ರಾಯಚೂರು: ನಗರದ ಎಂಜಿನಿಯರಿಂಗ್ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು ಪ್ರಕರಣದ ಹಿನ್ನೆಲೆಯಲ್ಲಿ ಗುರುವಾರ ನಡೆದ ಪ್ರತಿಭಟನೆಯಲ್ಲಿ ಕಲ್ಲು ಚಪ್ಪಲಿ ತೂರಾಟ ನಡೆದಿದ್ದರಿಂದ 60 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಪೊಲೀಸರ ಮೇಲೆ ಚಪ್ಪಲಿ ತೂರಿದ್ದ ಶಿವರಾಜ್ ಎಂಬಾತನನ್ನು ಬಂಧಿಸಲಾಗಿದೆ. ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ವಿದ್ಯಾರ್ಥಿನಿಯ ಸಾವಿಗೆ ನ್ಯಾಯ ಸಿಗಬೇಕು ಎಂದು ಗುರುವಾರ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.
Advertisement
Advertisement
ಈ ವೇಳೆ ಕಿಡಿಗೇಡಿಗಳು ಜಿಲ್ಲಾಧಿಕಾರಿ ಕಚೇರಿಯ ಮುಂದೆ ಕಲ್ಲು, ಚಪ್ಪಲಿ ಮತ್ತು ನೀರಿನ ಬಾಟಲ್ ತೂರಾಟ ನಡೆಸಿದ್ದರು. ಅಷ್ಟೇ ಅಲ್ಲದೆ ಜಿಲ್ಲಾಧಿಕಾರಿ ಕಚೇರಿಯೊಳಗೆ ನುಗ್ಗಲು ಯತ್ನಿಸಿದಾಗ ಲಾಠಿ ಪ್ರಹಾರ ನಡೆದಿತ್ತು. ಈ ಘಟನೆ ಹಿನ್ನೆಲೆ ಸದರ ಬಜಾರ ಠಾಣೆ ಪೊಲೀಸರು ಶಿವರಾಜ್ ಸೇರಿ 60 ಜನರ ವಿರುದ್ಧ ಪ್ರಕರಣ ದಾಖಲಿಕೊಂಡಿದ್ದಾರೆ.
Advertisement
ವಿದ್ಯಾರ್ಥಿನಿ ಸಾವು ಪ್ರಕರಣದ ತನಿಖೆಯನ್ನ ಚುರುಕುಗೊಳಿಸಿರುವ ಸಿಐಡಿ ಅಧಿಕಾರಿಗಳು ಇಂದು ಸಹ ನಗರದಲ್ಲಿ ಪರಿಶೀಲನೆ ಮುಂದುವರಿಸಲಿದ್ದಾರೆ. ಮೃತ ವಿದ್ಯಾರ್ಥಿನಿ ಓದುತ್ತಿದ್ದ ನಗರದ ನವೋದಯ ಎಂಜಿನಿಯರಿಂಗ್ ಕಾಲೇಜಿಗೆ ಅಧಿಕಾರಿಗಳು ಇಂದು ಭೇಟಿ ಕೊಡಲಿದ್ದಾರೆ.