ಕೊಪ್ಪಳ: ತಮ್ಮ ಶಾಲೆಯ ಅಚ್ಚುಮೆಚ್ಚಿನ ಶಿಕ್ಷಕಿಯ ವರ್ಗಾವಣೆಯಿಂದ ನೊಂದ ವಿದ್ಯಾರ್ಥಿಗಳು ಶಿಕ್ಷಕರನ್ನು ಶಾಲೆ ಬಿಟ್ಟು ತೆರಳದಂತೆ ಮನವಿ ಮಾಡಿ ಕಣ್ಣೀರ ಧಾರೆ ಹರಿಸಿದ ಅಪರೂಪದ ಘಟನೆ ಗಂಗಾವತಿಯ ವಿರುಪಾಪುರ ಶಾಲೆಯಲ್ಲಿ ನಡೆದಿದೆ.
ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ರಜನಿ ಅವರನ್ನು ಗಂಗಾವತಿ ತಾಲೂಕಿನ ಮರಳಿ ಗ್ರಾಮದ ಸ.ಹಿ.ಪ್ರಾ. ಶಾಲೆ ಗೆ ಕಡ್ಡಾಯ ವರ್ಗಾವಣೆ ಮಾಡಲಾಗಿತ್ತು. ಇಂದು ಶಾಲೆಗೆ ಹಾಜರಾಗಿದ್ದ ವೇಳೆ ತಮ್ಮ ನೆಚ್ಚಿನ ಶಿಕ್ಷಕಿಯ ವರ್ಗಾವಣೆ ಸಂಗತಿ ವಿದ್ಯಾರ್ಥಿಗಳಿಗೆ ತಿಳಿದು ಬಂದಿದ್ದು, ಇದರಿಂದ ನೊಂದ ವಿದ್ಯಾರ್ಥಿಗಳು ಶಿಕ್ಷಕರನ್ನು ಅಪ್ಪಿಕೊಂಡು ಶಾಲೆ ಬಿಟ್ಟು ತೆರಳದಂತೆ ಮನವಿ ಮಾಡಿದರು.
ಕಳೆದ 10 ವರ್ಷಗಳಿಂದ ಶಾಲೆಯಲ್ಲಿ ವಿಜ್ಞಾನ ಶಿಕ್ಷಕಿಯಾಗಿ ರಜನಿ ಅವರು ಸೇವೆ ಸಲ್ಲಿಸುತ್ತಿದ್ದರು. ರಜನಿ ಅವರು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿ ವಿದ್ಯಾರ್ಥಿಗಳ ಪೋಷಕರ ಮನಸ್ಸನ್ನು ಗೆದ್ದಿದ್ದರು. ಶಿಕ್ಷಕಿಯ ವರ್ಗಾವಣೆಯಿಂದ ಪೋಷಕರು ಬೇಸರಗೊಂಡಿದ್ದರು. ಶಿಕ್ಷಕಿ ರಜನಿ ಅವರು ಮಕ್ಕಳೊಂದಿಗೆ ಹೊಂದಿದ್ದ ಬಾಂಧವ್ಯ ವಿದ್ಯಾರ್ಥಿಗಳು ಕಣ್ಣೀರಿಡುತ್ತಿದ್ದ ವೇಳೆ ಕಂಡು ಬಂತು. ತಮ್ಮ ವರ್ಗಾವಣೆ ಕಡ್ಡಾಯವಾಗಿರುವುದರಿಂದ ಇದನ್ನು ವಿದ್ಯಾರ್ಥಿಗಳಿಗೆ ಆರ್ಥವಾಗುವಂತೆ ಹೇಳಲಾಗದೆ ಶಿಕ್ಷಕರು ಸಮಸ್ಯೆ ಎದುರಿಸಿದ್ದರು. ಅಲ್ಲದೇ ತಮ್ಮನ್ನು ಬಿಗಿದಪ್ಪಿ ಅಳುತ್ತಿದ್ದ ವಿದ್ಯಾರ್ಥಿಗಳನ್ನು ಕಂಡ ಶಿಕ್ಷಕರು ಕೂಡ ಕಣ್ಣೀರಿಟ್ಟಿದ್ದು ಕಂಡು ಬಂತು.
ಈ ಹಿಂದೆ ಚಿಕ್ಕಮಗಳೂರಿನ ಕೈಮರದಲ್ಲಿ ಇಂತಹದೇ ಘಟನೆ ನಡೆದಿತ್ತು. ಕೈಮರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾದ ದುರ್ಗೇಶ್ ಅವರು ಸುಮಾರು 12 ವರ್ಷಗಳಿಂದ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆಯೂ ಶಿಕ್ಷಕರ ವರ್ಗಾವಣೆಯಿಂದ ನೊಂದ ವಿದ್ಯಾರ್ಥಿಗಳು ಶಿಕ್ಷಕರನ್ನು ತಬ್ಬಿ ಕಣ್ಣೀರಿಟ್ಟಿದ್ದರು. ವಿಡಿಯೋ ಇಲ್ಲಿದೆ….