ಮೈಸೂರು: ಮದುವೆಯಾಗು ಎಂದು ಯುವಕನೊಬ್ಬ ಕಾಟ ಕೊಡುತ್ತಿದ್ದನೆಂದು ಪ್ರತಿಭಾವಂತ ವಿದ್ಯಾರ್ಥಿನಿ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ನಂಜನಗೂಡು ತಾಲೂಕಿನ ಚನ್ನಪಟ್ಟಣ ಗ್ರಾಮದಲ್ಲಿ ನಡೆದಿದೆ.
ಪವಿತ್ರಾ(18) ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಪವಿತ್ರಾ ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಪಿಯುಸಿ ಓದಿದ್ದು, ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಳು.
ಅದೇ ಗ್ರಾಮದ ಯುವಕ ಸುರೇಶ್ ಎಂಬಾತ ಪವಿತ್ರಾಳಿಗೆ ಕಿರುಕುಳ ನೀಡುತ್ತಿದ್ದನು ಎಂಬ ಆರೋಪ ಕೇಳಿಬಂದಿದೆ. ಹಾಗಾಗಿ ಪವಿತ್ರಾ ಮನನೊಂದು ಯಾರೂ ಇಲ್ಲದಾಗ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎನ್ನಲಾಗಿದೆ.
ಸುಟ್ಟಗಾಯಗಳಾಗಿದ್ದ ಪವಿತ್ರಾಳನ್ನು ಆಕೆಯ ಪೋಷಕರು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಸಾವಿಗೂ ಮುನ್ನ ಪವಿತ್ರಾ ಸುರೇಶ್ ಕಿರುಕುಳ ನೀಡುತ್ತಿದ್ದ ವಿಚಾರವನ್ನು ಪೋಷಕರ ಜೊತೆ ತಿಳಿಸಿದ್ದಳು. ಈ ಕುರಿತು ಹುಲ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.