ಚಿಕ್ಕಮಗಳೂರು: ಸರ್… ಪ್ಲೀಸ್ ಹೋಗಬೇಡಿ, ನಮ್ಮನ್ನು ಬಿಟ್ಟು ಹೋಗಬೇಡಿ. ಪ್ಲೀಸ್ ಸರ್. ಬಿಇಓಗೆ ಫೋನ್ ಮಾಡಿ ನಾವೇ ಮಾತಾಡುತ್ತೇವೆ. ನೀವು ಮಾತ್ರ ಹೋಗುವುದೇ ಬೇಡ ಸರ್. ಹೀಗೆ ಶಿಕ್ಷಕರಿಗಾಗಿ ವಿದ್ಯಾರ್ಥಿಗಳು ಕಣ್ಣೀರ ಧಾರೆಯನ್ನೇ ಹರಿಸಿರುವ ಅಪರೂಪದ ಘಟನೆ ಚಿಕ್ಕಮಗಳೂರಿನ ಕೈಮರದಲ್ಲಿ ನಡೆದಿದೆ.
ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದುರ್ಗೇಶ್ ಅವರು ಸುಮಾರು 12 ವರ್ಷಗಳಿಂದ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪಾಠಕ್ಕೆ ಮಾತ್ರ ಸೀಮಿತವಾಗದ ಇವರು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೂ ಶ್ರಮಿಸಿದ್ದಾರೆ. ಇದರಿಂದ ಇವರು ಮಕ್ಕಳ ನೆಚ್ಚಿನ ಶಿಕ್ಷಕರಾಗಿದ್ದಾರೆ. ಆದರೆ ಶೈಕ್ಷಣಿಕ ವರ್ಷದಿಂದ ದುರ್ಗೇಶ್ ವರ್ಗಾವಣೆಯಾಗಿದ್ದಾರೆ.
ಮಕ್ಕಳಿಗೆ ಈ ವಿಷಯ ಗೊತ್ತಾದರೆ ಬೇಜಾರಾಗುತ್ತಾರೆಂದು ಸಹೋದ್ಯೋಗಿಗಳಿಗೆ ಹೇಳಲು ಬಂದಿದ್ದರು. ನಂತರ ಮೆಲ್ಲಗೆ ಬಂದು ಬೈಕ್ ಹತ್ತುತ್ತಿದ್ದರು. ವಿಚಾರ ತಿಳಿದು ಓಡಿ ಬಂದ ಮಕ್ಕಳು ನೆಚ್ಚಿನ ಶಿಕ್ಷಕರನ್ನ ಬಿಗಿದಪ್ಪಿ ಬಿಕ್ಕಿ-ಬಿಕ್ಕಿ ಅತ್ತಿದ್ದಾರೆ. ಪ್ಲೀಸ್ ಸರ್ ಹೋಗಬೇಡಿ, ಬಿಇಓ ಹತ್ರ ನಾವೇ ಮಾತಾಡುತ್ತೇವೆ ಸರ್.. ನಮ್ಮನ್ನ ಬಿಟ್ಟು ಹೋಗಬೇಡಿ ಎಂದು ಪರಿಪರಿಯಾಗಿ ಬೇಡಿಕೊಂಡಿದ್ದಾರೆ. ವಿದ್ಯಾರ್ಥಿಗಳು ಪ್ರೀತಿ ಕಂಡು ಶಿಕ್ಷಕ ದುರ್ಗೇಶ್ ಅವರು ಕೂಡ ಅತ್ತಿದ್ದಾರೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಬಾಂಧವ್ಯ ಹೇಗಿರಬೇಕೆಂದು ಈ ಭಾವನಾತ್ಮಕ ದೃಶ್ಯ ಸಾರಿ ಹೇಳಿದೆ.
ಶಿಕ್ಷಕರ ಕೆಲಸವೆಂದರೆ ತಿಂಗಳಾಂತ್ಯಕ್ಕೆ ಸಂಬಳಕ್ಕೆ ಸೀಮಿತವಾಗಿತ್ತೆ ಎಂಬ ಮಾತಿದೆ. ಬಹುತೇಕ ಅಂತವರ ಮಧ್ಯೆ ದುರ್ಗೇಶ್ ವಿಭಿನ್ನವಾಗಿ ನಿಂತಿದ್ದಾರೆ. ಇಂತಹ ಬಾಂಧವ್ಯ ಎಲ್ಲಾ ಶಿಕ್ಷಕರು-ವಿದ್ಯಾರ್ಥಿಗಳ ನಡುವೆ ಉಂಟಾದರೆ ಮಕ್ಕಳು ಭವ್ಯ ಭಾರತದ ಪ್ರಜೆಗಳಾಗಿ ರೂಪುಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಗ್ರಾಮದ ಜನರು ಮಾತನಾಡಿಕೊಂಡಿದ್ದಾರೆ.