ರಾಯಚೂರು: ಕೃಷಿ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಕೃಷಿ ಎಂಜಿನಿಯರ್‍ಗಳನ್ನು ಕಡೆಗಣಿಸಿದ್ದನ್ನ ಖಂಡಿಸಿ ರಾಯಚೂರು ಕೃಷಿ ವಿವಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ಆರಂಭಿಸಿದ್ದಾರೆ. ವಿಶ್ವವಿದ್ಯಾಲಯದ ತಾಂತ್ರಿಕ ಮಹಾವಿದ್ಯಾಲಯದ ಮುಖ್ಯ ಗೇಟ್ ಗೆ ಬೀಗ ಜಡಿದು ಹೋರಾಟ ನಡೆಸಿದ್ದಾರೆ.
ಕೃಷಿ ಇಲಾಖೆಯ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸೆಪ್ಟೆಂಬರ್ 16 ,2016 ರಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ರಾಜ್ಯ ಪತ್ರದಲ್ಲಿ ಕೃಷಿ ತಾಂತ್ರಿಕ ಪದವೀಧರರನ್ನ ಕೈಬಿಡಲಾಗಿದೆ. ಈ ಮೊದಲು ಹೊರಡಿಸಿದ್ದ ಗೆಜೆಟ್ ಅಧಿಸೂಚನೆಗಳಲ್ಲಿ ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ಕೃಷಿ ಎಂಜಿನಿಯರಿಂಗ್ ಪದವಿಯನ್ನು ಪರಿಗಣಿಸಲಾಗಿತ್ತು. ಹಾಗೇ ಈಗಲೂ ಪರಿಗಣಿಸುವಂತೆ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ತರಗತಿ ಹಾಗೂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿರುವುದರಿಂದ ಕೃಷಿ ವಿವಿ ಹಮ್ಮಿಕೊಂಡಿದ್ದ ವಿವಿಧ ಕಾರ್ಯಕ್ರಮಗಳು ರದ್ದಾಗಿವೆ. ಅಧಿಸೂಚನೆ ಹೊರಡಿಸುವುದು ಸರ್ಕಾರ ಮಟ್ಟದ ನಿರ್ಧಾರವಾಗಿರುವುದರಿಂದ ವಿವಿ ಚಟುವಟಿಕೆಗಳಿಗೆ ಅಡ್ಡಿ ಪಡಿಸದಂತೆ ವಿವಿ ಕುಲಪತಿ ಪಿ.ಎಂ.ಸಾಲಿಮಠ್ ವಿದ್ಯಾರ್ಥಿಗಳಿಗೆ ಮನವಿ ಮಾಡಿದ್ದಾರೆ. ಆದ್ರೆ ವಿದ್ಯಾರ್ಥಿಗಳು ಸರ್ಕಾರ ತಾರತಮ್ಯ ನೀತಿ ಬಿಟ್ಟು ನಮ್ಮನ್ನ ಪರಿಗಣಿಸುವವರೆಗೂ ಹೋರಾಟ ಮುಂದುವರೆಸುವುದಾಗಿ ಹೇಳಿದ್ದಾರೆ.