ಪಾಸ್ ಆಗದಿದ್ದಕ್ಕೆ 300 ವಿದ್ಯಾರ್ಥಿಗಳ ಅಂಕಪಟ್ಟಿ ಕದ್ದಿದ್ದ ಅಪೂರ್ಣ ಪದವೀಧರ

Public TV
3 Min Read
Ranichannamma University copy

ಬೆಳಗಾವಿ : ಹಲವು ಬಾರಿ ಪರೀಕ್ಷೆ ಬರೆದರೂ ಪದವಿ ಪಾಸಾಗದೆ ಹತಾಶೆಗೊಂಡ ಯುವಕನೊಬ್ಬ ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿಯಲ್ಲಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಕೋಣೆಗೆ ನುಗ್ಗಿ 300 ವಿದ್ಯಾರ್ಥಿಗಳ ಅಂಕಪಟ್ಟಿ ಮತ್ತು ಸ್ಕಾನರ್ ಕದ್ದು ಪರಾರಿಯಾಗುವಾಗ ಸಿಕ್ಕಿಹಾಕೊಂಡಿರುವ ಘಟನೆ ರವಿವಾರ ರಾತ್ರಿ ನಡೆದಿದೆ.

ಬಸಪ್ಪ ಶಿವಲಿಂಗಪ್ಪ ಹೊನವಾಡ (23) ಕಳ್ಳತನ ಆರೋಪದಡಿ ಬಂಧಿಸಿರುವ ಯುವಕ. ಈತ ಮೂಲತಃ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ತುಬಚಿ ಗ್ರಾಮದ ನಿವಾಸಿ. ಜಮಖಂಡಿ ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ಬಿ.ಕಾಂ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡಿದ್ದಾನೆ.

ಸೆಮಿಸ್ಟರನ ಕೆಲ ವಿಷಯಗಳಲ್ಲಿ ಅನುತ್ತಿರ್ಣನಾಗಿದ್ದ. ಅದಕ್ಕಾಗಿ ಹಲವು ಬಾರಿ ಮರು ಪರೀಕ್ಷೆ ಬರೆದರೂ ಪಾಸಾಗಿಲ್ಲ. ಇದರಿಂದಾಗಿ ಮತ್ತಷ್ಟು ಕಂಗೆಟ್ಟ ಬಸಪ್ಪ ಶುಕ್ರವಾರ ರಾತ್ರಿ ಬೆಳಗಾವಿಗೆ ಬಂದು ಕಾನೂನು ಬಾಹಿರವಾಗಿ ವಿಶ್ವವಿದ್ಯಾಲಯ ವಿದ್ಯಾರ್ಥಿ ನಿಲಯದಲ್ಲಿರುವ ಅತನ ಗೆಳೆಯರ ಕೋಣೆಯಲ್ಲಿ ಆಶ್ರಯ ಪಡೆದಿದ್ದಾನೆ.

Ranichannamma University

ನಂತರ ಶನಿವಾರ ಆತನ ಗೆಳೆಯರೊಂದಿಗೆ ಸೇರಿಕೊಂಡು ರೆಜಿಸ್ಟಾರ ಆಫೀಸಗೆ ತೆರಳಿ ನಾನು ಹಲವು ಬಾರಿ ಪರೀಕ್ಷೆ ಬರೆದರೂ ನೀವು ನನ್ನನ್ನು ಪಾಸ್ ಮಾಡುತ್ತಿಲ್ಲ ಎಂದು ಮೌಲ್ಯಮಾಪನ ಕುಲಸಚಿವರೊಂದಿಗೆ ಜಗಳ ಮಾಡಿದ್ದ ಎಂದು ತಿಳಿದು ಬಂದಿದೆ. ಇದಕ್ಕೆ ಕುಲಸಚಿವರು ಮರು ಮೌಲ್ಯಮಾಪನಕ್ಕೆ ಹಾಕುವಂತೆ ಸಲಹೆ ನೀಡಿದ್ದಾರೆ. ಆದರೆ ಅಷ್ಟಕ್ಕೆ ಸುಮ್ಮನಾಗದ ಆತ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ.

ಹೇಗಾದರೂ ಮಾಡಿ ಪದವಿ ಪಾಸಾದ ಅಂಕಪಟ್ಟಿ ಪಡೆಯಬೇಕು ಎಂಬ ಹಠದಿಂದ ರೆಜಿಸ್ಟಾರ ಕಚೇರಿಯಲ್ಲಿ ಸುತ್ತಾಡಿ ಎಲ್ಲ ಮಾಹಿತಿ ಕಲೆ ಹಾಕಿ, ರಾತ್ರಿ 1.30 ಗಂಟೆಗೆ ಶೌಚಾಲಯದ ಮುಖಾಂತರ ಕಚೇರಿ ಒಳಗಡೆ ಹೋಗಿ 3 ಗಂಟೆಗಳ ಕಾಲ ಒಳಗಡೆ ಇದ್ದು 300 ಪ್ರಮಾಣ ಪತ್ರ ಹಾಗೂ ಸ್ಕಾನರ್ ಗಳನ್ನು ತೆಗೆದುಕೊಂಡು ಪರಾರಿಯಾಗುವ ಸಮಯದಲ್ಲಿ ಅಲ್ಲಿನ ಸೆಕ್ಯುರಿಟಿ ಗಾರ್ಡ್ ಕಣ್ಣಿಗೆ ಬಿದ್ದಿದ್ದಾನೆ. ತಕ್ಷಣ ಪೋಲಿಸರಿಗೆ ಮಾಹಿತಿ ನೀಡಿದಾಗ ಪೋಲಿಸರು ಆತನನ್ನು ವಶಕ್ಕೆ ಪಡೆದಿದ್ದರು.

