-ಫೋನ್‌ನಲ್ಲೇ ಅಧಿಕಾರಿಗೆ ಫುಲ್ ಕ್ಲಾಸ್
ರಾಯಚೂರು: ಶಿಕ್ಷಕರ ಕೊರತೆ ಹಿನ್ನೆಲೆ ಕರೆ ಮಾಡಿ ಶಾಸಕರನ್ನು ಶಾಲೆಗೆ ಕರೆಸಿ, ಅವರೆದುರೇ ಕ್ಷೇತ್ರ ಶಿಕ್ಷಣಾಧಿಕಾರಿಗೆ ಕರೆ ಮಾಡಿ ವಿದ್ಯಾರ್ಥಿನಿ ಕ್ಲಾಸ್ ತೆಗೆದುಕೊಂಡ ಘಟನೆ ರಾಯಚೂರಿನ ಸಿರವಾರ ತಾಲೂಕಿನ ಮಲ್ಲಟ ಗ್ರಾಮದಲ್ಲಿ ನಡೆದಿದೆ.
ಮಲ್ಲಟ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಖಾಯಂ ಶಿಕ್ಷಕರಿಲ್ಲದೆ ಕಾಟಾಚಾರಕ್ಕೆ ಅತಿಥಿ ಶಿಕ್ಷಕರನ್ನ ನೇಮಿಸಿ ಶಿಕ್ಷಣ ಇಲಾಖೆ ಕೈ ತೊಳೆದುಕೊಂಡಿದೆ. ಇದರಿಂದ ಪಠ್ಯಕ್ರಮ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಶಿಕ್ಷಣಾ ಇಲಾಖೆಯ ಈ ನಿರ್ಲಕ್ಷ್ಯ ಕಂಡು ಬೇಸತ್ತ ವಿದ್ಯಾರ್ಥಿನಿ ಮೋನಿಕಾ ಶಿಕ್ಷಕರ ಕೊರತೆ ಬಗ್ಗೆ ನೇರವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗೆ ಕರೆ ಮಾಡಿ ತಿಳಿಸಿದ್ದಾಳೆ. ಫೋನ್‌ನಲ್ಲೇ ಅಧಿಕಾರಿಯ ಚಳಿ ಬಿಡಿಸಿದ್ದಾಳೆ. ಒಂದು ದಿನದಲ್ಲಿ ಶಾಲೆಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸದಿದ್ದರೆ ಶಾಲೆ ಬಂದ್ ಮಾಡಿ, ಹೋರಾಟ ಮಾಡೋದಾಗಿ ಬಾಲಕಿ ಎಚ್ಚರಿಕೆ ಕೊಟ್ಟಿದ್ದಾಳೆ. ಇದನ್ನೂ ಓದಿ:ವಿದ್ಯಾರ್ಥಿನಿಗೆ ಕಾಮಪಾಠ-ಉಪನ್ಯಾಸಕನಿಗೆ ಬಿತ್ತು ಧರ್ಮದೇಟು
ಅಷ್ಟೇ ಅಲ್ಲದೆ ಮಾನವಿ ಶಾಸಕ ರಾಜಾ ವೆಂಕಟಪ್ಪ ನಾಯಕ್ ಅವರಿಗೆ ಕರೆ ಮಾಡಿ ಶಾಲೆಗೆ ಕರೆಸಿಕೊಂಡ ವಿದ್ಯಾರ್ಥಿನಿ ಅವರನ್ನೂ ತರಾಟೆಗೆ ತಗೆದುಕೊಂಡಿದ್ದಾಳೆ. ಶಾಸಕರ ಎದುರೇ ಶಿಕ್ಷಣಾಧಿಕಾರಿಗೆ ಕರೆ ಮಾಡಿ ಎಚ್ಚರಿಸಿದ್ದಾಳೆ. ವಿದ್ಯಾರ್ಥಿನಿ ಕರೆ ಮಾಡಿ ಶಿಕ್ಷಣಾಧಿಕಾರಿಗೆ ಸಖತ್ ಕ್ಲಾಸ್ ತೆಗೆದುಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಾಲಕಿ ಧೈರ್ಯಕ್ಕೆ ನೆಟ್ಟಿಗರು ಭೇಷ್ ಎಂದಿದ್ದಾರೆ.