರ ಕುಟುಂಬಸ್ಥರಿಗೂ ಕಾನೂನಿನ ತಿಳುವಳಿಕೆ ವರ್ಗಾಯಿಸೋದು ಇದರ ಉದ್ದೇಶವಾಗಿದೆ.
Advertisement
ಪೊಲೀಸರು ಸಮಾಜದ ಒಂದು ಭಾಗ. ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವುದು ಸಮಾಜದ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಪೊಲೀಸರು ಸಮಾಜದೊಂದಿಗೆ ಹೇಗಿರಬೇಕು? ನಾಗರಿಕರು ಪೊಲೀಸರೊಂದಿಗೆ ಹೇಗಿರಬೇಕು? ಹೀಗೆ ಪರಸ್ಪರ ಬಾಂಧವ್ಯ ಬೆಳೆಸಲು, ಪೊಲೀಸ್ ಇಲಾಖೆ ಸಮಾಜಮುಖಿ ಹಾಗೂ ಜನ ಸ್ನೇಹಿಯಾಗುವುದಕ್ಕೆ ತೆರೆದ ಮನೆ ಕಾರ್ಯಕ್ರಮ ಸಹಕಾರಿಯಾಗಿದೆ. ಅಲ್ಲದೆ ಇದರಿಂದ ಮಕ್ಕಳಿಗೂ ಪೋಲಿಸರ ಭಯ ಮತ್ತು ಆತಂಕ ದೂರವಾಗುತ್ತದೆ ಎಂಬುವುದು ವಿದ್ಯಾರ್ಥಿಗಳ ಮಾತಾಗಿದೆ.