– ಲೊಕ್ಯಾಂಟೋ ಆ್ಯಪ್ ಬಳಸುತ್ತಿದ್ದ ಪುರುಷರೇ ಟಾರ್ಗೆಟ್
– ಸೆಕ್ಸಿ ಚಾಟ್ಸ್, ಫೋನ್ ಕಾಲ್ ಮಾಡಿ ಹಣ ಪೀಕಿದ
ಚೆನ್ನೈ: ಮಹಿಳೆಯ ಧ್ವನಿಯಲ್ಲಿ ಮತನಾಡಿ ಬರೋಬ್ಬರಿ 350 ಮಂದಿ ಪುರುಷರಿಗೆ ಪಂಗನಾಮ ಹಾಕಿ ಹಣ ಪೀಕುತ್ತಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾನೆ.
ಈ ಬಗ್ಗೆ ಕೇಳಿದರೆ ಹೀಗೂ ಮೋಸ ಮಾಡುತ್ತಾರಾ ಎಂದು ಅಚ್ಚರಿ ಆಗುತ್ತೆ. ಆದರೂ ಇದು ಸತ್ಯ. ತಮಿಳು ನಾಡಿನ ತಿರುನೆಲ್ವೇಲಿ ನಿವಾಸಿ ವೆಲ್ಲಾಳ್ ರಾಜ್‍ಕುಮಾರ್ ರೇಗನ್(27) ಬಂಧಿತ ಆರೋಪಿ. ಈತ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಮಹಿಳೆಯ ಧ್ವನಿಯಲ್ಲಿ ಮಾತನಾಡುವುದನ್ನ ರೂಢಿ ಮಾಡಿಕೊಂಡಿದ್ದನು. ಇದನ್ನೇ ಬಂಡವಾಳವಾಗಿ ಮಾಡಿಕೊಂಡು ಪುರುಷರಿಗೆ ಸೆಕ್ಸ್, ಲವ್ ಅಂತ ಯಾಮಾರಿಸಿ ಅವರಿಂದ ಹಣ ಪೀಕುತ್ತಿದ್ದನು. ಕಳೆದ 3 ವರ್ಷದಿಂದ ಹೀಗೆ ಬರೋಬ್ಬರಿ 350 ಮಂದಿ ಪುರುಷರಿಗೆ ರೇಗನ್ ವಂಚಿಸಿದ್ದಾನೆ.
Advertisement
Advertisement
ವಂಚಿಸಿದ್ದು ಹೇಗೆ?
ಸೆಕ್ಸ್ ಸರ್ವಿಸ್ ನೀಡುವ ಲೊಕ್ಯಾಂಟೋ ಎಂಬ ಆ್ಯಪ್ ಬಳಸುವ ಪುರುಷರನ್ನೇ ಈ ಖತರ್ನಾಕ್ ವಂಚಕ ಟಾರ್ಗೆಟ್ ಮಾಡುತ್ತಿದ್ದನು. ಈ ಆ್ಯಪ್ ಮೂಲಕ ಪುರುಷರ ಪರಿಚಯ ಮಾಡಿಕೊಂಡು, ಅವರೊಂದಿಗೆ ಸೆಕ್ಸ್ ಚಾಟ್ಸ್ ಮಾಡುತ್ತಾ, ಮಹಿಳೆಯ ಧ್ವನಿಯಲ್ಲಿ ಫೋನ್‍ನಲ್ಲಿ ಮಾತನಾಡಿಕೊಂಡು ಮೊದಲು ವಿಶ್ವಾಸಗಳಿಸುತ್ತಿದ್ದನು. ಬಳಿಕ ಆನ್‍ಲೈನ್ ಮೂಲಕ ಹಣ ಕಳುಹಿಸಿ ಅಶೀಲ ಫೋಟೋ, ವಿಡಿಯೋಗಳನ್ನು ಕಳುಹಿಸುತ್ತೇನೆ ಎಂದು ಹೇಳುತ್ತಿದ್ದನು.
Advertisement
Advertisement
ತನ್ನ ಮಹಿಳೆಯ ಧ್ವನಿಗೆ, ಚಾಟ್ಸ್ ಗಳಿಗೆ ಯಾಮಾರಿದ ಪುರುಷರಿಂದ ಸಾವಿರಾರು ರೂಪಾಯಿ ಹಣ ಪಡೆದು ರೇಗನ್ ವಂಚಿಸುತ್ತಿದ್ದನು. ಅಷ್ಟೇ ಅಲ್ಲದೆ ಹಣ ನೀಡದಿದ್ದರೆ ಲೈಂಗಿಕ ಕಿರುಕುಳದ ದೂರು ನೀಡುತ್ತೇನೆ ಎಂದು ಹೆದರಿಸುತ್ತಿದ್ದನು. ಹಾಗೆಯೇ ಲೈಂಗಿಕ ಕಿರುಕುಳದ ದೂರು ನೀಡಿರುವ ರೀತಿ ಪೊಲೀಸರು ಮೆಸೇಜ್ ಕಳಿಸುವ ಹಾಗೆ ಮೆಸೇಜ್‍ಗಳನ್ನು ಕಳುಹಿಸಿ ಬ್ಲಾಕ್‍ಮೇಲ್ ಮಾಡುತ್ತಿದ್ದನು. ಹೀಗೆ 2017ರಿಂದ 350 ಮಂದಿ ಪುರುಷರಿಗೆ ವಿದ್ಯಾರ್ಥಿ ಚಳ್ಳೆಹಣ್ಣು ತಿನ್ನಿಸಿ ಹಣ ಪಡೆದುಕೊಂಡಿದ್ದಾನೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಫೆ. 16ರಂದು ಉದಯ್‍ರಾಜ್ ಎಂಬಾತ ಆನ್‍ಲೈನ್‍ನಲ್ಲಿ ಕೆಲಸದ ಮಾಹಿತಿ ನೀಡುವ ಜಾಬ್ ಸೈಟ್‍ಗಳನ್ನು ಸರ್ಚ್ ಮಾಡುತ್ತಿದ್ದನು. ಈ ವೇಳೆ ಲೊಕ್ಯಾಂಟೋ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ ಎಂಬ ಆ್ಯಡ್‍ಗಳು ಬರುತ್ತಿತ್ತು. ಏನಪ್ಪಾ ಇದು ನೋಡೋಣ ಎಂದು ಉದಯ್‍ರಾಜ್ ಆ್ಯಪ್ ಡೌನ್‍ಲೋಡ್ ಮಾಡಿದಾಗ ಅದೊಂದು ಸೆಕ್ಸ್ ಸರ್ವಿಸ್ ಆ್ಯಪ್ ಎಂದು ಯುವಕನಿಗೆ ತಿಳಿಯಿತು.