ಕಳ್ಳನಿಗೆ ಆಶ್ರಯ ನೀಡಿದ ವಿದ್ಯಾರ್ಥಿ ಒಕ್ಕೂಟ ಪ್ರತಿನಿಧಿಗಳು?
ಕಳ್ಳತನ ಆರೋಪಿ ಬಸಪ್ಪ ಶುಕ್ರವಾರ ವಿಶ್ವವಿದ್ಯಾಲಯಕ್ಕೆ ಬಂದು ಕಾನೂನು ಬಾಹಿರವಾಗಿ ವಿದ್ಯಾರ್ಥಿ ನಿಲಯದಲ್ಲಿ ಆಶ್ರಯ ಪಡೆದಿದ್ದಾದರೂ ಹೇಗೆ? ಎಂಬ ಪ್ರಶ್ನೆ ವಿಶ್ವವಿದ್ಯಾಲಯದಲ್ಲಿ ಚರ್ಚೆಗೆ ಎಡೆ ಮಾಡಿದೆ. ಯಾಕೆಂದರೆ ಆತ ಈ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿ ಕೂಡಾ ಅಲ್ಲಾ. ಹಾಗಿದ್ದಲ್ಲಿ ಎರಡು ದಿನಗಳ ಕಾಲ ಆತ ಹೇಗೆ ಹಾಸ್ಟೆಲ್ ನಲ್ಲಿ ಇದ್ದು ಮಧ್ಯರಾತ್ರಿ ಕುಲಸಚಿವರ ಕಚೇರಿಗೆ ನುಗ್ಗಿರುವ ವಿಚಾರ ಹಲವು ಅನುಮಾನಗಳನ್ನು ಸೃಷ್ಟಿಸಿದೆ.

ಒಂದು ಆತನಿಗೆ ಯಾರು ಸಹಾಯ ಮಾಡಿಲ್ಲ ಅನ್ನೋದಾದ್ರೆ ಆತ ಅಷ್ಟೊಂದು ಸರಳವಾಗಿ ರೆಜಿಸ್ಟಾರ್ ಕಚೇರಿಗೆ ನುಗ್ಗಿ ಬೀಗದ ಕೈಗಳನ್ನು ತೆಗೆದುಕೊಂಡು ಕುಲಸಚಿವರ ಕೊಠಡಿಯನ್ನು ಶೋಧಿಸಿದ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.

Ranichannamma University 1

ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಕತಿ ಪೋಲಿಸರು ಕಳ್ಳತನ ಸುದ್ದಿ ತಿಳಿಯುತ್ತಿದ್ದಂತೆ ಪಿಐ ಶ್ರೀಶೈಲ ಕೌಜಲಗಿ ಹಾಗೂ ಸಿಬ್ಬಂದಿ ಆರೋಪಿಯನ್ನು ಬಂಧಿಸಿ ಆತನ ಕದಿದ್ದ ಎರಡು ಸ್ಕಾನರ್, 300 ವಿದ್ಯಾರ್ಥಿಗಳ ಅಂಕಪಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯ ತನಿಖೆ ನಡೆಸಿ ಹಿಂಡಲಗಾ ಜೈಲಿಗೆ ಕಳಿಸಲಾಗಿದೆ.

ಗೋಮಾಳದಂತಾದ ವಿಧ್ಯಾರ್ಥಿ ನಿಲಯ:
ವಿಶ್ವವಿದ್ಯಾಲಯ ವಿದ್ಯಾರ್ಥಿ ನಿಲಯಕ್ಕೆ ಹಳೇ ವಿದ್ಯಾರ್ಥಿಗಳು ಅಷ್ಟೇ ಅಲ್ಲದೆ ಅವರ ಸ್ನೇಹಿತರು, ಸಂಬಂಧಿಕರು ಮತ್ತು ಜಿಲ್ಲೆಯ ಸ್ನಾತಕೋತ್ತರ ಕೇಂದ್ರಗಳ ವಿಧ್ಯಾರ್ಥಿಗಳಿಗೆ ಅಕ್ರಮವಾಗಿ ನೆಲೆಸುವ ಆಶ್ರಮವಾಗಿದೆ. ಇದಕ್ಕೆ ಪ್ರತ್ಯಕ್ಷ ಉದಾಹರಣೆ ಈಗ ನಡೆದಿರುವ ಘಟನೆ.

ಇಂತಹ ವಿದ್ಯಾರ್ಥಿಗಳು ವಸತಿ ನಿಲಯದಲ್ಲಿ ಆಶ್ರಯ ಪಡೆದು ಕಳ್ಳತನ ಮಾಡಿದರೂ ಹಾಸ್ಟೆಲ್ ವಾರ್ಡನ್, ಆಶ್ರಯ ನೀಡಿರುವ ವಿದ್ಯಾರ್ಥಿ ಒಕ್ಕೂಟದ ಪ್ರತಿನಿಧಿಗಳ ಮೇಲೆ ಯಾವ ಕ್ರಮ ಕೈಗೊಂಡಿಲ್ಲ. ಇದರಿಂದ ವಿಶ್ವವಿದ್ಯಾಲಯ ಆಡಳಿತ ಅವ್ಯವಸ್ಥೆ ಹಾಗೂ ಬೇಜವಾಬ್ದಾರಿ ಸ್ಪಷ್ಟವಾಗಿ ಕಾಣುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *