ರಾಯಚೂರು: ಹಳೆಯದಾದ ಶಾಲಾ ವಾಹನದಲ್ಲಿ ಮಕ್ಕಳನ್ನು ಶಾಲೆಗೆ ಕರೆದೊಯ್ಯುವಾಗ ಬಸ್ ಕೆಟ್ಟಿದ್ದಕ್ಕೆ ವಿದ್ಯಾರ್ಥಿಗಳಿಂದಲೇ ಬಸ್ ಅನ್ನು ತಳ್ಳಿಸಿರುವ ಘಟನೆ ನಗರದ ಹೊರ ವಲಯದ ಆಶಾಪುರ ರಸ್ತೆಯಲ್ಲಿ ನಡೆದಿದೆ.
ಆಶಾಪುರದ ಖಾಸಗಿ ಪಬ್ಲಿಕ್ ಶಾಲೆಗೆ ಗೋನವಾರ ಗ್ರಾಮ ಸೇರಿ ಕೆಲ ಹಳ್ಳಿಗಳಿಂದ ಮಕ್ಕಳನ್ನು ಕರೆ ತರುವ ಸ್ಕೂಲ್ ಬಸ್ ತುಂಬಾ ಹಳೆಯದಾಗಿದ್ದು ಇದರಲ್ಲಿ 20ಕ್ಕೂ ಹೆಚ್ಚು ಮಕ್ಕಳನ್ನ ಕರೆದುಕೊಂಡು ಹೋಗಲಾಗುತ್ತಿತ್ತು. ಈ ವೇಳೆ ಬಸ್ ಕೆಟ್ಟು ನಿಂತಿದ್ದರಿಂದ ಚಿಕ್ಕಚಿಕ್ಕ ಮಕ್ಕಳಿಂದಲೇ ಬಸ್ ಅನ್ನು ತಳ್ಳಿಸಲಾಗಿದೆ. ಮಕ್ಕಳು ಬಸ್ ತಳ್ಳುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಶಾಲೆಯ ವಿರುದ್ಧ ಸಾರ್ವಜನಿಕರು ಆಕ್ರೊಶ ವ್ಯಕ್ತಪಡಿಸಿದ್ದಾರೆ.
Advertisement
Advertisement
ಶಾಲಾ ಬಸ್ ನಿಯಮಾವಳಿ ಪಾಲಿಸದ ಖಾಸಗಿ ಪಬ್ಲಿಕ್ ಶಾಲೆ ವಿರುದ್ಧ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಕೆಲ ದಿನಗಳ ಹಿಂದೆ ಮಾನ್ವಿಯ ಖಾಸಗಿ ಶಾಲೆಯೊಂದರ ವಾಹನದ ಫುಟ್ ಬೋರ್ಡ್ ಮೇಲೆ ನಿಂತು ವಿದ್ಯಾರ್ಥಿ ಪ್ರಯಾಣಿಸಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿತ್ತು. ಶಿಕ್ಷಣ ಇಲಾಖೆ, ಆರ್‌ಟಿಓ, ಪೊಲೀಸರು ಶಾಲೆಯ ವಿರುದ್ಧ ಕ್ರಮಕ್ಕೆ ಮುಂದಾಗಿದ್ದರು. ವಾಹನ ಚಾಲಕನನ್ನ ಕೆಲಸದಿಂದ ತೆಗೆದುಹಾಕಲಾಗಿತ್ತು.