ಆ್ಯಪ್ ಡೌನ್‍ಲೋಡ್ ಆದ ಕೆಲವೇ ನಿಮಿಷದಲ್ಲಿ ರೇಗನ್‍ನಿಂದ ಯುವಕನಿಗೆ ಮೆಸೆಜ್ ಬಂದಿತ್ತು. ಕೆಲ ಕಾಲ ಇಬ್ಬರು ಚಾಟ್, ಕಾಲ್ ಮಾಡಿದ ಬಳಿಕ 100 ರೂಪಾಯಿ ಕಳುಹಿಸಿದರೆ ಅಶೀಲ ಫೋಟೋ ಕಳಿಸುತ್ತೇನೆ ಎಂದು ಹಣ ಪಡೆದು ಯುವತಿಯರ ಫೋಟೋಗಳನ್ನು ರೇಗನ್ ಉದಯ್‍ರಾಜ್‍ಗೆ ಕಳುಹಿಸಿದನು. ಆ ನಂತರ 1,500 ರೂಪಾಯಿ ಹಾಕು ವಿಡಿಯೋ ಕಳುಹಿಸುತ್ತೇನೆ ಎಂದಾಗ ಎಚ್ಚೆತ್ತ ಉದಯ್ ಹಣ ಕಳುಹಿಸದೇ ನಂಬರ್ ಬ್ಲಾಕ್ ಮಾಡಿದ್ದನು.
ನಂಬರ್ ಬ್ಲಾಕ್ ಮಾಡಿದ ಕೆಲ ನಿಮಿಷದ ಬಳಿಕ ನಿನ್ನ ವಿರುದ್ಧ ಲೈಂಗಿಕ ಕಿರುಕುಳದ ಕೇಸ್ ದಾಖಲಾಗಿದೆ ಎಂಬ ಮೆಸೇಜ್ ಉದಯ್ ಫೋನ್‍ಗೆ ಬಂತು. ನಂತರ ಬೇರೆ ಬೇರೆ ನಂಬರ್ ಗಳಿಂದ ಹಣ ಕೊಡು ಇಲ್ಲವಾದರೇ ನಿನ್ನ ವಿರುದ್ಧ ಪೊಲೀಸರಿಗೆ ದೂರು ಕೊಡುತ್ತೇವೆ ಎಂದು ಮಹಿಳೆ ಮಾತನಾಡುವ ಹಾಗೆ ಕರೆಗಳು ಬಂತು. ಇದರಿಂದ ಹೆದರಿದ ಉದಯ್ ತಕ್ಷಣ ಪೊಲೀಸರ ಮೊರೆ ಹೋಗಿ, ಅವರ ಬಳಿ ನಡೆದ ಘಟನೆ ಬಗ್ಗೆ ವಿವರಿಸಿ, ಪ್ರಕರಣ ದಾಖಲಿಸಿದನು.
ಈ ಕುರಿತು ತನಿಖೆ ಕೈಗೊಂಡ ಪೊಲೀಸರು ವಂಚಕನ ಜಾಡು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದು, ಭಾನುವಾರ ಆರೋಪಿ ರೇಗನ್‍ನನ್ನು ಬಂಧಿಸಿದ್ದಾರೆ. ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಆತ ಎಷ್ಟು ಖತರ್ನಾಕ್ ಅಂತ ಸ್ವತಃ ತಾನೇ ಬಾಯಿಬಿಟ್ಟಿದ್ದಾನೆ. ನಾನು 2017ರಿಂದ ಹೀಗೆ ವಂಚನೆ ಮಾಡಿಕೊಂಡು ಬಂದಿದ್ದೇನೆ. ಈವರೆಗೆ ಸುಮಾರು 350 ಮಂದಿ ಪುರುಷರಿಗೆ ಮಹಿಳೆ ಧ್ವನಿಯಲ್ಲಿ ಮಾತನಾಡಿ ಯಾಮಾರಿಸಿ ಅವರಿಂದ ಹಣ ಪಡೆದಿದ್ದೇನೆ. ಹಾಗೆಯೇ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ 150ಕ್ಕೂ ಹೆಚ್ಚು ಸುಳ್ಳು ಲೈಗಿಂಕ ಕಿರುಕುಳದ ದೂರು ನೀಡಿರುವ ಬಗ್ಗೆ ಕೂಡ ಹೇಳಿಕೊಂಡು, ತನ್ನ ತಪ್ಪೊಪ್ಪಿಕೊಂಡಿದ್ದಾನೆ.