ಬೆಂಗಳೂರು: ಸೀನಿಯರ್‌ಗಳ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಗೌರಿಬಿದನೂರು ಮೂಲದ ಗಗನ್ ಕಳೆದ ಮೂರು ತಿಂಗಳ ಹಿಂದೆಯಷ್ಟೇ ಬೆಂಗಳೂರಿನ ಯಲಹಂಕ ಬಳಿಯ ಖಾಸಗಿ ಕ್ಯಾಂಪಸ್‍ನಲ್ಲಿ ಬಿಎಸ್ಸಿ ಆಗ್ರಿಕಲ್ಚರಲ್ ಕೋರ್ಸ್ ಗೆ ಸೇರಿಕೊಂಡಿದ್ದನು. ಕ್ಯಾಂಪಸ್‍ನಲ್ಲೇ ಹಾಸ್ಟೆಲ್ ವ್ಯವಸ್ಥೆ ಇರುವ ಕಾರಣ, ಗಗನ್ ಅಲ್ಲಿಯೇ ಉಳಿದುಕೊಂಡಿದ್ದನು. ಪ್ರಾರಂಭದ ದಿನದಿಂದಲೂ ಅಲ್ಲಿನ ಸೀನಿಯರ್ಸ್ ಗಳಿಗೆ ಗಗನ್ ಸ್ನಾನಕ್ಕೆ ನೀರು ರೆಡಿ ಮಾಡುವುದು, ಸೀನಿಯರ್‌ಗಳು ಕಂಡ ತಕ್ಷಣ ಎದ್ದು ಕೈಕಟ್ಟಿ ನಿಲ್ಲುವುದು, ಅವರಿಗೆ ತಿಂಡಿ, ಸಿಗರೇಟು ತರುವುದು ಸೇರಿದಂತೆ ಪ್ರತಿನಿತ್ಯ ಮಾನಸಿಕ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.
ಇದರಿಂದ ಬೇಸತ್ತ ವಿದ್ಯಾರ್ಥಿ ಗಗನ್ ನನಗೆ ಕಾಲೇಜು ಬೇಡ, ನಾನು ವಾಪಾಸ್ ಹೋಗುತ್ತೇನೆ ಎಂದು ಕಣ್ಣೀರು ಹಾಕಿದ್ದನು. ಪೋಷಕರು ಈ ಸಂಬಂಧ ಕಾಲೇಜು ಆಡಳಿತ ಮಂಡಳಿಯಲ್ಲಿ ಬಳಿ ಮಾತನಾಡೋಣ ಎಂದರೆ ಗಗನ್ ಬೇಡ ಎಂದು ಹೇಳುತ್ತಿದ್ದನು. ಮಂಗಳವಾರ ಸಂಜೆ ಕ್ಲಾಸ್ ಮುಗಿಸಿ ಹೊರ ಬಂದ ಗಗನ್ ರಾತ್ರಿಯಾದರೂ ವಾಪಸ್ ಬಂದಿರಲಿಲ್ಲ. ತಡರಾತ್ರಿವರೆಗೂ ಹುಡುಕಾಟ ನಡೆಸಿದ ಪೋಷಕರು ಕೊನೆಗೆ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದರ ಬೆನ್ನೆಲ್ಲೇ ಕ್ಯಾಂಪಸ್‍ನಲ್ಲಿ ಹಾದು ಹೋಗುವ ರೈಲ್ವೇ ಹಳಿ ಮೇಲೆ ಗಗನ್ ಆತ್ಮಹತ್ಯೆ ಮಾಡಿಕೊಂಡಿದ್ದನು.
ಗಗನ್ ಸಾವಿಗೆ ಸೀನಿಯರ್‌ಗಳ ಕಿರುಕುಳವೇ ಕಾರಣ ಎಂದು ಪೋಷಕರು ಆರೋಪಿಸುತ್ತಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಅಮೃತಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.