ಮಡಿಕೇರಿ: ಕೊಡಗಿನಲ್ಲಿ ಸುರಿದ ಧಾರಾಕಾರ ಮಳೆಗೆ ಉಂಟಾದ ಪ್ರವಾಹದಿಂದ ಜನರ ಆಸ್ತಿಪಾಸ್ತಿಗಳು ಮಾತ್ರ ನಾಶವಾಗಿಲ್ಲ, ಅದರ ಜೊತೆ ವಿದ್ಯಾರ್ಥಿಗಳ ಪಠ್ಯ ಪುಸ್ತಕ ಸಹ ಕೊಚ್ಚಿಕೊಂಡು ಹೋಗಿದೆ. ಮನೆಗಳಿಗೆ ನುಗ್ಗಿರುವ ಪ್ರವಾಹದ ನೀರಿಗೆ ಇಡೀ ಮನೆಯೇ ಜಲಾವೃತವಾಗಿ, ಮನೆಯಲ್ಲಿದ್ದ ನೋಟ್ಸ್, ರೆಕಾರ್ಡ್ ಸೇರಿದಂತೆ ಇತರೆ ಸಲಕರಣೆಗಳು ನೀರಿನಿಂದ ಹಾಳಾಗಿಹೋಗಿದೆ.
ಜಿಲ್ಲೆಯಲ್ಲಿ ಮಳೆಯ ಅಬ್ಬರ ಕಡಿಮೆ ಆಗಿದೆ. ಆದರೆ ಅವಾಂತರ ಮಾತ್ರ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಮಳೆ, ಪ್ರವಾಹ ಕಡಿಮೆ ಅದ ಮೇಲೆ ಸಮಸ್ಯೆಗಳು ಜಿಲ್ಲೆಯಲ್ಲಿ ಆರಂಭವಾಗಿದೆ. ಮಳೆಗೆ ವಿರಾಜಪೇಟೆ ತಾಲೂಕಿನ ಬೇತ್ರಿ ಗ್ರಾಮದ ಬಹುತೇಕ ಮನೆಗಳು ಜಲಾವೃತಗೊಂಡಿತ್ತು. ಸದ್ಯ ಈ ಗ್ರಾಮದಲ್ಲಿ ನೀರು ಇಳಿದಿರುವ ಹಿನ್ನೆಲೆ ಜನರು ತಮ್ಮ ಮನೆಗಳನ್ನು ಸ್ವಚ್ಛಗೊಳಿಸಲು ಗ್ರಾಮಕ್ಕೆ ಮರಳಿದ್ದಾರೆ. ಈ ವೇಳೆ ಮನೆಯಲ್ಲಿಟ್ಟಿದ್ದ ವಸ್ತುಗಳೆಲ್ಲಾ ನೀರಿಗೆ ಹಾಳಾಗಿರುವುದನ್ನು ಕಂಡು ಕಂಗಾಲಾಗಿದ್ದಾರೆ. ಜೊತೆಗೆ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸಕ್ಕೆ ಬಳಸುವ ನೋಟ್ಸ್ ಗಳು ಹಾಗೂ ರೆಕಾರ್ಡ್ ಗಳು ನೀರಿಗೆ ಹಾನಿಯಾಗಿರುವುದನ್ನು ನೋಡಿ ಕಣ್ಣೀರಿಡುತ್ತಿದ್ದಾರೆ.
Advertisement
Advertisement
ಕಷ್ಟಪಟ್ಟು ಬರೆದಿಟ್ಟಿದ್ದ ನೋಟ್ಸ್ ಗಳು, ಪ್ರಾಕ್ಟಿಕಲ್ಸ್‍ಗೆ ಬಳಸುವ ಸಲಕರಣೆಗಳು ನೀರಿನಲ್ಲಿ ಬಿದ್ದು ಉಪಯೋಗಕ್ಕೆ ಬಾರದಂತ ಸ್ಥಿತಿಗೆ ತಲುಪಿದೆ. ಇದೇ ತಿಂಗಳು ನಮಗೆ ಪರೀಕ್ಷೆಯಿದೆ. ನಾವು ಸಾಕಷ್ಟು ತಯಾರಿ ನಡೆಸಿದ್ದೆವು. ಇದೀಗ ನಮ್ಮ ಪರಿಶ್ರಮವೆಲ್ಲ ನೀರಿನಲ್ಲಿ ಕೊಚ್ಚಿಹೋಗಿದೆ ಎಂದು ವಿದ್ಯಾರ್ಥಿಗಳು ಅಳಲನ್ನು ತೋಡಿಕೊಂಡಿದ್ದಾರೆ. ಕೆಲ ದಿನಗಳಿಂದ ಪ್ರವಾಹಕ್ಕೆ ಜನರು ತತ್ತರಿಸಿ ಹೋಗಿದ್ದರು. ಆದರೆ ಈಗ ಪ್ರವಾಹ ತಗ್ಗಿದ್ದರು ಕೂಡ ಜನರು ಸಂಕಷ್ಟದಲ್ಲಿದ್ದಾರೆ. ಕೆಲವರು ಮನೆಗಳನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ನಮ್ಮ ಬದುಕು ಕಟ್ಟಿಕೊಳ್ಳಲು ಸಹಾಯಮಾಡಿ ಎಂದು ಮನವಿ ಮಾಡುತ್ತಿದ್ದಾರೆ.
Advertisement
ಇತ್ತ ಮಡಿಕೇರಿ ತಾಲೂಕಿನ ಕೊಟ್ಟಮುಡಿ ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ಪ್ರವಾಹ ಪರಿಸ್ಥಿತಿ ಎದುರಾಗಿತ್ತು. ಅದರೆ ಈಗ ಪ್ರವಾಹ ಇಳಿದು ಗ್ರಾಮ ಕೆಸರುಮಯವಾಗಿದೆ. ಅಲ್ಲದೆ ಗ್ರಾಮದ ಶಾಲೆಗೆ ನೀರು ನುಗ್ಗಿ ಪೀಠೋಪಕರಣಗಳು ಸೇರಿದಂತೆ ಎಲ್ಲ ನೀರಿನಲ್ಲಿ ಮುಳುಗಿ ಕೆಸರುಮಯವಾಗಿದೆ. ಇಲ್ಲಿನ ವಿದ್ಯಾರ್ಥಿಗಳು ಶಾಲೆಗೆ ಹೋಗಿ ಶಾಲೆಯ ಪರಿಸ್ಥಿತಿ ನೋಡಿಕೊಂಡು, ತಾವು ಬೆಳೆಸಿದ ಹೂ ಗಿಡಗಳ ಸ್ಥಿತಿ ಕಂಡು ಬೇಸರ ಪಟ್ಟಿದ್ದಾರೆ.