– 30 ದಿನದ ಒಳಗಡೆ 2ನೇ ಕೇಸ್
– ಕೇರಳದ ವಯನಾಡ್ ಸುಲ್ತಾನ್‍ಬತ್ತೇರಿಯಲ್ಲಿ ಘಟನೆ
ತಿರುವನಂತಪುರ: ಕೆಲವೇ ದಿನಗಳ ಹಿಂದೆ ಶಾಲೆಯ ಕೊಠಡಿಯಲ್ಲೇ ವಿದ್ಯಾರ್ಥಿನಿಗೆ ಹಾವು ಕಚ್ಚಿ ಸಾವನ್ನಪ್ಪಿದ್ದ ಪ್ರಕರಣ ಮಾಸುವ ಮುನ್ನವೇ ಅದೇ ರೀತಿಯ ಇನ್ನೊಂದು ಪ್ರಕರಣ ನಡೆದಿದೆ.
ಕೇರಳದ ವಯನಾಡ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗೆ ಹಾವು ಕಚ್ಚಿದೆ. ಶಾಲಾ ಆವರಣದಲ್ಲಿ ವಿದ್ಯಾರ್ಥಿಗೆ ಹಾವು ಕಚ್ಚಿರುವುದು ನಿಜ. ಆದರೆ ತರಗತಿ ಕೊಠಡಿಯಲ್ಲಿ ಹಾವು ಕಚ್ಚಿಲ್ಲ ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ.
ಸಂತ್ರಸ್ತ ವಿದ್ಯಾರ್ಥಿಯನ್ನು 2ನೇ ತರಗತಿಯ ಮೊಹಮ್ಮದ್ ರೆಹಾನ್ ಎಂದು ಗುರುತಿಸಲಾಗಿದ್ದು, ವಯನಾಡ್ ಜಿಲ್ಲೆಯ ಸುಲ್ತಾನ್ ಬತ್ತೇರಿಯ ಬೀನಾಚಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿದೆ. ವಿದ್ಯಾರ್ಥಿಯನ್ನು ಖಾಸಗಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ ಪರಿಸ್ಥಿತಿ ಗಂಭೀರವಾಗಿದೆ.
ರೆಹಾನ್‍ಗೆ ಆಂಟಿವೆನಿನ್ ನೀಡಲಾಗಿದೆ, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಮಧ್ಯವಾರ್ಷಿಕ ಪರೀಕ್ಷೆ ನಂತರ ವಿದ್ಯಾರ್ಥಿ ಶಾಲೆಯಿಂದ ಮನೆಗೆ ಬರುವಾಗ ಹಾವು ಕಚ್ಚಿದೆ. ಮನೆಗೆ ಬಂದ ತಕ್ಷಣ ವಿದ್ಯಾರ್ಥಿ ಘಟನೆ ಕುರಿತು ನಮಗೆ ತಿಳಿಸಿದ. ನಂತರ ನಾವು ಹತ್ತಿರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದೆವು. ಅವರು ಪ್ರಥಮ ಚಿಕಿತ್ಸೆ ನೀಡಿದರು. ನಂತರ ಹೆಚ್ಚಿನ ಚಿಕಿತ್ಸೆಗೆ ಖಾಸಗಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವಿದ್ಯಾರ್ಥಿಯ ಪೋಷಕರು ಮಾಹಿತಿ ನೀಡಿದ್ದಾರೆ.
ಶಾಲೆ ಆವರಣದಲ್ಲಿ ಕಸ ಬೆಳೆದಿದ್ದರಿಂದ ಬಾಲಕನಿಗೆ ಹಾವನ್ನು ಗುರುತಿಸಲು ಸಾಧ್ಯವಾಗಿಲ್ಲ. ಹೀಗಾಗಿ ಕೂಡಲೇ ಶಾಲಾ ಆವರಣವನ್ನು ಸ್ವಚ್ಛಗೊಳಿಸಿ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಶಾಲಾ ಆಡಳಿತ ಮಂಡಳಿಗೆ ಸೂಚಿಸಿದ್ದಾರೆ.
ಕಳೆದ ತಿಂಗಳು ಸರ್ಕಾರಿ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿಯನ್ನು ತರಗತಿಯಲ್ಲೇ ಹಾವು ಕಚ್ಚಿದ್ದ ಘಟನೆ ಸುಲ್ತಾನ್ ಬತ್ತೇರಿಯ ಶೆಹಲಾ ಶೆರಿನ್ ನಲ್ಲಿ ನಡೆದಿತ್ತು. ಹಾವು ಕಚ್ಚಿದ ಕುರಿತು ವಿದ್ಯಾರ್ಥಿನಿ ಶಿಕ್ಷಕಿಗೆ ತಿಳಿಸಿದರೂ ಬಾಲಕಿಯನ್ನು ಗದರಿಸಿ ಸುಮ್ಮನಿರಿಸಿದ್ದರು. ಹೀಗಾಗಿ ಹಾವು ಕಚ್ಚಿದ ಕೆಲವೇ ಗಂಟೆಗಳಲ್ಲಿ ವಿದ್ಯಾರ್ಥಿ ಸಾವನ್ನಪ್ಪಿದ್ದಳು. ತರಗತಿ ಕೊಠಡಿಯಲ್ಲಿ ಉಂಟಾಗಿದ್ದ ಸಣ್ಣ ಕಿಂಡಿಯಿಂದ ಹಾವು ನುಸುಳಿತ್ತು. ಈ ಕಿಂಡಿಯ ಪಕ್ಕದಲ್ಲೇ ಕುಳಿತಿದ್ದ ವಿದ್ಯಾರ್ಥಿನಿಯನ್ನು ಹಾವು ಕಚ್ಚಿತ್ತು. ಘಟನೆ ನಂತರ ಶಾಲಾ ಆಡಳಿತ ಮಂಡಳಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತೀವ್ರ ಪ್ರತಿಭಟನೆ ನಡೆಸಲಾಗಿತ್ತು.