ಚಿಕ್ಕಬಳ್ಳಾಪುರ: ನಗರದ ಮಹಾತ್ಮ ಗಾಂಧಿ ರಸ್ತೆಯಲ್ಲಿ ಬಿದ್ದಿದ್ದ ಗುಂಡಿಗಳಿಗೆ ಕಾಂಕ್ರೀಟ್ ಹಾಕಿ, ವಾಹನ ಸವಾರರ ಪ್ರಾಣ ಉಳಿಸುವ ಮೂಲಕ ರಾಷ್ಟ್ರಪಿತ ಗಾಂಧೀಜಿಯವರ 150ನೇ ಜಯಂತೋತ್ಸವವನ್ನು ವಿದ್ಯಾರ್ಥಿಗಳು ಅರ್ಥಪೂರ್ಣವಾಗಿ ಆಚರಿಸಿದರು.
ಚಿಕ್ಕಬಳ್ಳಾಪುರ ನಗರದ ಎಂಜಿ ರಸ್ತೆಯ ಪ್ರಸಿಡೆನ್ಸಿ ಖಾಸಗಿ ಶಾಲೆಯ ವಿದ್ಯಾರ್ಥಿಗಳು ಈ ರೀತಿ ವಿನೂತನವಾಗಿ ಗಾಂಧೀಜಿಯನ್ನು ಸ್ಮರಿಸಿದ್ದಾರೆ. ಈ ರೀತಿಯ ವಿಭಿನ್ನ ಸಮಾಜಮುಖಿ ಕಾಯಕ ಮಾಡುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನಗರದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 224ರ ಮಹಾತ್ಮ ಗಾಂಧಿ ರಸ್ತೆಯಲ್ಲಿ(ಎಂಜಿ ರಸ್ತೆ) ಬಿದ್ದಿದ್ದ ಬೃಹತ್ ಗಾತ್ರದ ಗುಂಡಿಗಳಿಗೆ ಜಲ್ಲಿ, ಸಿಮೆಂಟ್ ಕಾಂಕ್ರೀಟ್ ಹಾಕಿ ಮುಚ್ಚುವ ಮೂಲಕ ಗುಂಡಿಗಳಿಗೆ ವಿದ್ಯಾರ್ಥಿಗಳು ಮುಕ್ತಿ ಕಲ್ಪಿಸಿ, ವಾಹನ ಸವಾರರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.
Advertisement
Advertisement
ಎಂಜಿ ರಸ್ತೆಯ ದರ್ಗಾ ಮುಂಭಾಗದಲ್ಲಿ ಬೃಹತ್ ಗಾತ್ರದ ಗುಂಡಿ ಬಿದ್ದು ಮಳೆ ನೀರು ಸಂಗ್ರಹಗೊಂಡಿತ್ತು. ಅದೆಷ್ಟೋ ಮಂದಿ ವಾಹನ ಸವಾರರು ಅದೇ ಗುಂಡಿಯಲ್ಲಿ ಬಿದ್ದು ಪೆಟ್ಟು ಮಾಡಿಕೊಂಡು ಪರದಾಡಿದ ಉದಹಾರಣೆಗಳಿವೆ. ಅಲ್ಲದೆ ಇದೇ ರಸ್ತೆಯಲ್ಲಿ ಪ್ರತಿನಿತ್ಯ ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿಗಳು ಸಹ ಇದರಿಂದ ಸಾಕಷ್ಟು ಪರದಾಡುತ್ತಿದ್ದರು. ಆದ್ದರಿಂದ ಗಾಂಧಿ ಜಯಂತಿ ಅಂಗವಾಗಿ ತಮ್ಮ ಶಿಕ್ಷಕರ ಸಹಾಯದಿಂದ ಎಂಜಿ ರಸ್ತೆಯುದ್ದಕ್ಕೂ ಇದ್ದ ಬೃಹತ್ ಗಾತ್ರದ ಗುಂಡಿಗಳನ್ನು ವಿದ್ಯಾರ್ಥಿಗಳು ಮುಚ್ಚುವ ಕೆಲಸವನ್ನ ಮಾಡಿದ್ದಾರೆ.