ತುಮಕೂರು: ತಿಪಟೂರು ನಗರದ ಶಿವಕುಮಾರ ಸ್ವಾಮೀಜಿ ವೃತ್ತದ ಬಳಿ ರೈಲಿಗೆ ಸಿಲುಕಿ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದು, ಆತ್ಮಹತ್ಯೆಯ ಶಂಕೆ ವ್ಯಕ್ತವಾಗಿದೆ.
ಆರ್. ಮಧು ಮೃತಪಟ್ಟ ವಿದ್ಯಾರ್ಥಿ. ಬೆಂಗಳೂರು ಮೂಲದವನಾಗಿರುವ ಮಧು ತಿಪಟೂರಿನ ಕಲ್ಪತರು ಕಾಲೇಜಿನ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. ಸೋಮವಾರ ಸಂಜೆ ಜೈಪುರ ಎಕ್ಸ್ ಪ್ರೆಸ್ ರೈಲು ಹೋಗುತ್ತಿದ್ದಾಗ ಈತ ಅಡ್ಡ ಬಂದು ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಇದು ಅಪಘಾತವಲ್ಲ. ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದಲೇ ಮಧು ರೈಲಿಗೆ ಅಡ್ಡ ಬಂದಿದ್ದಾನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರೇಮ ವೈಫಲ್ಯದಿಂದ ಮಧು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಜನರು ಮಾತನಾಡಿಕೊಳ್ಳುತ್ತಿದ್ದರು.
ಸದ್ಯ ಅಪಘಾತದ ರಭಸಕ್ಕೆ ಮಧು ರುಂಡ-ಮುಂಡ ಬೇರ್ಪಟ್ಟಿದೆ. ಈ ಬಗ್ಗೆ ಅರಸಿಕೆರೆ ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.