ಚಾಮರಾಜನಗರ: ವಿಶ್ವದೆಲ್ಲೆಡೆ ರೋಗ ಭೀತಿ ಹುಟ್ಟಿಸಿರುವ ಕೊರೊನಾ ಬಗ್ಗೆ ಕೇಳಿ ಶಾಲಾ ಮಕ್ಕಳು ಬೆದರಿ ಅಸ್ವಸ್ಥರಾದ ಘಟನೆ ಹನೂರು ತಾಲೂಕಿನಲ್ಲಿ ನಡೆದಿದೆ.
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಸಮೀಪದ ಗೊರಸಾಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ಕಾರದ ಸೂಚನೆ ಮೇರೆಗೆ ಕೊರೊನಾ ಲಕ್ಷಣಗಳು ಮತ್ತು ರೋಗ ಬಂದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಶಿಕ್ಷಕರು ವಿವರಿಸುತ್ತಿದ್ದರು. ಈ ವೇಳೆ ವಿದ್ಯಾರ್ಥಿಗಳಿಗೆ ತಲೆ ಸುತ್ತು, ತಲೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾದರು.
ಗೊರಸಾಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 7ನೇ ತರಗತಿಯವರೆಗೆ 146 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಪ್ರಾರ್ಥನೆ ವೇಳೆ ಶಿಕ್ಷಕ ಪ್ರೇಮ್‍ಕುಮಾರ್ ಕೊರೊನಾದ ಲಕ್ಷಣಗಳ ಬಗ್ಗೆ ತಿಳಿಸುತ್ತಿದ್ದಂತೆ 20 ವಿದ್ಯಾರ್ಥಿಗಳು ಅಸ್ವಸ್ಥರಾದರು.
ಅಸ್ವಸ್ಥರಾದ ತಕ್ಷಣ ವಿದ್ಯಾರ್ಥಿಗಳನ್ನು ಶಿಕ್ಷಕರು ಮಹದೇಶ್ವರ ಬೆಟ್ಟದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆ ತಂದು ದಾಖಲು ಮಾಡಿ ಆರೋಗ್ಯ ತಪಾಸಣೆ ಮಾಡಿಸಿದರು. ಈ ವೇಳೆ ಕೆಲ ವಿದ್ಯಾರ್ಥಿಗಳು ಜ್ವರ, ಹೊಟ್ಟೆ ನೋವಿನಿಂದ ಬಳಲುತ್ತಿದ್ದರೆ, ಮತ್ತೆ ಕೆಲ ವಿದ್ಯಾರ್ಥಿಗಳು ಬೆಳಗ್ಗಿನ ಉಪಹಾರ ಸೇವಿಸದೆ ಶಾಲೆಗೆ ಆಗಮಿಸಿದ್ದರಿಂದ ನಿಶಕ್ತರಾಗಿದ್ದರು. ಕೊರೊನಾ ಬಗ್ಗೆ ಕೇಳುತ್ತಿದ್ದಂತೆ ರೋಗಭಯ ಹೆಚ್ಚಾಗಿ ಗಾಬರಿಗೊಂಡಿದ್ದರು ಎಂದು ತಿಳಿದು ಬಂದಿದೆ.
ಕೊರೊನಾ ವೈರಸ್ ಬಗ್ಗೆ ಶಿಕ್ಷಕರು ತಿಳಿಸುತ್ತಿದ್ದಂತೆ ನಮಗೂ ಹಾಗೇ ಆಗುತ್ತಿದೆ ಎನ್ನಿಸಿತು ಎಂದು ಕೆಲ ವಿದ್ಯಾರ್ಥಿಗಳು ಹೇಳಿದರೆ, ಉಳಿದವರು ನಮಗೆ ಹಲವು ದಿನಗಳಿಂದ ಆರೋಗ್ಯ ಸರಿ ಇಲ್ಲ ಎಂದು ಅಳಲು ತೋಡಿಕೊಂಡರು. ಮಕ್ಕಳಿಗೆ ರಕ್ತ ಪರೀಕ್ಷೆ ಮಾಡಿಸಿ ತಲೆ ಸುತ್ತು ಮತ್ತು ತಲೆನೋವಿಗೆ ಔಷಧಿಗಳನ್ನು ಕೊಡಿಸಿ ನಂತರ ಶಿಕ್ಷಕರು ಅವರನ್ನು ಗ್ರಾಮಕ್ಕೆ ಕರೆದೊಯ್ದರು.