ಚಿಕ್ಕಬಳ್ಳಾಪುರ: ಕೇತುಗ್ರಸ್ಥ ಸೂರ್ಯಗ್ರಹಣವನ್ನ ಚಿಕ್ಕಬಳ್ಳಾಪುರ ನಗರದ ಬಿಜಿಎಸ್ ಅಗಲಗುರ್ಕಿ ಶಾಲೆಯಲ್ಲಿ ಸೌರ ಕನ್ನಡಕಗಳ ಮೂಲಕ ವಿದ್ಯಾರ್ಥಿಗಳು, ಶಿಕ್ಷಕರು ಕಣ್ತುಂಬಿಕೊಂಡಿದ್ದಾರೆ.
ಸೂರ್ಯ ಗ್ರಹಣದ ಹಿನ್ನಲೆ ಬಿಜಿಎಸ್ ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಸೌರ ಕನ್ನಡಕಗಳನ್ನ ಒದಗಿಸುವ ಮೂಲಕ ಸೂರ್ಯ ಗ್ರಹಣ ಕಣ್ತುಂಬಿಕೊಳ್ಳುವ ಅವಕಾಶ ಮಾಡಿತ್ತು. ಶಾಲಾ ಆವರಣದ ಮುಂಭಾಗದಲ್ಲಿ ಜಮಾಯಿಸಿದ ನೂರಾರು ವಿದ್ಯಾರ್ಥಿಗಳು ಸೌರ ಕನ್ನಡಕಗಳನ್ನ ಬಳಸಿ ಅಪರೂಪದ ಸೂರ್ಯ ಗ್ರಹಣ ವೀಕ್ಷಣೆ ಮಾಡಿದರು. ಸೂರ್ಯ ಗ್ರಹಣ ದರ್ಶನ ಪಡೆದ ಶಿಕ್ಷಕರು, ವಿದ್ಯಾರ್ಥಿಗಳು ಸಾಕಷ್ಟು ಸಂತಸಗೊಂಡರು.
Advertisement
Advertisement
ಮೋಡ ಮುಸುಕಿದ ವಾತಾವಾರಣದ ನಡುವೆಯೂ ಕೇತುಗ್ರಸ್ಥ ಸೂರ್ಯ ಗ್ರಹಣ ಚಿಕ್ಕಬಳ್ಳಾಪುರದಲ್ಲಿ ಗೋಚರವಾಗಿದೆ. ಗ್ರಹಣ ಸ್ಪರ್ಶಕಾಲದಲ್ಲಿ ಮೋಡ ಮುಸುಕಿದ ವಾತಾವರಣವಿದ್ದ ಕಾರಣ ಚಿಕ್ಕಬಳ್ಳಾಪುರ ಜಿಲ್ಲೆಯ ಜನರಿಗೆ ಗ್ರಹಣ ದರ್ಶನ ಭಾಗ್ಯ ಸಿಗಲಿಲ್ಲ. ಆದರೆ ಗ್ರಹಣ ಮಧ್ಯೆ ಕಾಲ ಆಗಮಿಸುತ್ತಿದ್ದಂತೆ ಮೋಡಗಳು ಮರೆಯಾದ ಕಾರಣ ಜನರಿಗೆ ಸೂರ್ಯ ಗ್ರಹಣ ದರ್ಶನ ಭಾಗ್ಯ ಸಿಕ್ಕಿತು.
Advertisement
Advertisement
ಆಗೊಮ್ಮೆ ಈಗೊಮ್ಮೆ ಎಂದು ಮೋಡಗಳು ಮರೆಯಾಗುತ್ತಿದ್ದಂತೆ ಜನರಿಗೆ ಸೂರ್ಯ ಗ್ರಹಣ ಭಾಗ್ಯ ಕಣ್ತುಂಬಿಕೊಳ್ಳುವ ಅವಕಾಶ ಸಿಗುತಿತ್ತು. ಮೋಡಗಳ ಆಟ ನೋಡುಗರಿಗೆ ಇರುಸು ಮುರುಸಾದರೂ ಆಗಾಗ ಮೋಡಗಳ ಮರೆಯಲ್ಲಿ ನಾನು ಇರುವೆ ಎಂದು ಬಂದು ಹೋಗುತ್ತಿದ್ದ ಸೂರ್ಯಗ್ರಹಣದ ಭಾಗ್ಯ ನೋಡುಗರ ಮನ ಸಂತಸಗೊಳಿಸಿತ್ತು. ಹಲವು ವರ್ಷಗಳ ನಂತರ ಸೂರ್ಯಗ್ರಹಣ ಕಂಡ ಜಿಲ್ಲೆಯ ಜನರಿಗೆ ಕೊನೆಗೂ ಮೋಡಗಳ ಮರೆಯಿಂದ ಸೂರ್ಯ ಗ್ರಹಣದ ದರ್ಶನ ಭಾಗ್ಯ ಸಿಕ್ಕಿದೆ.