ವಿಜಯಪುರ: ಚಲಿಸುತ್ತಿದ್ದ ಶಾಲಾ ವಾಹನದ ಟೈರ್ ಸ್ಫೋಟಗೊಂಡು ತೆರೆದ ಬಾವಿಯ ಪಕ್ಕದಲ್ಲೇ ಉರುಳಿಬಿದ್ದ ಘಟನೆ ವಿಜಯಪುರದ ಇಂಡಿ ತಾಲೂಕಿನ ಧೂಳಖೇಡ ಬಳಿ ನಡೆದಿದೆ.
ಧೂಳಖೇಡ ಗ್ರಾಮದ ಶ್ರೀ ಕಮಲ ಪಬ್ಲಿಕ್ ಸ್ಕೂಲ್ ಗೆ ಸೇರಿದ ಶಾಲಾ ವಾಹನ ಇದಾಗಿದ್ದು, ಶಾಲೆ ಮುಗಿದ ಬಳಿಕ ಸುಮಾರು 80 ವಿದ್ಯಾರ್ಥಿಗಳನ್ನ ಮನೆಗೆ ವಾಪಸ್ ಕರೆತಂದು ಬಿಡುತ್ತಿದ್ದ ವೇಳೆ ಶಿರನಾಳ -ಮರಗೂರ ಮಧ್ಯೆ ನಡೆದಿದೆ. ವಾಹನ ಪಲ್ಟಿಯಾದ ಅಲ್ಪ ಅಂತರದಲ್ಲಿ ತೆರೆದ ಬಾವಿ ಇದ್ದು, ಭಾರೀ ಅನಾಹುತ ತಪ್ಪಿದಂತಾಗಿದೆ.
ಘಟನೆಗೆ ವಾಹನದ ಟೈರ್ ಸ್ಫೋಟಗೊಂಡಿದ್ದೇ ಕಾರಣ ಎನ್ನಲಾಗಿದ್ದು, ಘಟನೆ ಬಳಿಕ ವಾಹನದ ಚಾಲಕ ಮಾರುತಿ ಹೂಗಾರ ಪರಾರಿಯಾಗಿದ್ದಾನೆ. ಘಟನೆಯಲ್ಲಿ ಕೆಲ ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯರು ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆ ಬಳಿಕ ಚಾಲಕ ಪರಾರಿಯಾಗಿದ್ದು ವಿದ್ಯಾರ್ಥಿಗಳ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯ ಖಾಸಗಿ ಶಾಲೆ ಆಡಳಿತ ಮಂಡಳಿ ಹಾಗೂ ವಾಹನ ಚಾಲಕನ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.